Advertisement

ಉಡುಪಿ ಸಾರಿಗೆ ಅಧಿಕಾರಿ ಎಸಿಬಿ ಬಲೆಗೆ

12:30 AM Mar 17, 2019 | |

ಉಡುಪಿ: ವಾಹನ ಮಾಲಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಉಡುಪಿಯ ಉಪ ಸಾರಿಗೆ ಆಯುಕ್ತ, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್‌.ಎಂ. ವರ್ಣೇಕರ್‌, ಮಧ್ಯವರ್ತಿ ಮುನ್ನಾ ಯಾನೆ ಮುನಾಫ್ ಶನಿವಾರ ರೆಡ್‌ಹ್ಯಾಂಡ್‌ ಆಗಿ ಉಡುಪಿ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರ್‌ಟಿಒ ಕಚೇರಿಯಲ್ಲಿ ಕಾರಿನ ಲೈಫ್ ಟ್ಯಾಕ್ಸ್‌ ಬಾಕಿ ಮರು ಪಾವತಿಯ ಮೊತ್ತದಲ್ಲಿ ಲಂಚ ಪಡೆಯುತ್ತಿದ್ದ ಸಂದರ್ಭ ಎಸಿಬಿ ತಂಡ ದಾಳಿ ನಡೆಸಿದೆ. ಮೂಲತಃ ಉಡುಪಿಯವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿ ರುವ ವಿಘ್ನೇಶ್‌ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಿತ್ತು.

Advertisement

ಏರ್‌ಶೋ ಸಂದರ್ಭ ಆಹುತಿ
ಬೆಂಗಳೂರಿನಲ್ಲಿ ಏರ್‌ಶೋ ಸಂದರ್ಭ ಉಂಟಾದ ಅಗ್ನಿ ಅವಘಡ ದಲ್ಲಿ ನೂರಾರು ಕಾರು ಬೆಂಕಿಗಾಹುತಿ ಯಾಗಿದ್ದವು. ಅದರಲ್ಲಿ ವಿಘ್ನೇಶ್‌ ಅವರ ಕಾರು ಕೂಡ ಇತ್ತು. ಕಾರು ಈ ರೀತಿ ಅವಘಡಕ್ಕೊಳಗಾಗಿದ್ದರಿಂದ ಅದಕ್ಕೆ ನೋಂದಣಿ ವೇಳೆ ಪಾವತಿಸಿರುವ ರಸ್ತೆ ತೆರಿಗೆಯ ಉಳಿಕೆ ಮೊತ್ತವನ್ನು ಸಾರಿಗೆ ಇಲಾಖೆಯು ಕಾರಿನ ಮಾಲಕರಿಗೆ ಪಾವತಿಸಬೇಕು. ಅದರಂತೆ ವಿಘ್ನೇಶ್‌ ತನಗೆ ದೊರೆಯಬೇಕಾಗಿರುವ ತೆರಿಗೆ ಬಾಕಿಯ ಮರುಪಾವತಿಗೆ ಅರ್ಜಿ ಹಾಕಿದ್ದರು. ಅವರಿಗೆ 65,000 ರೂ. ಮರುಪಾವತಿಸಬೇಕಿತ್ತು. ಅದಕ್ಕೆ ಶೇ.10ನ್ನು ತನಗೆ ನೀಡಬೇಕು ಎಂದು ಆರ್‌ಟಿಒ ವರ್ಣೇಕರ್‌ ಷರತ್ತು ಹಾಕಿದ್ದರು. ಇದರಿಂದ ನೊಂದ ವಿಘ್ನೇಶ್‌ ಉಡುಪಿ ಎಸಿಬಿಯವರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಾಚರಣೆ ಯೋಜನೆ ರೂಪಿಸಿದ ಎಸಿಬಿಯವರು ಲಂಚದ ಹಣ ನೀಡುವಂತೆ ವಿಘ್ನೇಶ್‌ಗೆ ಸೂಚಿಸಿದ್ದು, ಹಣ ನೀಡುವ ವೇಳೆ ರೆಡ್‌ಹ್ಯಾಂಡ್‌ ಆಗಿ ಆರ್‌ಟಿಒ ಮತ್ತು ಅವರ ಸಹಾಯಕನನ್ನು ಬಂಧಿಸಿದರು.

