Advertisement
ಆಕಾಂಕ್ಷಿಗಳು ತಮ್ಮದೇ ನಿಟ್ಟಿನ ತಯಾರಿಗೆ ಮುಂದಾಗುತ್ತಿದ್ದಾರೆ. ಒಂದು ಕಡೆ ರಾಜ್ಯ ಸಚಿವ ಸಂಪುಟದ ವಿಸ್ತರಣೆಯೋ, ಪುನರಚನೆಯೋ ಎಂಬ ಗೊಂದಲದ ಸ್ಥಿತಿ, ಇನ್ನೊಂದು ಕಡೆ ವಿಧಾನಸಭೆಯಿಂದ ವಿಧಾನ ಪರಿಷತ್ತುಗೆ ಆಯ್ಕೆ ಪ್ರಕ್ರಿಯೆ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗಳ ನಡುವೆ ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರ ಪಾಲಿಕೆಯ ಮಹಾಪೌರ-ಉಪ ಮಹಾಪೌರ ಆಯ್ಕೆಗೆ ಮೇ 28ರಂದು ಚುನಾವಣೆ ನಿಗದಿಪಡಿಸಲಾಗಿದೆ.
Related Articles
Advertisement
ಇನ್ನೇನು ಪಾಲಿಕೆಗೆ ಆಡಳಿತ ಮಂಡಳಿ ಇಲ್ಲದ ಸುಮಾರು ಎರಡು ವರ್ಷಗಳ ವನವಾಸ ಅಂತ್ಯವಾಗುತ್ತಿದೆ ಎಂಬ ನಿರೀಕ್ಷೆ ಹುಸಿಯಾಯಿತು. ಆಯ್ಕೆಯಾದರೂ ಅಧಿಕಾರ ಸ್ವೀಕಾರ ಭಾಗ್ಯ ನೂತನ ಸದಸ್ಯರಿಗಿಲ್ಲವಾಗಿತ್ತು. ಆಯ್ಕೆಯಾಗಿ ಏಳು ತಿಂಗಳು ಕಳೆದರೂ ಸದಸ್ಯತ್ವ ಅಧಿಕಾರ ಅನುಭವಿಸದೆ, ವಾರ್ಡ್ ಜನರ ಸಮಸ್ಯೆಗಳಿಗೆ ಸಮರ್ಪಕ ರೀತಿಯಲ್ಲಿ ಸ್ಪಂದಿಸಲಾಗದೆ ನೂತನ ಸದಸ್ಯರು ಸಂಕಷ್ಟ ಪಡುವಂತಾಗಿತ್ತು.
ಹು.ಧಾ. ಮಹಾನಗರ ಪಾಲಿಕೆಯ 82 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ 39 ಸ್ಥಾನಗಳನ್ನು ಗೆದ್ದುಕೊಂಡರೆ, ಪ್ರಮುಖ ವಿಪಕ್ಷ ಕಾಂಗ್ರೆಸ್ 33, ಜೆಡಿಎಸ್ 1, ಎಐಎಂಐಎಂ ಪಕ್ಷ 3, ಪಕ್ಷೇತರರು 6 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಸರಳ ಬಹುಮತಕ್ಕೆ 42 ಸದಸ್ಯ ಬಲ ಅಗತ್ಯವಾಗಿದೆ. 39 ಸ್ಥಾನ ಗೆದ್ದಿರುವ ಬಿಜೆಪಿಗೆ ಸರಳ ಬಹುಮತಕ್ಕೆ ಯಾವುದೇ ತೊಂದರೆ ಇಲ್ಲವಾಗಿದೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದು, ಬಿಜೆಪಿ ಬಲ 40 ಕ್ಕೇರಿದೆ.
