ಬೆಂಗಳೂರು: ಸಹಜ ನ್ಯಾಯದ ತಣ್ತೀಗಳನ್ನು ಪರಿಗಣಿಸದೆ ಮತ್ತು ಪೂರ್ವಾನುಮತಿ ನೀಡುವ ಮೊದಲಿನ ಕನಿಷ್ಠ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ನೀಡಿರುವ ಅನುಮತಿ ರದ್ದಾಗಲೇಬೇಕು. ಜತೆಗೆ ಆಧಾರರಹಿತ ದೂರುಗಳನ್ನು ಸಲ್ಲಿಸಿ, ದ್ವಂದ್ವ ನಿಲುವುಗಳನ್ನು ತಾಳುವ ಮೂಲಕ ರಾಜ್ಯಪಾಲರು ಮತ್ತು ಹೈಕೋರ್ಟ್ ಜತೆಗೆ ಆಟವಾಡುತ್ತಿರುವ ದೂರುದಾರ ಟಿ.ಜೆ. ಅಬ್ರಹಾಂ ಅವರಿಗೆ ದಂಡ ವಿಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಬಲವಾಗಿ ವಾದಿಸಿದ್ದಾರೆ.
ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿರುವ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರಾದ ಮುಖ್ಯಮಂತ್ರಿ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, ಅಭಿಯೋಜನೆಗೆ ಟಿ.ಜೆ. ಅಬ್ರಹಾಂ ಅನುಮತಿ ಕೋರಿದ್ದಾರೆ, ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ವಿಪರ್ಯಾಸವೆಂದರೆ ಸಿಎಂ ವಿರುದ್ಧ ಅಭಿಯೋಜನೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಟಿ.ಜೆ. ಅಬ್ರಹಾಂ, ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಪ್ರಕಾರ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅದರಂತೆ ಅಭಿಯೋಜನೆಗೆ ನೀಡಿರುವ ಅನುಮತಿ ರದ್ದಾಗಲೇಬೇಕು. ಅಷ್ಟೇ ಅಲ್ಲ ರಾಜ್ಯಪಾಲರ ಮುಂದೆ ಒಂದು ಮನವಿ, ನ್ಯಾಯಾಲಯದ ಮುಂದೆ ಅದಕ್ಕೆ ತದ್ವಿರುದ್ಧ ಹೇಳಿಕೆ ನೀಡಿರುವ ವ್ಯಕ್ತಿ (ಅಬ್ರಹಾಂ) ರಾಜ್ಯಪಾಲರು ಮತ್ತು ನ್ಯಾಯಾಲಯದ ಜತೆ ಆಟವಾಡುತ್ತಿದ್ದಾರೆ. ಈ ವ್ಯಕ್ತಿ ಸಲ್ಲಿಸಿದ ದೂರನ್ನು ರಾಜ್ಯಪಾಲರು ಪ್ರಾಥಮಿಕ ಹಂತದಲ್ಲೇ ರದ್ದುಮಾಡಿ ದಂಡ ವಿಧಿಸಬೇಕಿತ್ತು. ಅವರ ಅಧಿಕಾರ ವ್ಯಾಪ್ತಿಯಲ್ಲಿ ಹಾಗೇ ಮಾಡಲು ಅವಕಾಶ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ನ್ಯಾಯಾಲಯ ಆ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಮುಂದುವರಿದು ದೂರುದಾರರನ್ನು “ಆಲಿಸ್ ಇನ್ ವಂಡರ್‌ಲ್ಯಾಂಡ್’ನ ಕಾಲ್ಪನಿಕ ಪಾತ್ರಕ್ಕೆ ಹೋಲಿಕೆ ಮಾಡಿದ ಸಿಂಘ್ವಿ, ಯಾರೋ ದಾರಿಹೋಕರು ದೂರು ಕೊಟ್ಟ ತತ್‌ಕ್ಷಣ ಅದಕ್ಕೆ ಸ್ಪಂದಿಸುವುದರಿಂದ ರಾಜ್ಯಪಾಲರು ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳಬೇಕು. ಒಂದು ಕೈಯಲ್ಲಿ ದೂರು ಸ್ವೀಕರಿಸಿ, ಮತ್ತೂಂದು ಕೈಯಲ್ಲಿ ಅಭಿಯೋಜನೆಗೆ ಅನುಮತಿ ನೀಡುವ ಕ್ರಮ ಕಾನೂನಿನ ಊಹೆಗೆ ನಿಲುಕುವಂತದ್ದಲ್ಲ. ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ಅನುಮತಿ ಕೋರಿ ದೂರು ಸಲ್ಲಿಸುವುದಕ್ಕಿಂತ ಸಾಕಷ್ಟು ಹಿಂದೆಯೇ ಶಶಶಿಕಲಾ ಜೊಲ್ಲೆ, ಮುರಗೇಶ್ ನಿರಾಣಿ, ಎಚ್.ಡಿ. ಕುಮಾರಸ್ವಾಮಿ ಸೇರಿ ನಾಲ್ವರ ವಿರುದ್ಧ ಅಭಿಯೋಜನೆಗೆ ಅನುಮತಿ ಕೇಳಲಾಗಿದೆ. ಅವುಗಳಿಗೆ ಇಲ್ಲದ ಆತುರ ಸಿದ್ದರಾಮಯ್ಯ ಪ್ರಕರಣದಲ್ಲಿ ತೋರಿಸಲಾಗಿದೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೊದಲು ರಾಜ್ಯಪಾಲರು ಕಾನೂನಿನ ಪ್ರಕ್ರಿಯೆ ಅನುಸರಿಸಲಿಲ್ಲ, ವಿವೇಚನೆ ಬಳಸಿಲ್ಲ ಎಂಬುದನ್ನು ಸಾಕ್ಷೀಕರಿಸುತ್ತದೆ ಎಂದರು.