30,000 ರೂ. ಪತ್ತೆ
ಆರ್‌ಟಿಒ ಕಚೇರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 30,000 ರೂ.ಗಳನ್ನು ಎಸಿಬಿ ಪೊಲೀಸರು ಪತ್ತೆಹಚ್ಚಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರಿನ ಬಿಜೈಯಲ್ಲಿರುವ ವರ್ಣೇಕರ್‌ ಅವರ ಐಶಾರಾಮಿ ಮನೆಯಲ್ಲಿಯೂ ತಡರಾತ್ರಿವರೆಗೆ ಶೋಧ ಕಾರ್ಯ ಮುಂದುವರಿದಿತ್ತು. ಎಸಿಬಿ ಕಳೆದ ಡಿಸೆಂಬರ್‌ನಲ್ಲಿ ಉಡುಪಿ ನಗರಸಭೆಯ ಹಿಂದಿನ ಆಯುಕ್ತರಾಗಿದ್ದ ಮಂಜುನಾಥಯ್ಯ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಭ್ರಷ್ಟಾ ಚಾರ ನಿಗ್ರಹ ದಳದ  ಡಿವೈಎಸ್‌ಪಿ ಮಂಜುನಾಥ ಕೌರಿ, ಉಡುಪಿಯ ಇನ್‌ಸ್ಪೆಕ್ಟರ್‌ಗಳಾದ ಜಯರಾಮ್‌ ಗೌಡ, ಸತೀಶ್‌ ಬಿ.ಎಸ್‌., ಮಂಗಳೂರಿನ ಇನ್‌ಸ್ಪೆಕ್ಟರ್‌ ಯೋಗೀಶ್‌, ಸಿಬಂದಿ ಯತಿನ್‌, ಪ್ರಸನ್ನ, ರವೀಂದ್ರ, ಜಲಾಲ್‌, ರಾಘವೇಂದ್ರ ಪೂಜಾರಿ, ಸುರೇಶ್‌ ನಾಯಕ್‌, ಪ್ರಶಾಂತ್‌, ರಾಧಾಕೃಷ್ಣ, ಗಣೇಶ್‌, ರಾಘವೇಂದ್ರ, ಸುರೇಶ್‌, ಸೂರಜ್‌, ಪಾವನಾಂಗಿ, ರಮೇಶ್‌ ಭಂಡಾರಿ ಪಾಲ್ಗೊಂಡಿದ್ದರು. 

ಸೆಕ್ಯೂರಿಟಿ ಕಮ್‌ ಮಧ್ಯವರ್ತಿ!
ಆರ್‌ಟಿಒ ವರ್ಣೇಕರ್‌ ಅವರು ತನಗೆ ಬರಬೇಕಾಗಿದ್ದ ಮೊತ್ತವನ್ನು ಮುನಾಫ್ ಮೂಲಕ ಪಡೆಯುವವರಿದ್ದರು. ಮುನಾಫ್ ಹಲವು ವರ್ಷಗಳಿಂದ ಆರ್‌ಟಿಒ ಬ್ರೋಕರ್‌ ಆಗಿ ಕೆಲಸ ಮಾಡಿದ್ದ. ಇತ್ತೀಚಿನ ವರ್ಷಗಳಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೂಡ “ಭದ್ರತೆ’ಯ ಜವಾಬ್ದಾರಿ ಹೊತ್ತಿದ್ದ! ಈತನನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಆರ್‌ಟಿಒ ಕಚೇರಿಯಲ್ಲಿ ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next