Advertisement

2018-19ನೇ ಸಾಲಿನ ಶಾಲೆಗಳ ಶೈಕ್ಷಣಿಕ ಅವಧಿ, ರಜಾದಿನ ಪ್ರಕಟ

06:10 AM Mar 30, 2018 | Team Udayavani |

ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 2018-19ನೇ ಸಾಲಿನ ರಜಾದಿನ ಹಾಗೂ ಶೈಕ್ಷಣಿಕ ದಿನದ ಮಾರ್ಗಸೂಚಿಯನ್ನು ಪ್ರಕಟಿಸಿದೆ.

Advertisement

ಮುಂದಿನ ಶೈಕ್ಷಣಿಕ ವರ್ಷ ಮೇ 28ರಿಂದ ಆರಂಭಗೊಂಡು ಅಕ್ಟೋಬರ್‌ 6ರ ವರೆಗೆ ನಡೆಯಲಿದೆ. ಅಕ್ಟೋಬರ್‌ 7ರಿಂದ 21ರ ವರೆಗೆ ಮಧ್ಯಂತರ ರಜೆ(ದಸರಾ ರಜೆ) ಇರಲಿದೆ. ಅಕ್ಟೋಬರ್‌ 22ರಿಂದ 2019ರ ಏ.10ರ ವರೆಗೆ ಎರಡನೇ ಶೈಕ್ಷಣಿಕ ಅವಧಿ ನಡೆಯಲಿದೆ. ಏ.11ರಿಂದ ಮೇ 26ರ ವರೆಗೆ ಬೇಸಿಗೆ ರಜೆ ಇರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ದಸರಾ ರಜೆ ಕೇವಲ 15 ದಿನ ಹಾಗೂ ಬೇಸಿಗೆ ರಜೆ  ಒಂದು ತಿಂಗಳು 15 ದಿನ ಇರಲಿದೆ. ಬೇಸಿಗೆ ರಜೆಯಲ್ಲಿ  ಏ.14 ಬರುವುದರಿಂದ ಅಂದು ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ವಿದ್ಯಾರ್ಥಿಗಳ ಜತೆ ಸೇರಿ ಕಡ್ಡಾಯವಾಗಿ ಅಂಬೇಡ್ಕರ್‌ ಜಯಂತಿ ಆಚರಿಸಬೇಕು. ಕ್ರಿಸ್‌ಮಸ್‌ ರಜೆ ಬೇಡಿಕೆಯನ್ನು ಸಂಬಂಧಿಸಿದ ಸಂಸ್ಥೆಗಳು ಆಯಾ ವ್ಯಾಪ್ತಿಯ ಉಪ ನಿರ್ದೇಶಕರಿಗೆ ಸಲ್ಲಿಸಬೇಕು. ಉಪ ನಿರ್ದೇಶಕರು ಶಿಕ್ಷಣ ಸಂಸ್ಥೆಗಳ ಬೇಡಿಕೆಯನ್ನು ಪರಿಶೀಲಿಸಿ, ಡಿಸೆಂಬರ್‌ ತಿಂಗಳ ಕ್ರಿಸ್ಮಸ್‌ ರಜೆಯನ್ನು ಅಕ್ಟೋಬರ್‌ ತಿಂಗಳ ಮಧ್ಯಂತರ ರಜೆಯಲ್ಲಿ ಕಡಿತಗೊಳಿಸಿ ಸರಿದೂಗಿಸಲಿದ್ದಾರೆ.

ಕನ್ನಡ ರಾಜ್ಯೋತ್ಸವ ಆಚರಿಸುವ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಮಧ್ಯಂತರ ರಜಾ ಅವಧಿಯನ್ನು ಅವಶ್ಯಕತೆಗೆ ತಕ್ಕಂತೆ ಮಾರ್ಪಾಡು ಮಾಡುವ ಬಗ್ಗೆ ಸಂಬಂಧಿಸಿದ ಉಪ ನಿರ್ದೇಶಕರು ಶೈಕ್ಷಣಿಕ ಕರ್ತವ್ಯದ ಅವಧಿಗಳ ಕೊರತೆ ಬಾರದಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next