Advertisement

50 ಕೋಟಿ ವರ್ಷಗಳ ಬಳಿಕ ಭಾರತ ರಶ್ಯಾ ಬಳಿಗೆ

12:30 AM Jan 18, 2019 | Team Udayavani |

ಉಡುಪಿ: ಸುಮಾರು 50 ಕೋಟಿ ವರ್ಷಗಳ ಹಿಂದೆ ದಕ್ಷಿಣ ಧ್ರುವ ಭಾರತವಿದ್ದಲ್ಲಿ ಇತ್ತು. ಮುಂದೆ 50 ಕೋಟಿ ವರ್ಷಗಳ ಬಳಿಕ ಭಾರತವು ರಶ್ಯಾ ಬಳಿ ಇರಬಹುದು ಎಂದು ಮಣಿಪಾಲ ಎಂಐಟಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಡಾ| ಕೆ. ಬಾಲಕೃಷ್ಣ ಹೇಳಿದರು.

Advertisement

ಟಿ.ಎ. ಪೈ ಹಿಂದಿ ಭವನದಲ್ಲಿ ಅ.ಭಾ. ಸಾಹಿತ್ಯ ಪರಿಷತ್‌ ಉಡುಪಿ ಘಟಕದ ಆಯೋಜನೆಯಲ್ಲಿ ಗುರುವಾರ “ಹೆಪ್ಪುಗಟ್ಟಿದ ಅಂಟಾರ್ಟಿಕಾ- ಪ್ರವಾಸಿಗನ ಕಣ್ಣಲ್ಲಿ’ ಕುರಿತು ಉಪನ್ಯಾಸ ನೀಡಿದ ಅವರು, ಭೂಮಿ ತಿರುಗುತ್ತ ಇರುವುದರಿಂದ ಇದು ಸಾಧ್ಯ. ದಕ್ಷಿಣ ಧ್ರುವದಲ್ಲಿ ಕಲ್ಲಿದ್ದಲು ಸಿಗುತ್ತಿದೆ. ಒಂದು ಕಾಲದಲ್ಲಿ ದಟ್ಟ ಅರಣ್ಯ ಪ್ರದೇಶ ನೆಲಸಮವಾಗಿ ಕಲ್ಲಿದ್ದಲಾಗಿ ಮಾರ್ಪಟ್ಟಿರಬಹುದು. ಭಾರತ ಮತ್ತು ದಕ್ಷಿಣ ಧ್ರುವದಲ್ಲಿರುವ ಕಲ್ಲುಗಳಲ್ಲಿ ಸಾಮ್ಯವಿದೆ. ದಕ್ಷಿಣ ಧ್ರುವ ಭಾರತಕ್ಕಿಂತ ನಾಲ್ಕಾರು ಪಟ್ಟು ದೊಡ್ಡದಿದೆ ಎಂದರು.

ದಕ್ಷಿಣ ಧ್ರುವ ಯಾರ ಸ್ವತ್ತೂ ಅಲ್ಲ
ದಕ್ಷಿಣ ಧ್ರುವ ಈಗ ಯಾರ ಸ್ವತ್ತೂ ಅಲ್ಲ. 1995ರ ವರೆಗೆ ಬ್ರಿಟನ್‌, ಅರ್ಜಂಟೀನ ಮೊದಲಾದ ದೇಶಗಳು ತಮ್ಮದೆಂದು ಗಡಿ ಗುರುತು ಹಾಕಿಕೊಂಡಿದ್ದವು. ಅಂಟಾರ್ಟಿಕಾ ಒಪ್ಪಂದ ಏರ್ಪಟ್ಟ ಬಳಿಕ ಇದು ಸಂಶೋಧನೆ ಮತ್ತು ಶಾಂತಿಗೆ ಮಾತ್ರ ಮೀಸಲಾಯಿತು. ಸುಮಾರು 55 ದೇಶಗಳಿಗೆ ವಸಾಹತು ಸ್ಥಾಪಿಸಲು ಅವಕಾಶ ಕೊಡಲಾಯಿತು ಎಂದು ಹೇಳಿದರು.

ಕರಗುವುದು ಕಂಡಿಲ್ಲ
ವಿಜ್ಞಾನಿಗಳು ದಕ್ಷಿಣಧ್ರುವ ಕರಗುತ್ತಿದೆ ಎಂದು ಹೇಳುತ್ತಾರಾದರೂ ನಾನು ಹೋದಾಗ ಕಂಡುಬರಲಿಲ್ಲ. ಇದರ ಬಗೆಗೆ ಸಂಶೋಧನೆ ನಡೆಯುತ್ತಿದೆ. ಇಲ್ಲಿ ಮಂಜುಗಡ್ಡೆ ಇಲ್ಲ, ಇದು ಶಿಲಾಪದರ. ಸಮುದ್ರದ ನೀರಿನ ಮೇಲೆ ಸುಮಾರು ಎರಡು ಕಿ.ಮೀ. ಮಂಜುಗಡ್ಡೆಯ ಸ್ಲಾéಬ್‌ ಇದೆ ಎಂದರು.

