ಅವರು ಪ್ರತ್ಯುತ್ತರ ಕೊಡುವಂತಿಲ್ಲ, ಅವರು ಯಾಕೆಂದು ಪ್ರಶ್ನಿಸುವಂತಿಲ್ಲ. ಅವರು ಕೇವಲ ಕರ್ತವ್ಯ ನಿರತರಾಗಿ ಪ್ರಾಣತ್ಯಾಗ ಮಾಡುವವರು. ನಾನು ಯಾರ ಬಗ್ಗೆ ಹೇಳುತ್ತಿದ್ದೇನೆಂದು ನಿಮಗೆ ತಿಳಿದಿರಬಹುದು. ಅವರೇ ನಮ್ಮ ದೇಶವನ್ನು ಕಾಯುವ ಹೆಮ್ಮೆಯ ವೀರ ಯೋಧರು. ಸೈನಿಕರೆಂದರೆ ರಾಷ್ಟ್ರವನ್ನು ಕಾಯುವ ಕಾವಲುಗಾರ. ಯಾವುದೇ ರೀತಿಯ ಪರಿಸ್ಥಿತಿಗೆ ಎದೆಗುಂದದೆ ಅದನ್ನು ಪ್ರಶ್ನಿಸದೆ ಧೈರ್ಯದಿಂದ ಹೋರಾಡುತ್ತಾರೆ. ಕೆಲವೊಂದು ಬಾರಿ ತಮ್ಮ ಪ್ರಾಣವನ್ನೇ ದೇಶದ ರಕ್ಷಣೆಗಾಗಿ, ದೇಶದ ಜನರ ಹಿತಕ್ಕಾಗಿ ಮುಡಿಪಾಗಿಡುತ್ತಾರೆ.
ಆಹಾರವಿಲ್ಲದೆ ನಾವು ಬದುಕಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಸೈನಿಕರಿಲ್ಲದೇ ನಮ್ಮ ಜೀವನವನ್ನು ಊಹಿಸಲೂ ಅಸಾಧ್ಯ. ಕೊರೆಯುವ ಚಳಿ, ಗಾಳಿ, ಮಳೆ, ಬಿಸಿಲು ಎನ್ನದೆ ಪ್ರತಿಕ್ಷಣವೂ ದೇಶವನ್ನು ಕಾಪಾಡಲು ತುದಿಗಾಲಿನಲ್ಲಿ ನಿಂತಿರುವ ಆ ವೀರ ಯೋಧರೆ ನಮ್ಮ ರಾಷ್ಟ್ರದ ನಿಜವಾದ ಆಪದಾºಂಧವರು. ಒಬ್ಬ ಯೋಧ ತನ್ನ ರಕ್ತದ ಮೂಲಕ ದೇಶದ ಭವಿಷ್ಯವನ್ನು ಬರೆಯುತ್ತಾನೆ. ತನ್ನ ಜೀವನವನ್ನು ನೀಡುವ ಮೂಲಕ ಅನೇಕ ಸುಂದರ ಘಟನೆಗಳಿಗೆ, ಸನ್ನಿವೇಶಗಳಿಗೆ ಮುನ್ನುಡಿ ಬರೆಯುತ್ತಾನೆ. ಅಂತಹ ವೀರರನ್ನು ನಾವು ಪ್ರತಿಕ್ಷಣ ನೆನೆದರೂ ತಪ್ಪೇನಿಲ್ಲ.
ಬಹುಶಃ ನಾವಿಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತ, ಸಂತೋಷದಿಂದ ಜೀವನ ನಡೆಸುತ್ತಿದ್ದೇವೆ ಅಂದರೆ ಅದರ ಹಿಂದೆ ಅನೇಕ ವೀರ ಯೋಧರ ನೋವು ಅಡಗಿದೆ. ತನ್ನ ಮನೆಯವರು, ಪ್ರೀತಿಪಾತ್ರರನ್ನು ಬಿಟ್ಟು ದೇಶದ ಯಾವುದೋ ಮೂಲೆಯ ಗಡಿ ಪ್ರದೇಶದಲ್ಲಿ ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ಈ ವೀರ ಯೋಧರಿಗೆ ನನ್ನ ಒಂದು ದೊಡ್ಡ ಸಲಾಂ.
ಶ್ರಾವ್ಯಾ ಎನ್. ಕೆ.
ದ್ವಿತೀಯ ಬಿ. ಕಾಂ., ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು, ಸವಣೂರು