ಫ್ರೆಂಡ್ಲಿ ಮ್ಯಾಚ್ ಆಡಬೇಡಿ
ಸಿಂಘ್ವಿ ವಾದಕ್ಕೆ ಆಕ್ಷೇಪಿಸಿದ ದೂರುದಾರರ ಪರ ವಕೀಲರು, ದೂರುದಾರರನ್ನು ಈ ರೀತಿ ಕರೆಯುವುದು ಸೂಕ್ತವಲ್ಲ. ನಾಲ್ವರ ವಿರುದ್ಧ ಅಭಿಯೋಜನೆಗೆ ಅನುಮತಿ ರಾಜ್ಯಪಾಲರ ಬಳಿ ಬಾಕಿ ಇದೆ ಎಂದಾದರೆ ಸಿಎಂ ಅದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಿ. ನೀವು ಫ್ರೆಂಡ್ಲಿ ಗವರ್ನರ್ ಅಂತ ಹೇಳಿದಂತೆ ನಾವು ಫ್ರೆಂಡ್ಲಿ ಸಿಎಂ ಎಂದು ಕರೆಯಬಹುದಾ ಎಂದರು. ಆಗ ಮಧ್ಯಪ್ರವ್ರೇಶಿಸಿದ ನ್ಯಾಯಪೀಠ, ಇಲ್ಲಿ ಫ್ರೆಂಡ್ಲಿ ಮ್ಯಾಚ್ ಆಡಬೇಡಿ ಎಂದು ಹೇಳಿ, ದೂರುದಾರರನ್ನು ಬೇರೆ ಯಾವುದಕ್ಕೂ ಹೋಲಿಸದೆ ಪ್ರತಿವಾದಿಗಳು ಅಂತ ಕರೆಯಿರಿ ಎಂದು ಸಿಂಘ್ವಿ ಅವರಿಗೆ ಹೇಳಿತು. ಆಗ ಸಿಂಘ್ವಿ ವಾದ ಮುಂದುವರಿಸಿದರು.
ಸಾಲು, ಸಾಲು ಹುಚ್ಚುತನ
ಒಂದೇ ಅಲ್ಲ, ದೂರುದಾರರಿಂದ ಸಾಲು ಸಾಲು ಹುಚ್ಚುತನಗಳು ನಡೆದಿವೆ. ದೂರುದಾರರೊಬ್ಬರು ಇದೇ ವಿಚಾರವಾಗಿ ಲೋಕಾಯುಕ್ತಕ್ಕೂ ದೂರು ಕೊಟ್ಟಿದ್ದಾರೆ. ರಾಜ್ಯಪಾಲರಿಗೂ ದೂರು ಕೊಟ್ಟಿದ್ದಾರೆ. ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ದೂರು ಏನಿದೆ ಅಂತಲೂ ನಮಗೆ ಗೊತ್ತಿಲ್ಲ. ಇವುಗಳ ಸಂಬಂಧ ಶೋಕಾಸ್ ನೋಟಿಸ್ ಸಹ ರಾಜ್ಯಪಾಲರು ಕೊಟ್ಟಿಲ್ಲ. ಆದರೆ ಅಭಿಯೋಜನೆಗೆ ಅನುಮತಿ ನೀಡಿದ ಅಂತಿಮ ಆದೇಶದಲ್ಲಿ ಈ ಇಬ್ಬರ ದೂರುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಮೂಲಕ ರಾಜ್ಯಪಾಲರಿಂದ ಸಹಜ ನ್ಯಾಯದ ಉಲ್ಲಂಘನೆಯಾಗಿದೆ ಎಂದು ದೂರಿದರು.