ಪಣಜಿ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಲೆ ಬೆಳೆದ ರೀತಿ ಗೋವಾದಲ್ಲಿ ನೀವೆಲ್ಲರೂ ಸೇರಿ ಕಲೆ ಬೆಳೆಸಿದ ವಿಷಯ ತಿಳಿದು ನನಗೆ ಹೆಮ್ಮೆ ಅನಿಸುತ್ತದೆ. ಯಕ್ಷಗಾನ ಆರಾಧನಾ ಕಲೆ, ಸಂಸ್ಕೃತಿ, ಸಂದೇಶ ಸಾರುವ ಕಲೆ ಎಂದು ಪಟ್ಲ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಶ್ರೇಷ್ಠ ಭಾಗವತ ಸತೀಶ್ ಶೆಟ್ಟಿ ಪಟ್ಲ ಹೇಳಿದರು.
ಪಟ್ಲ ಫೌಂಡೇಶನ್, ಗೋವಾ ರಾಜ್ಯ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಅವರ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಲ ಫೌಂಡೇಶನ್ ವತಿಯಿಂದ ಗೋವಾದಲ್ಲಿನ ಕನ್ನಡ ಮತ್ತು ಇತರ ಶಾಲೆಯ ಮಕ್ಕಳಿಗೂ ಯಕ್ಷ ಶಿಕ್ಷಣ ನೀಡೋಣ ಎಂದು ಸತೀಶ್ ಶೆಟ್ಟಿ ಪಟ್ಲ ತಿಳಿಸಿದರು. ತುಳು ಕೂಟದ ಅಧ್ಯಕ್ಷ ಗಣೇಶ್ ಶೆಟ್ಟಿ, ಸತೀಶ್ ಶೆಟ್ಟಿ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜ ಪಣಜಿ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ನಿಕಟ ಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬಾದಾಮಿ, ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗೋವಾ ಕನ್ನಡ ಸಮಾಜದ ಬಗ್ಗೆ ವಿವರಿಸಿದರು.
ಮುಂಬರುವ ದಿನಗಳಲ್ಲಿ ಗೋವಾದಲ್ಲಿ ಗಾನ ವೈಭವ ಕಾರ್ಯಕ್ರಮ ನಡೆಸಿ ಕೊಡಬೇಕೆಂದು ಕೇಳಿಕೊಂಡಾಗ ಅದಕ್ಕೆ ಪಟ್ಲ ಸತೀಶ್ ಶೆಟ್ಟಿ ಒಪ್ಪಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ವತಿಯಿಂದ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುಬ್ರಮಣ್ಯ ಶೆಟ್ಟಿ, ಜಗದೀಶ ಶೆಟ್ಟಿ, ದಿನೇಶ್ ಮೊಗವೀರ, ಶಶಿಧರ್ ರೈ, ಪ್ರಶಾಂತ್ ಶೆಟ್ಟಿ, ಶರತ್ ಶೆಟ್ಟಿ, ಗಣೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.