Advertisement

Abhishek Sharma ಸೆಂಚುರಿ ಹೊಡೆದ್ದು ಗಿಲ್‌ ಬ್ಯಾಟ್‌ನಲ್ಲಿ!: ಸಂತಸಪಟ್ಟ ಯುವಿ

11:06 PM Jul 08, 2024 | Team Udayavani |

ಹರಾರೆ: ಐಪಿಎಲ್‌ ಹೀರೋ, ಎಡಗೈ ಓಪನರ್‌ ಅಭಿಷೇಕ್‌ ಶರ್ಮ ಟೀಮ್‌ ಇಂಡಿಯಾ ಪರ ರನ್‌ ಸುರಿಮಳೆಗೈ ಯಲಾರಂಭಿಸಿದ್ದಾರೆ. ಜಿಂಬಾಬ್ವೆ ಎದುರಿನ ಪದಾರ್ಪಣ ಟಿ20 ಪಂದ್ಯದಲ್ಲಿ ಖಾತೆ ತೆರೆಯದೆ ಹೋದರೂ ರವಿವಾರದ ದ್ವಿತೀಯ ಮುಖಾಮುಖೀಯಲ್ಲಿ ಕೇವಲ 46 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ಈ ಬ್ಯಾಟಿಂಗ್‌ ವೈಭವದ ವೇಳೆ ಅಭಿಷೇಕ್‌ ಶರ್ಮ ಬಳಸಿದ್ದು ನಾಯಕ ಶುಭಮನ್‌ ಗಿಲ್‌ ಅವರ ಬ್ಯಾಟ್‌ ಎಂಬುದು ವಿಶೇಷ. ಸ್ವತಃ ಆಭಿಷೇಕ್‌ ಅವರೇ ಈ ಸಂಗತಿಯನ್ನು ತಿಳಿಸಿದ್ದಾರೆ.

Advertisement

“ಈ ಸಂದರ್ಭದಲ್ಲಿ ನಾನು ನಾಯಕ ಶುಭಮನ್‌ ಗಿಲ್‌ ಅವರಿಗೆ ಸ್ಪೆಷಲ್‌ ಥ್ಯಾಂಕ್ಸ್‌ ಹೇಳಬಯಸುತ್ತೇನೆ. ಅವರು ಸೂಕ್ತ ಸಮಯದಲ್ಲಿ ತಮ್ಮ ಬ್ಯಾಟ್‌ ನೀಡಿದರು. ಇದು ಅಂಡರ್‌-14 ಕ್ರಿಕೆಟ್‌ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ನಾನು ಗಿಲ್‌ ಅವರ ಬ್ಯಾಟ್‌ನಲ್ಲಿ ಆಡಿದಾಗಲೆಲ್ಲ ಉತ್ತಮ ನಿರ್ವಹಣೆ ನೀಡುತ್ತ ಬಂದಿದ್ದೇನೆ’ ಎಂಬುದಾಗಿ ಅಭಿಷೇಕ್‌ ಶರ್ಮ ಹೇಳಿದರು.

“ನಾನು ಶುಭಮನ್‌ ಗಿಲ್‌ ಅವರಿಂದ ಬ್ಯಾಟ್‌ ಪಡೆಯುವುದು ಬಹಳ ಕಷ್ಟವಾ ಗಿತ್ತು. ಅಷ್ಟೊಂದು ಸುಲಭದಲ್ಲಿ ಅವರು ಬ್ಯಾಟ್‌ ಕೊಡುತ್ತಿರಲಿಲ್ಲ. ಕಮ್‌ಬ್ಯಾಕ್‌ ಮಾಡ ಬೇಕಾದರೆ ನನಗೆ ಇದೊಂದೇ ಕೊನೆಯ ಆಯ್ಕೆಯಾಗಿತ್ತು. ಇದರಲ್ಲಿ ಯಶಸ್ವಿಯಾದೆ’ ಎಂಬುದಾಗಿ ಅಭಿಷೇಕ್‌ ಹೇಳಿದರು.

“ಸೊನ್ನೆ’ಗೆ ಯುವಿ ಖುಷಿ!
ಅಭಿಷೇಕ್‌ ಶರ್ಮ ಟೀಮ್‌ ಇಂಡಿಯಾದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರ ಶಿಷ್ಯ. ಯುವಿ ಈ ಪ್ರತಿಭಾನ್ವಿತ ಕ್ರಿಕೆಟಿಗನ ಮೆಂಟರ್‌ ಕೂಡ ಹೌದು. ಯುವರಾಜ್‌ ಶೈಲಿಯಲ್ಲೇ ಅಭಿಷೇಕ್‌ ಬ್ಯಾಟ್‌ ಬೀಸುವುದನ್ನು ಗಮನಿಸಬಹುದು.

ಈ ಸಂದರ್ಭದಲ್ಲಿ ಅಭಿಷೇಕ್‌ ತನ್ನ ಗುರು ಯುವರಾಜ್‌ ಜತೆಗಿನ ಮೊದಲ ಪಂದ್ಯಕ್ಕೆ ಸಂಬಂಧಿಸಿದ ಅಚ್ಚರಿಯೊಂದನ್ನು ಉಲ್ಲೇಖೀಸಿದರು. ಇಲ್ಲಿ ಅಭಿಷೇಕ್‌ ಖಾತೆ ತೆರೆಯಲು ವಿಫ‌ಲರಾಗಿದ್ದರು. ಆದರೂ ಇದರಿಂದ ಯುವರಾಜ್‌ಗೆ ಬಹಳ ಖುಷಿ ಆಯಿತಂತೆ!

Advertisement

“ಶನಿವಾರದ ಪಂದ್ಯದ ಬಳಿಕ ನಾನು ಯುವರಾಜ್‌ ಸಿಂಗ್‌ ಜತೆ ಮಾತಾಡಿದೆ. ಆಗ ನಾನು ಖಾತೆ ತೆರೆಯಲು ವಿಫ‌ಲನಾಗಿದ್ದೆ. ಆದರೂ ಯುವರಾಜ್‌ ಇದಕ್ಕೆ ಖುಷಿಪಟ್ಟರು. ಇದೊಂದು ಉತ್ತಮ ಆರಂಭ ಎಂದೂ ಹೇಳಿದರು. ಆದರೆ ಅವರೇಕೆ ಸಂತಸಪಟ್ಟರು ಎಂಬುದು ನನಗೆ ಈಗಲೂ ಅರ್ಥವಾಗಿಲ್ಲ. ಆದರೆ ಶತಕದ ಬಳಿಕ ಯುವರಾಜ್‌ಗೆ
ನನ್ನ ಕುಟುಂಬದವರಿಗಾದಷ್ಟೇ ಹೆಮ್ಮೆ ಆಗಿದೆ. ನಿನ್ನಿಂದ ಇನ್ನಷ್ಟು ಸಾಧನೆಯನ್ನು ನಿರೀಕ್ಷಿಸುತ್ತಿದ್ದೇನೆ ಎಂದಿದ್ದಾರೆ’ ಎಂಬುದಾಗಿ ಅಭಿಷೇಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next