Advertisement

ಎಸಿಬಿ ದಾಳಿ : 17.80 ಲಕ್ಷ ರೂ.ಅಕ್ರಮ ಹಣ ವಶ, ಮೂವರ ಬಂಧನ

08:08 PM Mar 08, 2022 | Team Udayavani |

ಧಾರವಾಡ : ಅಕ್ರಮ ಹಣದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಕೈಗೊಂಡ ಧಾರವಾಡ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ ಠಾಣೆಯ ತಂಡವು ಒಟ್ಟು 17,80,000 ರೂ. ಹಣ ಪತ್ತೆ ಮಾಡುವುದರ ಜತೆಗೆ ಮೂರು ಜನ ಆರೋಪಿಗಳನ್ನು ಮಂಗಳವಾರ ವಶಕ್ಕೆ ಪಡೆದಿದೆ.

Advertisement

ಸಣ್ಣ ನೀರಾವರಿಯ ಧಾರವಾಡ ಉಪ-ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರ ಕಚೇರಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಶಿವಪ್ಪ ಸಂಗಪ್ಪ ಮಂಜಿನಾಳ, ಧಾರವಾಡದ ನೀರಾವರಿ ತನಿಖಾ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಪ್ರಶಾಂತ ಶಾಮರಾವ್ ಸತ್ತೂರ ಹಾಗೂ ಶಿವಪ್ಪ ಅವರ ಅಣ್ಣನ ಮಗ ಮಹಾಂತೇಶ ರೇವಣಪ್ಪ ಮಂಜಿನಾಳ ಬಂಧಿತ ಮೂವರು ಆರೋಪಿಗಳು. ಈ ಪೈಕಿ ಶಿವಪ್ಪ ಅವರು, ಭ್ರಷ್ಟಾಚಾರ ಮಾಡಿ, ಸಂಗ್ರಹಿಸಿದ ಅಕ್ರಮ ಹಣವನ್ನು ಪ್ರಶಾಂತ ಸತ್ತೂರ ಮನೆಯಲ್ಲಿ ಇರಿಸಿದ್ದಾರೆ. ಈ ಹಣವನ್ನು ಮಂಗಳವಾರ ಬೆಳಿಗ್ಗೆ ಬೇರೆಡೆ ಸಾಗಿಸಲಿದ್ದಾರೆ ಎಂಬ ಗೌಪ್ಯ ಖಚಿತ ಮಾಹಿತಿಯು ಎಸಿಬಿಯ ಡಿಎಸ್‌ಪಿ ಅವರಿಗೆ ಬಂದಿದ್ದು, ಕೂಡಲೇ ಈ ಬಗ್ಗೆ ಪರಿಶೀಲಿಸುವಂತೆ ಪಿಐ ಅಲಿ ಎ. ಶೇಖಗೆ ಸೂಚಿಸಿದ್ದಾರೆ.

ಶಿವಪ್ಪನವರ ಅಣ್ಣನ ಮಗ ಮಹಾಂತೇಶನು ಪ್ರಶಾಂತ ಅವರ ಮನೆಗೆ ತೆರೆಳಿ, ಚೀಲವೊಂದನ್ನು ತೆಗೆದುಕೊಂಡು ಹೋಗಲು ಅಣಿಯಾಗಿದ್ದಾನೆ. ಆಗ ಎಸಿಬಿ ತಂಡವು ದಾಳಿ ಮಾಡಿ ಚೀಲದೊಂದಿಗೆ ಮಹಾಂತೇಶನನ್ನು ವಶಕ್ಕೆ ಪಡೆದು, ವಿಚಾರಣೆ ಕೈಗೊಂಡಿದೆ. ಆಗ ಶಿವಪ್ಪನವರ ಸೂಚನೆ ಮೇರೆಗೆ ಈ ಹಣದ ಚೀಲವನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕ ಕಂದಗನೂರ ಗ್ರಾಮದ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಮಹಾಂತೇಶ ತಿಳಿಸಿದ್ದು, ಈ ಬಗ್ಗೆ ಎಸಿಬಿಯ ಪಿಐ ಅಲಿ ಶೇಖ ಅವರು ಸರಕಾರದ ಪರ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ : ಕೋಮು ಪ್ರಚೋದನಕಾರಿ ಹೇಳಿಕೆ : ಮುಕ್ರಂ ಖಾನ್ ಬಂಧನ ;ಆಸ್ಪತ್ರೆಯಲ್ಲಿ ಚಿಕಿತ್ಸೆ

ಡಿಎಸ್‌ಪಿ ಮಹಾಂತೇಶ್ವರ ಎಸ್. ಜಿದ್ದಿ ಅವರು, ಕೂಡಲೇ ಈ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪಿಐ ವೀರಭದ್ರಪ್ಪ ಎನ್. ಕಡಿ ಅವರಿಗೆ ವಹಿಸಿದ್ದಾರೆ. ಅದರನ್ವಯ ಕೂಡಲೇ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಪ್ರಶಾಂತ ಸತ್ತೂರ ಮನೆಗೆ ತೆರಳಿ ಹಣದ ಚೀಲ ಹಾಗೂ ಮನೆಯನ್ನು ಶೋಽಸಿದಾಗ, ಚೀಲದಲ್ಲಿ 16 ಲಕ್ಷ ರೂ.ಹಾಗೂ ಮನೆಯಲ್ಲಿ 1,80,000 ರೂ.ಸೇರಿದಂತೆ ಒಟ್ಟು 17,80,000 ರೂ. ಅಕ್ರಮ ಹಣ ದೊರೆತಿದೆ. ಈ ಅಕ್ರಮ ಹಣ ಹಾಗೂ ಎಲ್ಲ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ಮುಂದುವರೆಸಲಾಗಿದೆ.

Advertisement

ಬೆಳಗಾವಿಯ ಎಸಿಬಿ ಉತ್ತರ ವಲಯ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಮಹಾಂತೇಶ್ವರ ಎಸ್.ಜಿದ್ದಿ ನೇತೃತ್ವದಲ್ಲಿ ಪಿಐ ಅಲಿ ಶೇಖ ಮಾಹಿತಿ ಪರಿಶೀಲಿಸಿ, ದೂರು ಸಲ್ಲಿಸಿದ್ದಾರೆ. ಪಿಐ ವಿ.ಎನ್.ಕಡಿ ತನಿಖೆ ಕೈಗೊಂಡಿದ್ದು, ಗದಗ ಪಿಐ ಆರ್.ಎಫ್.ದೇಸಾಯಿ, ಸಿಬ್ಬಂದಿಗಳಾದ ಎಸ್.ಕೆ.ಕೆಲವಡಿ, ಗಿರೀಶ ಎಸ್. ಮನಸೂರ, ಶ್ರೀಶೈಲ ಎಸ್.ಕಾಜಗಾರ, ಎಸ್.ಐ.ಬೀಳಗಿ, ಎಲ್.ಎ.ಬೆಂಡಿಕಾಯಿ, ಕೆ.ಆರ್.ಹುಯಿಲಗೋಳ, ವಿ.ಎಸ್.ದೇಸಾಯಿಗೌಡ್ರ, ವಿರೇಶ ಎಸ್., ಎಸ್.ಎಸ್.ನರಗುಂದ, ರವೀಂದ್ರ ಯರಗಟ್ಟಿ, ಗಣೇಶ ಶಿರಗಟ್ಟಿ ಶೋಧನಾ ಕಾರ್ಯಾಚರಣೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next