Advertisement

ಎಸಿ-ತಹಶೀಲ್ದಾರ್‌ ಹತ್ಯೆ ಯತ್ನಕ್ಕೆ ಆಕ್ರೋಶ

01:25 PM Apr 11, 2017 | Team Udayavani |

ದಾವಣಗೆರೆ: ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ದಾಸ್ತಾನು ಮಳಿಗೆ ಮೇಲೆ ದಾಳಿ ಮಾಡಲು ತೆರಳಿದ್ದ ದಾವಣಗೆರೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಹಾಗೂ ಸಿಬಂದಿ ಹತ್ಯೆಗೆ ಯತ್ನಿಸಿದ ಘಟನೆ ಖಂಡಿಸಿ, ಸೋಮವಾರ ಕಂದಾಯ ಇಲಾಖೆ ಸಿಬ್ಬಂದಿ ಸಾಂದರ್ಭಿಕ ರಜೆ ಹಾಕಿ ಪ್ರತಿಭಟಿಸಿದ್ದಾರೆ. 

Advertisement

ಜಿಲ್ಲಾಡಳಿತ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಜಿಲ್ಲಾ ಘಟಕ ನೇತೃತ್ವದಲ್ಲಿ ಪ್ರತಿಭಟಿಸಿದ ಕಂದಾಯ ಇಲಾಖೆ ಸಿಬ್ಬಂದಿ, ಹತ್ಯೆಗೆ ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಕಂದಾಯ ಸಚಿವ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. 

ದಾವಣಗೆರೆ ತಾಲ್ಲೂಕು ಹಳೆಬಾತಿ ಗ್ರಾಮದ ಕೋಳಿ ಫಾರಂ ಪಕ್ಕದ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಕಳೆದ 8ರಂದು ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ತಹಶೀಲ್ದಾರ್‌ ಸಂತೋಷಕುಮಾರ್‌ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದರು.

ಈ ವೇಳೆ ಗೋದಾಮಿನ ಮಾಲೀಕ ಉಮಾಪತಯ್ಯ, ಆತನ ಮಗ ಪ್ರಶಾಂತ್‌, ಮತ್ತವರ ಸಹಾಯಕರು ಸೇರಿ ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಮತ್ತು ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣದ ಆಮಿಷ ತೋರಿಸಿ, ಅಕ್ಕಿ ತುಂಬಿದ್ದ ಲಾರಿಯನ್ನು ಮೈ ಮೇಲೆ ಹರಿಸಿ, ಕೊಲೆಗಯ್ಯಲು ಯತ್ನಿಸಿದ್ದಾರೆ.

ಈ ಘಟನೆಯನ್ನು ನಾವು ಗಂಭೀರವಾಗಿ ಖಂಡಿಸುವುದಾಗಿ ಪ್ರತಿಭಟನಾಕಾರರು ಹೇಳಿದರು. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ, ಮೇಲಾಧಿಕಾರಿಗಳ ಆದೇಶದಂತೆ ಕೆಲಸ ಕಾರ್ಯ ನಿರ್ವಹಿಸುವ ನೌಕರ, ಅಧಿಕಾರಿ, ಸಿಬ್ಬಂದಿ ಮೇಲೆ ಈ ರೀತಿ ಹಲ್ಲೆಗೆ ಮುಂದಾಗಿದ್ದು, ಗೂಂಡಾ ರೀತಿ ವರ್ತಿಸಿದವರ ವಿರುದ್ಧ ಯಾವುದೇ ರಿಯಾಯಿತಿ ತೋರಿಸದೆ ಕ್ರಮ ಜರುಗಿಸಲು ಅವರು ಕೋರಿದರು. 

Advertisement

ಇಂತಹ ಘಟನೆಗಳು ಪದೇ ಪದೇ ನಡೆಯದಂತೆ ಕ್ರಮ ವಹಿಸಬೇಕು. ಅಧಿಕಾರಿ, ಸಿಬ್ಬಂದಿ ಜೊತೆ ಈ ರೀತಿ ವರ್ತಿಸುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕು. ಜೊತೆಗೆ ಭ್ರಷ್ಟಾಚಾರ ನಿಗ್ರಹ ದಳದಿಂದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಅನ್ನಭಾಗ್ಯ ಯೋಜನೆಯಡಿ ಸರ್ಕಾರದಿಂದ ನೀಡಲಾಗುವ ಪಡಿತರ ಅಕ್ಕಿ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಬೇಕು.

ಅಕ್ಕಿ ಸಾಗಣೆ ಬಳಸಿದ ವಾಹನ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ಗೆ ಮನವಿ ಸಲ್ಲಿಸಲಾಗಿದೆ. ಉಪವಿಭಾಗಾಧಿಕಾರಿ ಬಿ.ಟಿ. ಕುಮಾರ ಸ್ವಾಮಿ, ತಹಶೀಲ್ದಾರ್‌ ಸಂತೋಷಕುಮಾರ್‌, ಗ್ರಾಮ ಲೆಕ್ಕಾಧಿಕಾರಿಗಳ ನೌಕರರ ಸಂಘದ ಅಧ್ಯಕ್ಷ ವಿಜಯ್‌ ಮಹಾಂತೇಶ್‌, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಆರ್‌. ರವಿ ಸೇರಿದಂತೆ ಬಹುತೇಕ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿ ಈ ಸಂದರ್ಭದಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next