ಜತೆಗೆ ಒಬ್ಬರು ಸಂಸದರು, ಮೂವರು ಶಾಸಕರು, ಇಬ್ಬರು ವಿಧಾನ ಪರಿಷತ್ತು ಸದಸ್ಯರು ಬಿಜೆಪಿಯವರಾಗಿದ್ದಾರೆ. ಅಲ್ಲಿಗೆ ಬಿಜೆಪಿ ಸಂಖ್ಯಾಬಲ 46 ಆಗಲಿದೆ. ಇತ್ತೀಚೆಗಿನ ರಾಜಕೀಯ ಬೆಳವಣಿಗೆಯಲ್ಲಿ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರಲು ಮುಂದಾಗಿದ್ದು, ಅವರು ಸಹ ಬಿಜೆಪಿ ಅಭ್ಯರ್ಥಿ ಬೆಂಬಲಿಸಲು ಮುಂದಾದರೆ ಬಿಜೆಪಿ ಸಂಖ್ಯಾಬಲ 47 ಆಗಲಿದೆ. ಜತೆಗೆ ಒಂದಿಬ್ಬರು ಪಕ್ಷೇತರ ಸದಸ್ಯರು ಸಹ ಬಿಜೆಪಿಗೆ ಸೇರ³ಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಪಕ್ಷ ಕಾಂಗ್ರೆಸ್ 33 ಸದಸ್ಯ ಬಲ ಹೊಂದಿದ್ದು, ಒಬ್ಬರು ಶಾಸಕರಿದ್ದು, ಅಲ್ಲಿಗೆ ಸಂಖ್ಯಾ ಬಲ 34 ಆಗಲಿದೆ. ಒಂದಿಬ್ಬರು ಪಕ್ಷೇತರರು ಕಾಂಗ್ರೆಸ್ ಕಡೆ ವಾಲುವ ಸಾಧ್ಯತೆ ಇದೆ. ಒಂದು ವೇಳೆ ಮೂವರು ಸದಸ್ಯ ಬಲದ ಎಐಎಂಐಎಂನ ಮೂವರು ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದರೂ ಸರಳ ಬಹುತಕ್ಕೆ ಸಂಖ್ಯಾಬಲ ಸರಿ ಹೋಗದು.
ಬಿಜೆಪಿಯಲ್ಲಿ 8 ಜನ ಆಕಾಂಕ್ಷಿಗಳು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ ಸುಮಾರು ಒಂದೂವರೆ ದಶಕದಿಂದ ಅಧಿಕಾರ ಹಿಡಿದಿರುವ ಬಿಜೆಪಿ, ಇದೀಗ ಮತ್ತೂಮ್ಮೆ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಪಾಲಿಕೆ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನಗಳಿಗೆ 2018ರಲ್ಲಿ ಮಹಾನಗರ ಪಾಲಿಕೆಯ 21ನೇ ಅವಧಿಗೆ ನಿಗದಿಪಡಿಸಿದ ಮೀಸಲಾತಿಯನ್ನೇ ನಿಗದಿಪಡಿಸಿ ಮಹಾಪೌರ ಸ್ಥಾನ ಸಾಮಾನ್ಯ, ಉಪ ಮಹಾಪೌರ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ಮೀಸಲಾತಿ ಸಾಮಾನ್ಯ ಬಂದಿರುವುದರಿಂದ ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆಯಲ್ಲಿಯೂ ಅಧಿಕವಾಗಲಿದೆ. ಮೇಲ್ನೋಟಕ್ಕೆ ಬಿಜೆಪಿಯಲ್ಲಿ ಸುಮಾರು 8 ಜನರು ಮಹಾಪೌರ ಸ್ಥಾನಕ್ಕೆ ತಮ್ಮದೇಯಾದ ಯತ್ನಕ್ಕೆ ಮುಂದಾಗಿದ್ದಾರೆ.
ಪ್ರಸ್ತುತ ಬಿಜೆಪಿಯಲ್ಲಿ ಮಹಾಪೌರ ಸ್ಥಾನಕ್ಕೆ ಮಾಜಿ ಮಹಾಪೌರ ವೀರಣ್ಣ ಸವಡಿ, ವೀರೇಶ ಅಂಚಟಗೇರಿ, ಶಿವು ಮೆಣಸಿನಕಾಯಿ, ರಾಮಣ್ಣ ಬಡಿಗೇರ, ವಿಜಯಾನಂದ ಶೆಟ್ಟಿ, ಶಿವು ಹಿರೇಮಠ, ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ ಅವರು ತಮ್ಮದೇಯಾದ ನಿಟ್ಟಿನಲ್ಲಿ ಬೇಡಿಕೆ ಸಲ್ಲಿಕೆ, ನಾಯಕರ ಮನವೊಲಿಕೆ, ಒತ್ತಡದ ಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ವೀರಣ್ಣ ಸವಡಿ ಈಗಾಗಲೇ ಮಹಾಪೌರರಾಗಿದ್ದರೂ, ಆಡಳಿತದ ಅನುಭವ, ಕಳೆದ ಸುಮಾರು ಮೂರು ವರ್ಷಗಳಿಂದ ಪಾಲಿಕೆಯಲ್ಲಿ ಆಡಳಿತ ಮಂಡಳಿ ಇಲ್ಲದ್ದರಿಂದ ಆಡಳಿತದ ಸಮರ್ಪಕ ನಿರ್ವಹಣೆ, ರಾಜ್ಯ ಸರಕಾರದೊಂದಿಗೆ ಸಂವಹನ, ಪಕ್ಷದ ನಾಯಕರೊಂದಿಗೆ ನೇರ ಸಂಪರ್ಕ, ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನ ಇನ್ನಿತರೆ ಅಂಶಗಳಡಿ ಅನುಭವಿಗಳ ಅವಶ್ಯಕತೆ ಇದ್ದು, ಈ ಎಲ್ಲ ಮಾನದಂಡಗಳಡಿ ವೀರಣ್ಣ ಸವಡಿ ಅವರು ತಮಗೆ ಮತ್ತೂಂದು ಅವಕಾಶ ನೀಡುವಂತೆ ಪಕ್ಷದ ಎಲ್ಲ ನಾಯಕರಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ನುಳಿದ ಏಳು ಜನ ಆಕಾಂಕ್ಷಿಗಳು ತಮಗೊಂದು ಅವಕಾಶ ನೀಡಬೇಕು. ಮೀಸಲಾತಿ ಸಾಮಾನ್ಯ ಬಂದಿರುವುದರಿಂದ ನಮಗೆ ಅವಕಾಶ ಇದ್ದು, ಮುಂದೆ ಮೀಸಲಾತಿ ಬದಲಾದರೆ ನಮಗೆ ಆ ಅವಕಾಶ ದೊರೆಯುದಿಲ್ಲ ಎಂದು ತಮ್ಮದೇ ಒತ್ತಡ ತರುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಮಹಾಪೌರ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿರುವುದರಿಂದ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನೇ ಮಹಾಪೌರರನ್ನಾಗಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಗಂಭೀರ ಚಿಂತನೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲಿ ಆಕಾಂಕ್ಷಿಗಳು ಎಷ್ಟೇ ಇದ್ದರೂ, ಏನೇ ಒತ್ತಡ ತಂತ್ರಕ್ಕೆ ಮುಂದಾದರೂ, ಪಕ್ಷದ ನಾಯಕರು ಮಹಾಪೌರ- ಉಪಮಹಾಪೌರ ಚುನಾವಣೆಯ ಒಂದು ದಿನ ಮೊದಲು ಕೋರ್ ಕಮಿಟಿ ಸಭೆ ನಡೆಸಿ ಬಹುತೇಕ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ, ಚುನಾವಣೆ ದಿನ ನಾಮಪತ್ರ ಸಲ್ಲಿಕೆಗೆ ಕೆಲ ಹೊತ್ತಿನ ಮೊದಲು ಅದನ್ನು ಬಹಿರಂಗ ಪಡಿಸುವ ಪರಿಪಾಠವನ್ನು ಕೆಲ ವರ್ಷಗಳಿಂದ ಕೈಗೊಳ್ಳುತ್ತ ಬಂದಿದ್ದು, ಈ ಬಾರಿಯೂ ಅದನ್ನೇ ಮುಂದುವರಿಸುವ ಸಾಧ್ಯತೆ ಇಲ್ಲದಿಲ್ಲ.
ಸರಿ ಸುಮಾರು ಮೂರು ವರ್ಷಗಳ ನಂತರ ಅಧಿಕಾರ ಹಿಡಿಯಲಿರುವ ಆಡಳಿತ ಮಂಡಳಿಯಲ್ಲಿ ಬಿಜೆಪಿಯಿಂದ ಮಹಾಪೌರ ಗೌನ್ ಧರಿಸುವ ಭಾಗ್ಯ ಯಾರಿಗೆ ಬರಲಿದೆ ಎಂಬುದನ್ನು ಕಾದು ನೋಡಬೇಕು.
28ರಂದು ಮೇಯರ್-ಉಪ ಮೇಯರ್ ಚುನಾವಣೆ
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 21ನೇ ಅವ ಧಿಯ ಮಹಾಪೌರ ಹಾಗೂ ಉಪ ಮಹಾಪೌರ ಸ್ಥಾನಗಳಿಗೆ ಮೇ 28ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಧಿಕಾರಿಗಳೂ ಆಗಿರುವ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಹಾಪೌರ ಸ್ಥಾನವು ಸಾಮಾನ್ಯ ವರ್ಗ, ಉಪ ಮಹಾಪೌರ ಸ್ಥಾನವು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿಡಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇ 28ರಂದು ಚುನಾವಣೆ ನಡೆಯಲಿದೆ. ಅಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮಧ್ಯಾಹ್ನ 3:00 ಗಂಟೆಗೆ ಸಭೆ ಆರಂಭವಾಗುವುದು. ನಾಮಪತ್ರಗಳ ಪರಿಶೀಲನೆ ನಂತರ ಉಮೇದುವಾರರ ಘೋಷಣೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗುವುದು. ಅಗತ್ಯವಿದ್ದರೆ ಕೈ ಎತ್ತುವ ಮೂಲಕ ಮತದಾನ ನಡೆಸಿ ಮಹಾಪೌರ ಹಾಗೂ ಉಪ ಮಹಾಪೌರರನ್ನು ಚುನಾಯಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.