24 ಗಂಟೆ ಹಗಲು, 24 ಗಂಟೆ ರಾತ್ರಿ
ಗೋವಾದಲ್ಲಿರುವ ನೇಶನಲ್‌ ಸೆಂಟರ್‌ ಫಾರ್‌ ಪೋಲಾರ್‌ ಆ್ಯಂಡ್‌ ಓಶಿಯನ್‌ ರಿಸರ್ಚ್‌ ಮೂಲಕ ತಾನು ಅಧ್ಯಯನ ನಡೆಸಲು ಹೋಗಿದ್ದು, ಅಲ್ಲಿಗೆ ತೆರಳಲು ಕಾನೂನಿನ ಪಾಲನೆ, ದೈಹಿಕ ಪರೀಕ್ಷೆ ಹೀಗೆ ಅನೇಕ ತೊಡಕುಗಳಿವೆ. ನವೆಂಬರ್‌ನಿಂದ ಜನವರಿ ವರೆಗೆ ದಿನಪೂರ್ತಿ ಬೆಳಕು, ಫೆಬ್ರವರಿಯಲ್ಲಿ ನಿಧಾನವಾಗಿ ಸ್ವಲ್ಪ ಸ್ವಲ್ಪ ಕತ್ತಲು ಕವಿದು ಜೂನ್‌, ಜುಲೈ ವರೆಗೆ ದಿನಪೂರ್ತಿ ಕತ್ತಲು ಇರುತ್ತದೆ. ಗಾಳಿ ವಿಪರೀತವಿದ್ದರೂ ಪವನ ಶಕ್ತಿ ಪ್ರಯೋಗ ಪ್ರಯೋಜನವಾಗಿಲ್ಲ. ಸೌರಶಕ್ತಿಯೂ ಆಗಲಿಲ್ಲ. ಡೀಸೆಲ್‌ ಜನರೇಟರ್‌ ಮೂಲಕ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ ಎಂದವರು ವಿವರಿಸಿದರು.

Advertisement

ತಂತ್ರಜ್ಞಾನ, ಮಾಲಿನ್ಯದಲ್ಲಿ ಚೀನ ಮುಂದೆ
ದಕ್ಷಿಣ ಧ್ರುವದಲ್ಲಿ ಅಧ್ಯಯನಕ್ಕಾಗಿ ಇಸ್ರೋದ ಕೇಂದ್ರವಿದೆ. ಚೀನ ಕೇಂದ್ರದಲ್ಲಿ ದೂರವಾಣಿ ಟವರ್‌ ಹಾಕಿದ್ದು ಅವರಿಗೆ ದೂರವಾಣಿ ಕರೆ ಸುಲಭವಿದೆ. ಅವರು ತಂತ್ರಜ್ಞಾನದಲ್ಲಿ ಮುಂದಿರುವಂತೆ ಅಲ್ಲಿ ತ್ಯಾಜ್ಯ ವಿಸರ್ಜನೆ ಮೂಲಕ ಮಾಲಿನ್ಯದಲ್ಲಿಯೂ ಮುಂದಿದ್ದಾರೆ ಎಂದರು.

ಒಬ್ಬರಿಗೆ 1.5 ಕೋ.ರೂ. ಖರ್ಚು
ದಕ್ಷಿಣ ಧ್ರುವಕ್ಕೆ ಹೋಗಲು ಒಬ್ಬರಿಗೆ 1.5 ಕೋ.ರೂ. ಖರ್ಚು ಬರುತ್ತದೆ. ಇದನ್ನು ಸರಕಾರ ಭರಿಸುತ್ತದೆ. 38 ವರ್ಷಗಳಲ್ಲಿ 1,500 ಜನರು ಹೋಗಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.

ಮಲಮೂತ್ರ ನಿರ್ವಹಣೆಯೂ ಖರ್ಚು
ಅಲ್ಲಿ ನೀರನ್ನು ಸಮುದ್ರದಿಂದ ತೆಗೆದು ಶುದ್ಧೀಕರಿಸಿ ಕುಡಿಯಬೇಕು. ವಾರಕ್ಕೆ ಒಂದು ಬಾರಿ ಮಾತ್ರ ಸ್ನಾನ ಮಾಡಬಹುದು. ಡ್ರೈ ಟಾಯ್ಲೆಟ್‌ ಬಳಸಬೇಕು. ಮೂತ್ರವನ್ನು ಪರಿವರ್ತಿಸಿ ಸಮುದ್ರಕ್ಕೆ ಬಿಡಲಾಗುತ್ತದೆ. ಮಲವನ್ನು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ಮೂಲಕ ಗೋವಾಕ್ಕೆ ತಂದು ಹಾಕಲಾಗುತ್ತದೆ. ಮಲಮೂತ್ರ ಹೊರತುಪಡಿಸಿ ಎಲ್ಲ ತ್ಯಾಜ್ಯಗಳನ್ನು ಶುಲ್ಕ ವಿಧಿಸಿ ದಕ್ಷಿಣ ಆಫ್ರಿಕಾ ತರಿಸಿಕೊಳ್ಳುತ್ತದೆ ಎಂದರು. ಶ್ರೀಹರಿ ಸ್ವಾಗತಿಸಿ ಜಗದೀಶ ಪೈ ಪ್ರಸ್ತಾವನೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next