Advertisement

ನಾಲ್ವರು ಭ್ರಷ್ಟರಿಗೆ ಎಸಿಬಿ ಬಿಸಿ

12:30 AM Mar 20, 2019 | Team Udayavani |

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಾಯಕ ಅಧಿಕಾರಿ ಸೇರಿ ನಾಲ್ವರು ಸರ್ಕಾರಿ ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳು ಸೇರಿ ರಾಜ್ಯದ 10 ಸ್ಥಳಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮ ಆಸ್ತಿ  ಕುರಿತ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಿಬಿಎಂಪಿ ಜೆ.ಬಿ ನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ಮಂಜುನಾಥ್‌ ಎಸ್‌.ಬಿ., ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರನಿಬಂಧಕ ಬಿ.ಸಿ ಸತೀಶ್‌, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ  ನಿಗಮ ವಿಜಯಪುರ ಉಪನಿರ್ದೇಶಕ ಶರದ್‌ ಗಂಗಪ್ಪ ಇಜ್ರಿ, ಮುಂಡರಗಿ ಕೃಷಿ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ್‌ಗೌಡ ಕುದರಿಮೋಟಿ ಅಕ್ರಮ ಆಸ್ತಿಗಳಿಕೆ ಆರೋಪದ ಉರುಳಿನಲ್ಲಿ ಸಿಲುಕಿಕೊಂಡವರು.

Advertisement

ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮಂಜುನಾಥ್‌ ಅವರ ಬೆಂಗಳೂರಿನಲ್ಲಿರುವ ನಿವಾಸ, ಕಚೇರಿ, ಚನ್ನರಾಯಪಟ್ಟಣದಲ್ಲಿರುವ ಸಂಬಂಧಿಕರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸಹಕಾರ ಇಲಾಖೆ ಅಧಿಕಾರಿ ಬಿ.ಸಿ ಸತೀಶ್‌ ಹಾಗೂ ಅವರ ಸಂಬಂಧಿಕರು ವಾಸವಿರುವ ಬೆಂಗಳೂರಿನ ನಿವಾಸಗಳು ಅವರ ಕಚೇರಿ, ಕೆಆರ್‌ಐಡಿಎಲ್‌ ಉಪನಿರ್ದೇಶಕ ಶರದ್‌ ಗಂಗಪ್ಪ ಇಜ್ರಿ ಅವರ ವಿಜಯಪುರದ ಕಚೇರಿ ಹಾಗೂ ನಿವಾಸಗಳು, ಕೃಷಿ ಅಧಿಕಾರಿ ಪ್ರಕಾಶ್‌ ಗೌಡ ಅವರ ಮುಂಡರಗಿ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ನಾಲ್ವರು ಆರೋಪಿತ ಅಧಿಕಾರಿಗಳ ನಿವಾಸಗಳು ಹಾಗೂ ಕಚೇರಿಗಳಲ್ಲಿ ದೊರೆತ ಆಸ್ತಿ ದಾಖಲೆಗಳನ್ನು ಶೋಧ ಕಾರ್ಯಾಚರಣೆ ವೇಳೆ ದೊರೆತಿದ್ದು ಪರಿಶೀಲನೆ ನಡೆಸಲಾಗುತ್ತಿದೆ. ಜತೆಗೆ, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next