Advertisement

ಕೃಷಿ ನಿರ್ದೇಶಕರ ಕಚೇರಿ, ನಿವಾಸಕ್ಕೆ ಎಸಿಬಿ ದಾಳಿ:ಅಕ್ರಮ ಆಸ್ತಿ ಪತ್ತೆ

01:15 PM Dec 14, 2017 | Team Udayavani |

ಮಂಗಳೂರು/ ಬಂಟ್ವಾಳ/ ಕಿನ್ನಿಗೋಳಿ: ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಫ್ರಾನ್ಸಿಸ್‌ ಪೌಲ್‌ ಮಿರಾಂದ (59) ಅವರ ಕಚೇರಿಗೆ ಮತ್ತು ಕಿನ್ನಿಗೋಳಿಯಲ್ಲಿರುವ ನಿವಾಸಕ್ಕೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರು ದಾಳಿ ನಡೆಸಿದ್ದು, ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

Advertisement

ಕಡತಗಳ ತಪಾಸಣೆ ನಡೆಸಿ ಹಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 
ಮಿರಾಂದ ಅವರು ಅಕ್ರಮ ಸಂಪತ್ತು ಹೊಂದಿದ್ದಾರೆ ಹಾಗೂ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಬೆಳಗ್ಗೆ 5.30ಕ್ಕೆ ದಾಳಿ ಕಾರ್ಯಾಚರಣೆ ಆರಂಭವಾಗಿದ್ದು, ತಡ ರಾತ್ರಿವರೆಗೂ ಮುಂದುವರಿಯಿತು.

ಮಾರ್ಚ್‌ನಲ್ಲಿ  ನಿವೃತ್ತಿ
ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಫ್ರಾನ್ಸಿಸ್‌ ಪೌಲ್‌ ಮಿರಾಂದ ಅವರು 2018 ಮಾ. 31ಕ್ಕೆ ಸೇವಾ ನಿವೃತ್ತಿ ಹೊಂದಲಿದ್ದಾರೆ. ಮೂಲತಃ ಕಿನ್ನಿಗೋಳಿ ಪಕ್ಷಿಕೆರೆ ತೋಕೂರು ನಿವಾಸಿಯಾಗಿರುವ ಅವರು ಮಂಗಳೂರಿನಿಂದ ಬಂಟ್ವಾಳಕ್ಕೆ ವರ್ಗವಾಗಿ ಮೂರು ವರ್ಷಗಳಾಗಿವೆ.

ಸಹೋದ್ಯೋಗಿಗಳಲ್ಲಿ ಅವರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ರೈತಾಪಿ ವರ್ಗ ಮತ್ತು ಗೊಬ್ಬರ ಮಾರಾಟಗಾರರು ಕೂಡ ಅವರ ಕಚೇರಿಗೆ ನಡೆದ ದಾಳಿಯ ಬಗ್ಗೆ ಅನುಕಂಪದಿಂದ ಮಾತನಾಡುತ್ತಿದ್ದರು.

ಪಕ್ಷಿಕೆರೆ ನಿವಾಸಕ್ಕೂ ದಾಳಿ
ಬಂಟ್ವಾಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಫ್‌. ಮಿರಾಂದ ಅವರ ಕಿನ್ನಿಗೋಳಿಯ ಪಕ್ಷಿಕೆರೆ ನಿವಾಸ ಮತ್ತು ಅವರಿಗೆ ಸೇರಿದ ಪಕ್ಷಿಕೆರೆ ಕೃಷಿ ಯಂತ್ರ ಧಾರ ಕಚೇರಿಯ ಮೇಲೂ ಎಸಿಬಿ ಅಧಿಕಾರಿಗಳು ಬುಧವಾರ ಮುಂಜಾನೆ 6 ಗಂಟೆಗೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು. ಈ ಸಂದರ್ಭ ಎಸಿಬಿ ಅಧಿಕಾರಿಗಳು ಮಿರಾಂದ ಮತ್ತು ಮನೆಯ ಸದಸ್ಯರು ಮನೆ ಯಿಂದ ಹೊರ ಹೋಗದಂತೆ ತಡೆಹಿಡಿದಿದ್ದರು.

Advertisement

4 ವಾಹನ ವಶ 
22 ಲಕ್ಷ ರೂ. ಮೌಲ್ಯದ ಟಾಟಾ ಎಚ್‌ಎಕ್ಸ್‌ ಕಾರು, 8 ಲಕ್ಷ ರೂ. ಬೆಲೆ ಬಾಳುವ ಫೋರ್ಡ್‌ ಫಿಗೊ ಕಾರು, 2.5 ಲಕ್ಷ ರೂ. ವೆಚ್ಚದ ಕೆಟಿಎಂ ಬೈಕು, ಒಂದು ಹೀರೋ ಹೋಂಡಾ ಬೈಕು ವಶಪಡಿಸಿಕೊಳ್ಳಲಾಗಿದೆ. 

