Advertisement

ಗೋರಕ್ಷಣೆಗಾಗಿ ಶ್ರೀಮಠದಿಂದ ಅಭಯಾಕ್ಷರ

11:23 AM Jul 16, 2017 | |

ಬೆಂಗಳೂರು: ರಾಮಚಂದ್ರಾಪುರ ಮಠದ ವತಿಯಿಂದ ಗೋಸಂರಕ್ಷಣೆಗಾಗಿ ಹೋರಾಟ ಹಮ್ಮಿಕೊಂಡಿದ್ದು, ಇತರರು ಅನ್ಯ ಪ್ರಾಣಿಗಳ ಸಂರಕ್ಷಣೆಗೆ ಹೋರಾಟ ಕೈಗೊಂಡರೆ ಅದಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ಮಠದ ಪೀಠಾಧ್ಯಕ್ಷರಾದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

Advertisement

ಪದ್ಮನಾಭನಗರದ ಪುಟ್ಟಲಿಂಗಯ್ಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಅಭಯಾಕ್ಷರ-ಹಾಲುಹಬ್ಬ’ದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, “ಎಲ್ಲವನ್ನೂ ನಾವೇ ಮಾಡುತ್ತೇವೆ ಎಂದರೆ ಅದು ಅಸಾಧ್ಯ. ನಮ್ಮ ಹೃದಯಕ್ಕೆ ಯಾವುದು ಹತ್ತಿರವೋ ಆ ವಿಷಯದ ಕುರಿತು ನಾವು ಆಂದೋಲನ ಮಾಡಬೇಕು. ಅದರಂತೆ ನಾವು ಗೋಸಂರಕ್ಷಣೆ ಆಂದೋಲನ ಮಾಡುತ್ತಿದ್ದೇವೆ. ಇತರೆ ಪ್ರಾಣಿಗಳ ರಕ್ಷಣೆಗೆ ಬೇರೆಯವರು ಆಂದೋಲನ ಮಾಡಿದರೆ ಅದನ್ನೂ ಬೆಂಬಲಿಸುತ್ತೇವೆ,’ ಎಂದರು.

“ಗೋಮಾಂಸ ಸೇವಿಸುವವರು ತಾವು ಕುಡಿಯುವ ಹಾಲಿನ ಕುರಿತಾಗಿ ಒಮ್ಮೆ ಚಿಂತಿಸಿದರೂ ಸಾಕು, ತಾವಾಗಿಯೇ ಗೋಮಾಂಸ ಭಕ್ಷಣೆ ನಿಲ್ಲಿಸುತ್ತಾರೆ.  ಗೋವು ಕೊಡುವ ಹಾಲು, ಮೂತ್ರ, ಗೋಮಯಗಳಿಗೆ ಹಲವು ರೂಪಗಳಿದ್ದು, ಮೈ-ಮನಗಳಿಂದ ಹಿಡಿದು, ಮನೆಯ ನೆಲವನ್ನೂ ಶುದ್ಧೀಕರಣಗೊಳಿಸುತ್ತದೆ,’ ಎಂದರು.

ಅಭಯಾಕ್ಷರ ಆಂದೋಲನದ ಕುರಿತು ಮಾತನಾಡಿದ ಶ್ರೀಗಳು, “ಗೋವಿನ ನೋವಿನ ಜತೆಗೆ ನಾವಿದ್ದೇವೆ ಎಂದು ಸ್ಪಷ್ಟವಾಗಿ ಮತ್ತು ಲಿಖೀತರೂಪದಲ್ಲಿ ಹೇಳುವುದೇ “ಅಭಯಾಕ್ಷರ’. ನಮಗೇನು ಬೇಕು ಎಂದು ಜನನಾಯಕನ ಬಳಿ ಹಕ್ಕೊತ್ತಾಯ ಮಂಡಿಸುವ ಹಕ್ಕು ಜನರಿಗೆ ಇದೆ. ಸಂವಿಧಾನದ ಮೇಲೆ ಪ್ರಮಾಣಮಾಡಿ ಅಧಿಕಾರ ಸ್ವೀಕರಿಸಿದ ಜನಪ್ರತಿನಿಧಿಗಳು ಸಂವಿಧಾನದ ಆಶಯವಾದ ಗೋಸಂರಕ್ಷಣೆಗೆ ಬದ್ಧರಾಗಬೇಕು ಎಂದು ಹೇಳಿದರು.

