Advertisement

ಕಿರುನಿವಾಸಗಳಿಗಿಂತ ಸೆರೆವಾಸವೇ ಮೇಲು

06:05 AM Aug 29, 2017 | Team Udayavani |

ನವದೆಹಲಿ: ದೇಶದ ಶೇ.80 ರಷ್ಟು ಕಡುಬಡವರು ಜೈಲಿನ ಕೊಠಡಿಗಿಂತಲೂ ಪುಟ್ಟದಾದ ಮನೆಯಲ್ಲಿ ಬದುಕುತ್ತಿದ್ದಾರೆ! ಹೌದು, ಸಮೀಕ್ಷಾ ವರದಿಯೊಂದು ಹೇಳುವಂತೆ, ದೇಶದಲ್ಲಿ ಕಿಕ್ಕಿರಿದು ತುಂಬಿರುವ ಜೈಲುಗಳಲ್ಲಿರುವ ಕೈದಿಗಳು, ಜೈಲಿನಿಂದ ಹೊರಗಿರುವ ಜನ ಬದುಕುತ್ತಿರುವುದಕ್ಕಿಂತಲೂ ಹೆಚ್ಚು ವಿಶಾಲವಾಗಿರುವ ಸ್ಥಳದಲ್ಲಿ ದಿನ ಕಳೆಯುತ್ತಿದ್ದಾರೆ.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಕಡು ಬಡವರು ಅತ್ಯಂತ ಕನಿಷ್ಠ ಸ್ಥಳದಲ್ಲಿ ವಾಸವಿರುವುದು ಅಧ್ಯಯನವೊಂದರಿಂದ ತಿಳಿದುಬಂದಿದೆ. 

Advertisement

ದೇಶದ ಶೇ.80ರಷ್ಟು ಕಡುಬಡ ಕುಟುಂಬಗಳು 449 ಚದರ ಅಡಿ ಅಥವಾ ಅದಕ್ಕಿಂತಲೂ ಕಡಿಮೆ ಸ್ಥಳದಲ್ಲಿ ನಿರ್ಮಿಸಿರುವ ಮನೆ ಅಥವಾ ಗುಡಿಸಲಲ್ಲಿ ವಾಸವಿವೆ. ದೇಶದಲ್ಲಿ ಕುಟುಂಬವೊಂದರಲ್ಲಿ ಸರಾಸರಿ 5 ಸದಸ್ಯರಿರುತ್ತಾರೆ ಎಂದು ಅಂದಾಜಿಸಲಾಗಿದೆ. ಈ ಪ್ರಕಾರ ಕಡುಬಡ ಕುಟುಂಬದ ಒಬ್ಬ ವ್ಯಕ್ತಿ ವಾಸವಿರುವುದು ಕೇವಲ 94 ಚದರ ಅಡಿ ಸ್ಥಳದಲ್ಲಿ. ಅಂದರೆ ದೇಶದಲ್ಲಿನ ಕಾರಾಗೃಹದ ಕೊಠಡಿಯೊಂದರ ವಿಸ್ತೀರ್ಣಕ್ಕೆ (96 ಚ.ಅ) ಸಮನಾದ ಸ್ಥಳದಲ್ಲಿ.

ನಗರದಲ್ಲಿ ಇನ್ನೂ ಕಡಿಮೆ
ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ) ನೀಡಿರುವ ವಸತಿ ಸ್ಥಿತಿಗತಿಗಳ ಸಮೀಕ್ಷಾ ವರದಿಯನ್ನು 2016ರ ಮಾಡೆಲ್‌ ಪ್ರಿಸನ್‌ ಮ್ಯಾನುವಲ್‌ ಜೊತೆ ಹೋಲಿಸಿ ನೋಡಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಗ್ರಾಮೀಣ ಭಾಗದ ಬಡವರಿಗೆ ಹೋಲಿಸಿದರೆ, ನಗರ ಪ್ರದೇಶದಲ್ಲಿನ ಅತಿ ಬಡ ಕುಟುಂಬಗಳು ಅತಿ ಕಡಿಮೆ ಸ್ಥಳದಲ್ಲಿ ನೆಲೆಸಿವೆ. ಒಟ್ಟು ಬಡವರ ಪೈಕಿ ಶೇ.60 ಮಂದಿ ಸರಾಸರಿ 380 ಚದರ ಅಡಿ ಅಥವಾ ಅದಕ್ಕಿಂತಲೂ ಕಡಿಮೆ ಸ್ಥಳದಲ್ಲಿ ವಾಸವಿದ್ದಾರೆ. ನಗರದಲ್ಲಿ ಕುಟುಂಬವೊಂದರಲ್ಲಿ ಸರಾಸರಿ 4 ಸದಸ್ಯರಿರುತ್ತಾರೆ ಅಂದುಕೊಂಡರೆ, ಒಬ್ಬ ವ್ಯಕ್ತಿಗೆ ಸಿಗುವುದು ಬರೀ 93 ಚದರ ಅಡಿ. ಇಲ್ಲೂ ವ್ಯಕ್ತಿಯೊಬ್ಬನಿಗೆ ಲಭ್ಯವಿರುವುದು ಕೈದಿಗೆ ಸಿಗುವುದಕ್ಕಿಂತಲೂ ಕಡಿಮೆ ಸ್ಥಳಾವಕಾಶ.