ಇದಲ್ಲದೆ ಒಂದು ಫಾರ್ಮ್ ಹೌಸ್‌, ಒಂದು ಭವ್ಯ ಬಂಗಲೆ, ಮಣಿಪಾಲದಲ್ಲಿ ಒಂದು ಫ್ಲಾಟ್‌, ಪಕ್ಷಿಕೆರೆಯಲ್ಲಿ ಒಂದು ಕೃಷಿ ಯಂತ್ರ ಧಾರ ಕಚೇರಿ, 8- 10 ನಿವೇಶನಗಳು, 5 ಎಕರೆ ಅಡಿಕೆ ತೋಟ, ಮನೆಯಲ್ಲಿ 10 ಲಕ್ಷ ರೂ. ನಗದು, ವಿದೇಶಿ ಮದ್ಯ ಮತ್ತು ವಿದೇಶಿ ಕರೆನ್ಸಿ, 8 ಎಕರೆ ಪಿತ್ರಾರ್ಜಿತ ಆಸ್ತಿ ಪತ್ತೆಯಾಗಿದೆ.

ಎಸ್‌ಪಿ ಶ್ರುತಿ, ಡಿವೈಎಸ್‌ಪಿಗಳಾದ ಸುಧೀರ್‌ ಹೆಗ್ಡೆ, ದಿನಕರ ಶೆಟ್ಟಿ, ಗಿರೀಶ್‌ (ಕಾರವಾರ), ಇನ್ಸ್‌ಪೆಕ್ಟರ್‌ಗಳಾದ ಯೋಗೀಶ್‌ ಕುಮಾರ್‌, ರಮೇಶ್‌, ಜಯರಾಮ ಗೌಡ, ಬೃಜೇಶ್‌ ಮ್ಯಾಥ್ಯೂ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಚೇರಿ ತೆರೆಯುವ ಮುನ್ನವೇ ಕಾದು ನಿಂತಿದ್ದರು
ಎಸಿಬಿ ಡಿವೈಎಸ್‌ಪಿ ಗಿರೀಶ್‌ ನೇತೃತ್ವದಲ್ಲಿ ಬಂಟ್ವಾಳದಲ್ಲಿ ಬೆಳಗ್ಗೆ 8.30ಕ್ಕೆ ಕಚೇರಿ ಬಾಗಿಲು ತೆರೆಯುವ ಮುನ್ನವೇ ಎರಡು ವಾಹನಗಳಲ್ಲಿ ಬಂದು ಕಾದು ನಿಂತಿದ್ದ ತಂಡವು ಡಿ. ದರ್ಜೆ ನೌಕರ ಸಂದೀಪ್‌ ಅವರು ಬಾಗಿಲು ತೆರೆಯುತ್ತಿದ್ದಂತೆ ಒಳನುಗ್ಗಿತು. ತಾವು ಎಸಿಬಿ ಅಧಿಕಾರಿಗಳು ಎಂದು ತಿಳಿಸಿ ತಪಾಸಣೆ ಆರಂಭಿಸಿತು. ಅಧಿಕಾರಿಗಳು ಅಪರಾಹ್ನ ಮೂರು ಗಂಟೆ ತನಕ ಎಲ್ಲ ದಾಖಲೆಗಳನ್ನು ತಪಾಸಣೆ ನಡೆಸಿದರು. ಬಳಿಕ ಕಚೇರಿ ಅಧೀಕ್ಷಕ ಕೃಷ್ಣ ಕುಮಾರ್‌ ಅವರಿಂದ ಕೆಲವು ಮಾಹಿತಿಗಳನ್ನು ಪಡೆದು ಪಂಚನಾಮೆಗೆ ಸಹಿ ಪಡೆದು ನಿರ್ಗಮಿಸಿದರು. ತನಿಖಾ ತಂಡದಲ್ಲಿ ಅಧಿಕಾರಿ ಸಹಿತ ಒಟ್ಟು ಎಂಟು ಮಂದಿ ಸಿಬಂದಿ ಇದ್ದರು.

ಎಸಿಬಿ ದಾಳಿ ಕುರಿತು ಡಿ. ದರ್ಜೆ ನೌಕರ ಕೂಡಲೇ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಮಂಗಳೂರು ಜೆಡಿಎ ಕೆಂಪೇ ಗೌಡ ಮತ್ತು ಡಿಡಿ ಮುನೇ ಗೌಡರಿಗೆ ಮಾಹಿತಿ ರವಾನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next