Advertisement

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

11:33 PM Apr 25, 2024 | Team Udayavani |

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಆಪ್ತರು ಎನ್ನಲಾದ 6 ಮಂದಿ ಕಾಂಗ್ರೆಸ್‌ ಮುಖಂಡರ ನಿವಾಸದ ಮೇಲೆ ನಡೆದಿದ್ದ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿಯು ಅಂತ್ಯಗೊಂಡಿದ್ದು, ಜಪ್ತಿ ಮಾಡಿರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

Advertisement

ಅಂಜನಾಪುರ ವಾರ್ಡ್‌ನ 6 ಮಂದಿ ಕಾಂಗ್ರೆಸ್‌ ಮುಖಂಡರ ಮನೆಯಲ್ಲಿ ಐಟಿ ಅಧಿಕಾರಿಗಳು ಬುಧವಾರ ತಡರಾತ್ರಿವರೆಗೂ ಪರಿಶೀಲಿಸಿದ್ದಾರೆ. ಲಕ್ಷಾಂತರ ರೂ.ನಗದು, ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.

ನಿರ್ದಿಷ್ಟವಾಗಿ ಒಬ್ಬೊಬ್ಬರ ಮನೆಯಲ್ಲಿ ಎಷ್ಟು ಪ್ರಮಾಣದಲ್ಲಿ ದುಡ್ಡು ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ನೀಡಲು ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ. ದಾಳಿಗೊಳಗಾದ 6 ಮಂದಿಗೂ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ. ದಾಳಿ ವೇಳೆ ಪತ್ತೆಯಾಗಿರುವ ವಸ್ತುಗಳಿಗೆ ಸೂಕ್ತ ದಾಖಲೆ ಒದಗಿಸುವಂತೆ ನೋಟಿಸ್‌ನಲ್ಲಿ ಉಲ್ಲೇಖೀಸಲಿದ್ದು, ಇನ್ನೂ ಕೋಟ್ಯಂತರ ರೂ. ಅಘೋಷಿತ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ :

ಪಾಲಿಕೆ ಮಾಜಿ ಸದಸ್ಯ ಎಸ್‌.ಗಂಗಾಧರ್‌ರ ಕೋಣನಕುಂಟೆ ಕ್ರಾಸ್‌ ನಿವಾಸ, ಡಿ.ಕೆ.ಸುರೇಶ್‌ ಆಪ್ತ ಸಹಾಯಕ ಸುಜಯ್‌ ಅವರ ರಾಯಲ್‌ ಪಾರ್ಕ್‌ ನಿವಾಸ, ಗೊಟ್ಟಿಗೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಬಿ.ಎಲ್.ಶ್ರೀಧರ್‌ರ ನ್ಯೂ ಬ್ಯಾಂಕ್‌ ಕಾಲನಿಯ ಮನೆ, ಅಂಜನಾಪುರ ವಾರ್ಡ್‌ ಅಧ್ಯಕ್ಷ ಬಾಬು ಅವರ ಅಂಜನಾಪುರದಲ್ಲಿರುವ ಬಂಗಲೆ, ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತ ಚಂದ್ರು ಅಲಿಯಾಸ್‌ ಟಕಾರಿ ಚಂದ್ರು ಅವರ ಕೋಣನಕೊಂಟೆ ಕ್ರಾಸ್‌ನ ಪಿಎನ್‌ಬಿ ಲೇಔಟ್‌ನಲ್ಲಿರುವ ನಿವಾಸ, ಕೆಬಿಎಲ… ಶ್ರೀಧರ್‌ ಆಪ್ತ ಸಹಾಯಕ ಹರೀಶ್‌ ಪುಟ್ಟಪ್ಪಗೆ ಸೇರಿದ ಕೋಟನಕೊಂಟೆ ಕ್ರಾಸ್‌ನಲ್ಲಿಯ ನಿವಾಸದ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ದಾಖಲೆ ಜಪ್ತಿ ಮಾಡಿದ್ದರು.   ಚುನಾವಣೆ ಹಿನ್ನೆಲೆಯಲ್ಲಿ ದಾಖಲೆ ಇಲ್ಲದ ಕೋಟ್ಯಂತರ ದುಡ್ಡನ್ನು ಸಂಗ್ರಹಿಸಿ ಟ್ಟಿರುವ ಆರೋಪ ಕೇಳಿ ಬಂದ ಹಿನ್ನೆಲೆ ದಾಳಿ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next