ಮತ್ತೂಂದು ಮಹತ್ವದ ಅಂಶವೆಂದರೆ ಆದರೆ ಎಲ್ಲ ಕುಟುಂಬಗಳಲ್ಲೂ ನಾಲ್ಕೇ ಜನ ಇರುವುದು ಅಸಾಧ್ಯ. ಕೆಲ ಕುಟುಂಬಗಳಲ್ಲಿ 8ರಿಂದ 10 ಮಂದಿ ಕೂಡ ಇರುತ್ತಾರೆ. ಇಂಥ ಪರಿಸ್ಥಿತಿಗಳಲ್ಲಿ ಇಡೀ ಕುಟುಂಬ ಕಿಷ್ಕಿಂಧೆಯಲ್ಲಿ ಕಷ್ಟಪಟ್ಟು ದಿನದೂಡಬೇಕು.

ಕನಿಷ್ಠ ಗೃಹ ಸ್ಥಳಾವಕಾಶದ ಲೆಕ್ಕದಲ್ಲಿ ಬಿಹಾರ ರಾಜ್ಯ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ವ್ಯಕ್ತಿಯೊಬ್ಬನಿಗೆ ಲಭ್ಯವಿರುವುದು ಕೇವಲ 66 ಚದರ ಅಡಿ ಜಾಗ. ಹಾಗೇ ದೇಶದ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಬಹುತೇಕ ಕಡುಬಡವರು ಜೈಲು ಕೋಣೆಗಿಂತಲೂ ಚಿಕ್ಕದಾಗಿರುವ ಸ್ಥಳದಲ್ಲಿ ಜೀವಿಸುತ್ತಿದ್ದಾರೆ.

Advertisement

ಬಯಲಿಗಿಂತ ಜೈಲೇ ಲೇಸು!
ವರದಿಯಲ್ಲಿ ಹೇಳಿರುವ ಪ್ರಕಾರ ದೇಶದ ಶೇ.80ರಷ್ಟು ಕಡುಬಡವರಿಗಿಂತಲೂ ಸುಖವಾಗಿರುವುದು ಜೈಲುಹಕ್ಕಿಗಳು. ಹೀಗಾಗಿ ಹೊರಜಗತ್ತಿನಲ್ಲಿ “ಸ್ವತಂತ್ರ’ವಾಗಿ ಕನಿಷ್ಠ ಸ್ಥಳದಲ್ಲಿ ಬದುಕುವುದಕ್ಕೆ ಹೋಲಿಸಿದರೆ, ವಾಸಕ್ಕೆ ಜೈಲೇ ಪ್ರಶಸ್ತ ಹಾಗೂ ವಿಶಾಲ ಸ್ಥಳ ಎಂದೆನ್ನಬಹುದು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಸಮುದಾಯಗಳ ಬಡವರ ಸ್ಥಿತಿ ನೋಡಿದರೆ ಜೈಲೇ ಲೇಸು ಅನಿಸಲೇಬೇಕು. ಕಾರಣ, ದೇಶದ ಪ.ಜಾತಿಯ ವ್ಯಕ್ತಿಯೊಬ್ಬ 70.3 ಚ.ಅ, ಪ.ಪಂಗಡದ ವ್ಯಕ್ತಿ 85.7 ಚ.ಅ ಸ್ಥಳದಲ್ಲಿ ವಾಸವಿದ್ದರೆ, ಗ್ರಾಮೀಣ ಭಾಗದ ಶೇ.20ರಷ್ಟು ಕಡು ಬಡವರು 78 ಚ.ಅ ಮತ್ತು ನಗರ ಪ್ರದೇಶದ ಶೇ.20ರಷ್ಟು ಕಡುಬಡವರು ಕೇವಲ 75 ಚ.ಅ ಸ್ಥಳದಲ್ಲಿ ಬದುಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next