Advertisement

ರೇಖೆಗಳಲ್ಲಿ ಅರಳಿದ ಅಮೂರ್ತ ಕಲ್ಪನೆ 

06:00 AM May 04, 2018 | |

ರೇಖಾಚಿತ್ರ, ಛಾಯಾಚಿತ್ರ, ವರ್ಣಚಿತ್ರ ಮತ್ತು ವಿವಿಧ ಮಾಧ್ಯಮ ಚಿತ್ರ ಎಂಬುದಾಗಿ ಚಿತ್ರವನ್ನು ನಾಲ್ಕು ವಿಧಗಳಿಂದ ರಚಿಸಬಹುದು. ಬರಿಯ ರೇಖೆಗಳಿಂದಲೇ ಚಿತ್ರವನ್ನು ಪೂರ್ಣಗೊಳಿಸಿದಾಗ ಅದು ರೇಖಾಚಿತ್ರವಾಗುತ್ತದೆ. ರೇಖೆಗಳನ್ನೇ ಸೂಕ್ಷ್ಮವಾಗಿ ಹತ್ತಿರ ಹತ್ತಿರ ಎಳೆದಾಗ ಅದೇ ಛಾಯಾಚಿತ್ರದ ಪರಿಣಾಮವನ್ನು ತೋರಿಸುತ್ತದೆ. ರೇಖಾಚಿತ್ರವು ಒಂದು ವರ್ಣದಲ್ಲಿ ಇರುವ ಕಾರಣ ಅದು ವರ್ಣಚಿತ್ರವೂ ಹೌದು. ರೇಖಾಚಿತ್ರಗಳು ಭಾವ ಚಿತ್ರ ಮತ್ತು ವ್ಯಂಗ್ಯಚಿತ್ರಗಳ ಜೀವಾಳ. ಇವು ಸುಲಭ ರೀತಿಯಲ್ಲಿ ಚಿತ್ರ ರಚನೆಗೆ ದಾರಿ. ರೇಖೆಗಳನ್ನು ಎಳೆಯದೆ ಚಿತ್ರರಚನೆ ಕಷ್ಟಸಾಧ್ಯ.  ಪ್ರಕೃತಿಯಲ್ಲಿ ರೇಖೆಗಳಿಲ್ಲ ಎಂದು ವಾದಿಸುವವರು ಇದ್ದಾರೆ. ರೇಖೆಗಳೇ ಇಲ್ಲದಿದ್ದರೆ ಯಾವುದರ ಆಕಾರವೂ ಗುರುತಿಸಲಾಗದೆ ಎಲ್ಲವೂ ಅಮೂರ್ತವಾಗಬಹುದು. ಸೌಂದರ್ಯವೂ ಶೂನ್ಯವಾಗುವುದು. ರೇಖೆಗಳಲ್ಲಿ ಇಷ್ಟೊಂದು ಶಕ್ತಿ ಇರುವಾಗ ಅದನ್ನೆ ಬಳಸಿ ಯಾಕೆ ವೈವಿಧ್ಯಮಯ ಚಿತ್ರಗಳನ್ನು ರಚಿಸಬಾರದು ಎಂಬ ಕನಸು ಕಂಡ ಉಡುಪಿಯ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಚಿತ್ರಗಳ ಮೂಲಕ ರೂಪಿಸಿದರು. ಬ್ಲ್ಯಾಕ್‌ ಲೈನ್‌ ಶೀರ್ಷಿಕೆಯಡಿ ಅನೇಕ ಕಲಾಕೃತಿಗಳನ್ನು ರಚಿಸಿ ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ಪ್ರದರ್ಶಿಸಿದರು. ತಮ್ಮ ಚಾಕಚಕ್ಯತೆಯನ್ನು ರೇಖೆಗಳ ಮೂಲಕ ಅನಾವರಣಗೊಳಿಸಿದರು. 

Advertisement

 ಯುವ ಕಲಾವಿದರೆಂದರೆ ಹೊಸತನದ ಹುಡುಕಾಟದಲ್ಲಿರುವವರು. ಹಿರಿಯರ ಕಲಾಕೃತಿಗಳನ್ನು ಕಂಡು ಅದನ್ನು ಸಾಧ್ಯವಾದಷ್ಟು ಅರಗಿಸಿಕೊಂಡು ತಮ್ಮದೇ ಆದ ಶೈಲಿಯನ್ನು ಕಂಡುಕೊಂಡು ಮುಂದುವರಿಯುವವರು. ಅಂತಹ ಹುಡುಕಾಟದೊಂದಿಗೆ ಹೊರಟ ಈ ಯುವ ಕಲಾವಿದರು ತಮ್ಮ ಕಲಾಕೃತಿಗಳಲ್ಲಿ ರೇಖಾಕೌಶಲ್ಯದೊಂದಿಗೆ ಮೂರ್ತ-ಅಮೂರ್ತ ರೇಖಾಚಿತ್ರಗಳನ್ನು ರಚಿಸಿಟ್ಟಿದ್ದಾರೆ. ಕಲಾವಿದರಾದ ಹರೀಶ್‌ ನಾಯ್ಕ, ಪ್ರದೀಪ್‌ ಕುಮಾರ್‌, ರಂಜಿತ್‌ ಬಂಗೇರ, ಕೀರ್ತಿ ಕುಮಾರ್‌, ತೇಜರಾಜ್‌, ಮೇಘಾ ಹೆಗಡೆ, ಅಕ್ಷತಾರವರ ರೇಖಾಚಿತ್ರಗಳು ನವುರಾದ ರೇಖೆಗಳೊಂದಿಗೆ ಅರ್ಥಗರ್ಭಿತವಾಗಿ ಮೂಡಿದ್ದವು. ಭರತ್‌, ಅಶ್ವತ್‌ ಕುಮಾರ್‌, ವಿಕ್ರಮ್‌, ಚೇತನ್‌, ಪ್ರಶಾಂತ್‌ ಕುಮಾರ್‌, ಅವ್ಯಕ್ತಾ, ಜಾಹ್ನವಿ ಮೊದಲಾದವರ ರೇಖಾಚಿತ್ರಗಳು ವೈವಿಧ್ಯಮಯವಾಗಿದ್ದವು.  

 ಉಪಾಧ್ಯಾಯ ಮೂಡುಬೆಳ್ಳೆ 

Advertisement

Udayavani is now on Telegram. Click here to join our channel and stay updated with the latest news.

Next