Advertisement

ಬೇಡಿಕೆ ಈಡೇರಿಕೆಗೆ ಎಬಿವಿಪಿ ಆಗ್ರಹ

02:57 PM Jan 20, 2021 | Adarsha |

ವಿಜಯಪುರ: ರಾಜ್ಯದ ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ನಗರದ ಗಾಂಧಿ ವೃತ್ತದಿಂದ ರ್ಯಾಲಿ ಆರಂಭಿಸಿ ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಸಲ್ಲಿಸಿದರು.

Advertisement

ಈ ವೇಳೆ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಕೋವಿಡ್‌ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡು, ಜೀವನ ನಿರ್ವಹಣೆಗೆ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಶೈಕ್ಷಣಿಕ ಚಟುವಟಿಕೆಗಳೂ ಸ್ಥಗಿತಗೊಂಡಿದ್ದು, ಈಚೆಗಷ್ಟೇ ಹಂತ ಹಂತವಾಗಿ ಶಾಲಾ-ಕಾಲೇಜುಗಳು ಆರಂಭಗೊಳ್ಳುತ್ತಿವೆ. ಆದರೆ ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ತ್ವರಿತವಾಗಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಸಂವಿಧಾನ ಎಲ್ಲ  ಕಾನೂನುಗಳ ತಾಯಿ: ಸಿದ್ರಾಮ್‌

ಕೋವಿಡ್‌ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅವರ ಕೌಟುಂಬಿಕ ಆರ್ಥಿಕ ಸ್ಥಿತಿಯೂ ದುರ್ಬಲವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ವಿದ್ಯಾರ್ಥಿ ವಸತಿ ನಿಲಯಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಮತ್ತೊಂದೆಡೆ ವಿದ್ಯಾರ್ಥಿ ವೇತನವೂ ಬಿಡುಗಡೆ ಆಗಿಲ್ಲ. ತಕ್ಷಣ ಸರ್ಕಾರ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಬಸವರಾಜ ಪೂಜಾರಿ ಮಾತನಾಡಿ, ಅನೇಕ ತಿಂಗಳ ನಂತರ ತರಗತಿಗಳು ಆರಂಭವಾಗಿವೆ. ವಿದ್ಯಾರ್ಥಿಗಳೂ ತಮ್ಮ ಊರುಗಳಿಂದ ತರಗತಿಗಳಿಗೆ ಹಾಜರಾಗಲು ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್‌ ತೆರೆದಿದ್ದು ಉಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ ಎಂದರು. ಅನೇಕ ಕಾಲೇಜುಗಳಲ್ಲಿ ಕೆಲವು ವಿಷಯಗಳಿಗೆ ಕಾಯಂ ಉಪನ್ಯಾಸಕರು ಇಲ್ಲ. ಪ್ರಸ್ತುತ ಕಾಲೇಜುಗಳು ಆರಂಭವಾಗಿ ವಿದ್ಯಾರ್ಥಿಗಳು ತರಗತಿಗಳಿಗೆ ಬರುತ್ತಿರುವ ಈ ಹೊತ್ತಿನಲ್ಲಿ ಅನೇಕ ವಿಷಯಗಳಿಗೆ ಉಪನ್ಯಾಸಕರೇ ಇಲ್ಲದೆ ತರಗತಿಗಳು ನಡೆಯದಿರುವುದು ವಿಪರ್ಯಾಸ.

Advertisement

ಕೂಡಲೇ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸಲು ಆದೇಶಿಸಬೇಕು, ಎಲ್ಲ ತರಗತಿಗಳು ನಡೆಸಿ, 12 ತಿಂಗಳ ವೇತನ ನೀಡಬೇಕು ಎಂದು ಆಗ್ರಹಿಸಿದರು. ಸಂಘಟನೆಯ ತಾಲೂಕು ಸಂಚಾಲಕ ಅಕ್ಷಯ ಯಾದವಾಡ, ಸಿದ್ದು ಪತ್ತಾರ, ವಿನೋದ ಮಣ್ಣೊಡ್ಡರ, ಪಾಂಡು ಮೊರೆ, ಬಸವರಾಜ ಲಗಳಿ, ಮಹಾಂತೇಶ ಕಂಬಾರ, ಮಂಜುನಾಥ ದಾಶ್ಯಾಳ, ಮಂಜುನಾಥ ಹಳ್ಳಿ, ಸಿದ್ದು ಘೋಡೆಕರ, ಸಂಜು ಘೋಡೆಕರ, ಮಾಳು ಪೂಜಾರಿ, ನಿಖೀತಾ ರಾಥೋಡ, ಸ್ವಾತಿ ಮಸೂತಿ, ಲಕ್ಷ್ಮೀ ಚವ್ಹಾಣ, ಅಂಜಲಿ ವಡ್ಡರ, ವೈಷ್ಣವಿ ಪಾಟೀಲ, ಸುನೀಲ ಕಬಾಡೆ, ಗಣೇಶ ಬಸನಾಳ, ರಾಕೇಶ ಚವ್ಹಾಣ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next