ಬೀದರ: ಗುಲ್ಬರ್ಗಾ ವಿಶ್ವ ವಿದ್ಯಾಲಯ ವಿದ್ಯಾರ್ಥಿ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಮಂಗಳವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು. ಕೋವಿಡ್ ಕಾರಣದಿಂದ ಪ್ರಮೋಟ್ ಆದವರು ಪರೀಕ್ಷೆ ಬರೆಯಬೇಕೆಂಬ ವಿವಿ ನಿಲುವು ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿದೆ. ರಾಜ್ಯದ ಎಲ್ಲ ವಿವಿಗಳ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೀಗ ಗುಲ್ಬರ್ಗ ವಿವಿಯಲ್ಲಿ ಒಂದೋ, ಎರಡೋ ವಿಷಯ (ಪ್ರಥಮ, ತೃತೀಯ ಸೆಮ್‌ಗಳಲ್ಲಿ) ಫೇಲ್ ಆದವರನ್ನು 2, 4ನೇ ಸೆಮ್‌ಗೆ ಪ್ರಮೋಟ್ ಮಾಡಿಲ್ಲ. ಪರೀಕ್ಷೆ ಬರೆಯಬೇಕು ಎಂದು ಹೇಳುತ್ತಿರುವುದು ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ ಎಂದು ಹೇಳಿದೆ.
ಕೋವಿಡ್ ಕಾರಣಕ್ಕೆ 2020, 2021ರಲ್ಲಿ ಕ್ರಮವಾಗಿ ನಡೆಯಬೇಕಿದ್ದ ಎರಡು, ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಮೋಟ್ ಮಾಡಲಾಗಿತ್ತು. ಇದಕ್ಕೆ 1, 3ನೇ ಸೆಮಿಸ್ಟರ್ ಫಲಿತಾಂಶ ಅಧಾರವಾಗಿ ಇಟ್ಟುಕೊಳ್ಳಲಾಗಿತ್ತು. 1, 3ರಲ್ಲಿ ಫೇಲ್ ಅದವರನ್ನು ಪ್ರಮೋಟ್ ಮಾಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೀಗ ದಿಢೀರ್ ಅಂತ ಸುತ್ತೋಲೆ ಹೊರಡಿಸಿರುವ ವಿವಿ 2 ಮತ್ತು 4 ನೇ ಸೆಮ್ ಪರೀಕ್ಷೆಗಳನ್ನು ಬರೆಯಲೇಬೇಕು ಎಂದು ಹೇಳಿದ್ದು, ವಿದ್ಯಾರ್ಥಿಗಳಲ್ಲಿ ಅಪಘಾತ ಮೂಡಿಸಿದೆ. ಲಾಕ್ ಡೌನ್‌ನಿಂದ 2, 4ನೇ ಸೆಮ್‌ನ ಒಂದೂ ತರಗತಿ ನಡೆದಿಲ್ಲ, ಜತೆಗೆ ಪಠ್ಯದ ಏನೆಂಬುದು ಗೊತ್ತಿಲ್ಲ. ಹೀಗಿರುವಾಗ ಪರೀಕ್ಷೆ ಬರೆಯಬೇಕು ಎಂದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಈಗಾಗಲೇ ಪದವಿ ಪೂರ್ಣಗೊಳ್ಳುವುದು ಒಂದು ವರ್ಷ ವಿಳಂಬವಾಗಿದೆ. 2, 4ನೇ ಸೆಮ್ ಪರೀಕ್ಷೆ ಬರೆದು ಫಲಿತಾಂಶ ಬರಲು ಒಂದು ವರ್ಷ ಕಾಯಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ಪ್ರಮೋಟ್ ಗೆ 2019-20, 2020-21ರಲ್ಲಿ 2, 4ನೇ ಸೆಮ್ ವಿದ್ಯಾರ್ಥಿಗಳಿಂದ ಪರೀಕ್ಷೆ ಶುಲ್ಕ ಕಟ್ಟಿಸಿಕೊಂಡು ಕೋವಿಡ್ ಕಾರಣಕ್ಕೆ ಪ್ರಮೋಟ್ ಮಾಡಲಾಗಿತ್ತು. ಆದರೀಗ ಮತ್ತೆ ಪರೀಕ್ಷೆ ಬರೆಯಲು ಹೇಳುತ್ತಿರುವುದಲ್ಲದೆ, ಪುನಃ 1600 ರೂ. ಶುಲ್ಕ ಕೇಳುತ್ತಿದ್ದಾರೆ. ಪ್ರಸ್ತುತ ಮತ್ತು ಪ್ರಮೋಟ್ ಆಗದ ಸೆಮ್ ಸೇರಿ 3,200 ರೂ. ಕಟ್ಟಬೇಕೆಂದು ಹೇಳುತ್ತಿದ್ದ, ಹೀಗೆ ಫೀಸ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಹಿಂದೆ ತಿಳಿಸಿರುವಂತೆ ಎರಡನೇ ಹಾಗು ನಾಲ್ಕನೇ ಸೆಮಿಸ್ಟರ್ ಪ್ರಮೋಟ್ ಮಾಡಿರುವ ನಿಲುವು ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಮುಂದುವರೆಸಿ ಸದ್ಯ ವಿವಿ ಹೊರಡಿಸಿರುವ ಸುತ್ತೋಲೆ ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ವಿವಿ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯಲ್ಲಿ ನಗರ ಕಾರ್ಯದರ್ಶಿ ಅಂಬ್ರೇಶ್, ಹೇಮಂತ್, ಅಭಿಷೇಕ, ಪವನ ರಾಜಗೀರ, ಓಂಕಾರ ರೆಡ್ಡಿ, ಭಜರಂಗ ಗಡಿ ಕುಸುನೂರು, ಆಕಾಶ ರಾಜಗೀರ, ಪ್ರೇಮ ಸಾಗರ ಇನ್ನಿತರರಿದ್ದರು.