ಹಾರೋಹಳ್ಳಿಯ ಹೋರಾಟ ಮಾದರಿಯಾಗಲಿ: ಹಾರೋಹಳ್ಳಿ ಕಸಾಯಿಖಾನೆಯ ವಿಷಯ ಪ್ರಸ್ತಾಪಿಸಿದ ಅವರು, ರಾಮಚಂದ್ರಾಪುರ ಮಠವು ಈ ಹೋರಾಟದ ನೇತೃತ್ವ ವಹಿಸಿಕೊಂಡು ಕಸಾಯಿಖಾನೆ ಬೇಡ ಎಂದು ಊರಿನ ಪ್ರತಿಯೊಬ್ಬರಿಂದಲೂ ಸಹಿ ಮಾಡಿಸಿ ಸಂಬಂಧಿಸಿದವರಿಗೆ ಸಲ್ಲಿಸಲಾಯಿತು. ಅಂದಿನಿಂದ ಇಂದಿನವರೆಗೆ ಕಸಾಯಿಖಾನೆಯ ವಿಷಯದಲ್ಲಿ ಒಂದು ಹೆಜ್ಜೆಯನ್ನು ಮುಂದಿಡಲು ಸಂಬಂಧಿಸಿದವರಿಗೆ ಆಗಲಿಲ್ಲ. ಇದೇ ಮಾದರಿಯ ಹೋರಾಟವನ್ನು ಗೋಸಂರಕ್ಷಣೆ ವಿಚಾರದಲ್ಲೂ ಹಮ್ಮಿಕೊಳ್ಳಬೇಕು ಎಂದರು.

Advertisement

ಕಲಾವಿದ ಅರುಣ್‌ ಸಾಗರ್‌ ಮಾತನಾಡಿ, ಗೋಸಂರಕ್ಷಣೆಗಾಗಿ ರಾಘವೇಶ್ವರ ಸ್ವಾಮೀಜಿ ನಡೆಸುತ್ತಿರುವುದು ಬರಿ ಹೋರಾಟವಲ್ಲ. ಅನೇಕ ವರ್ಷಗಳಿಂದ ಅವರು ಈ ಕುರಿತು ಮಾಡುತ್ತಿರುವ ಕಾರ್ಯಗಳು ಆಂದೋಲನ ಸ್ವರೂಪದ್ದಾಗಿದೆ. ನಮ್ಮ ಮನೆಯಲ್ಲಿಯೂ 110 ಗೋವುಗಳಿತ್ತು. ಆ ಗೋವುಗಳ ಉತ್ಪನ್ನಗಳಿಂದಲೇ ನಾನು ಹೋಟೆಲ್ ನಡೆಸುತ್ತಿದ್ದೆ ಎಂದು ನೆನಪಿಸಿಕೊಂಡರು.

ಎಪಿಎಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣಸ್ವಾಮಿ, ಖ್ಯಾತ ಗಾಯಕ ಶಶಿಧರ ಕೋಟೆ, ಸಾಮಾಜಿಕ ಕಾರ್ಯಕರ್ತೆ ಶಕುಂತಲಾ ಅಯ್ಯರ್‌, ಜ್ಯೋತಿ ಗ್ರೂಪ್‌ನ ನರಸಿಂಹನ್‌ ಮತ್ತಿತರರು ಇದ್ದರು. ಇದೇ ವೇಳೆ ಮಾ ಗೋ ಪ್ರಾಡೆಕ್ಟ್ನ ಕ್ಷೀರಬಲ ತೈಲ ಎಂಬ ನೂತನ ಉತ್ಪನ್ನ ಲೋಕಾರ್ಪಣೆ ಮಾಡಲಾಯಿತು. ಪದ್ಮನಾಭನಗರದಲ್ಲಿ ನಾಗರಿಕರಿಂದ ಸಂಗ್ರಹಿಸಿದ ಅಭಯಾಕ್ಷರ ಹಕ್ಕೊತ್ತಾಯದ ಪತ್ರಗಳನ್ನು ಸಾಂಕೇತಿಕವಾಗಿ ಸ್ವಾಮೀಜಿಯವರಿಗೆ ಹಸ್ತಾಂತರಿಸಲಾಯಿತು. ಆಂದೋಲನದಲ್ಲಿ ಗೋಸಂಬಂಧಿ ಪ್ರದರ್ಶನಗಳು,ಹಾಲಿನ ಸಿಹಿತಿಂಡಿ ಮುಂತಾದವುಗಳು ಇದ್ದವು.

ಗೋಧೀಕ್ಷೆ: ಅಭಿಯಾಕ್ಷರ-ಹಾಲುಹಬ್ಬ ಕಾರ್ಯಕ್ರಮದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಗೋವನ್ನು ರಕ್ಷಿಸಲು ಮುಂದೆ ಬರುವವರಿಗೆ ಗೋಧೀಕ್ಷೆ ನೀಡಿದರು. ಪದ್ಮನಾಭನಗರ ಹಾಗೂ ಸುತ್ತಲಿನ ನೂರಾರು ಗೋಪ್ರೇಮಿಗಳು ಗೋದೀಕ್ಷೆ ಸ್ವೀಕರಿಸಿ, ಗೋ ಸೇವೆಗೆ ಸಿದ್ಧರಿರುವುದಾಗಿ ಪ್ರತಿಜ್ಞೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next