ಗದಗ: ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ನಗರದ ಪಿಡಬ್ಲ್ಯೂಡಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರು ರೆಡ್‌ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಇಲ್ಲಿನ ಮುಳಗುಂದ ನಾಕಾ ಸಮೀಪದ ಪಿಡಬ್ಲ್ಯೂಡಿ ಕಚೇರಿಯಲ್ಲಿ ಗುತ್ತಿಗೆದಾರ ಆನಂದ ಎಂಬುವವರಿಂದ ಎರಡು ಸಾವಿರ ರೂಪಾಯಿಗಳ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹನುಮಂತ ಲಕ್ಷ್ಮಣ ಕದಾಂಪುರ ಎಂಬುವವರನ್ನು ಬಂಧಿಸಲಾಗಿದೆ.
ದೂರುದಾರರು ಕ್ಲಾಸ್-4 ಗುತ್ತಿಗೆದಾರರ ಲೈಸನ್ಸ್ ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅದಕ್ಕಾಗಿ ಸರಕಾರದ ನಿಗದಿ 2,500 ರೂ. ಶುಲ್ಕ ಭರಿಸುಲು ಒಪ್ಪಿದ್ದರು. ಆದರೆ, ಸರಕಾರಿ ಶುಲ್ಕವನ್ನು ಹೊರತು ಪಡಿಸಿ, 2,500 ರೂಪಾಯಿಗಳ ಹೆಚ್ಚುವರಿ ಮೊತ್ತವನ್ನು ಲಕ್ಷ್ಮಣ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ.
ಅದರಂತೆ ಮೊಲದ ಕಂತಿನಲ್ಲಿ 2 ಸಾವಿರ ರೂ. ಪಡೆದಿದ್ದ. ಅಲ್ಲದೇ, ಲೈಸನ್ಸ್ ಕಡತವನ್ನು ಮರಳಿಸಲು ಇನ್ನುಳಿದ 2 ಸಾವಿರ ರೂ. ಗಾಗಿ ಪೀಡಿಸುತ್ತಿದ್ದ ಎಂದು ಎಸಿಬಿ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.
ಅದರಂತೆ ಮಂಗಳವಾರ ಮಧ್ಯಾಹ್ನ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದೂರುದಾರರಿಂದ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ಗದಗ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಎಸಿಬಿ ಡಿವೈಎಸ್ಪಿ ವಾಸುದೇವರಾಂ ನೇತೃತ್ವದಲ್ಲಿ ದಾಳಿ ನಡೆದಿದ್ದು, ಇನ್ಸಪೆಕ್ಟರ್‌ಗಳಾದ ಧರಣಾ ನಾಯಕ್, ವಿಶ್ವನಾಥ ಹಿರೇಮಠ, ಸಿಬ್ಬಂದಿಗಳಾದ ಅಯ್ಯನಗೌಡ್ರ, ಹೆಬಸೂರ್, ಮಂಜುನಾಥ, ವಿರೇಶ್ ಜೋಳದ, ಈರಣ್ಣ ತಾಯಣ್ಣವರ, ಮತ್ತು ತಾರಪ್ಪ ಮತ್ತಿತರರು ಪಾಲ್ಗೊಂಡಿದ್ದರು.