“ಅಭಿರಾಮಚಂದ್ರ’ ಸಿನಿಮಾದ ಟೈಟಲ್ಲೇ ಹೇಳುವಂತೆ ಅಭಿ, ರಾಮ ಮತ್ತು ಚಂದ್ರ ಎಂಬ ಮೂವರು ಹುಡುಗರು ಮತ್ತವರ ಸ್ನೇಹ, ಪ್ರೀತಿ, ಪ್ರೇಮ ಹುಡುಕಾಟ ಮತ್ತು ಹುಡುಕಾಟದ ಸುತ್ತ ನಡೆಯುವ ಸಿನಿಮಾ. ಮೂರು ಬೇರೆ ಬೇರೆ ಹಿನ್ನೆಲೆಯಿಂದ ಬಂದ ಮೂವರು ಹುಡುಗರು, ತಮ್ಮ ಸ್ನೇಹದ ಜೊತೆ ಜೊತೆಗೇ ಕಣ್ಣಿಗೆ ಕಾಣದ ಪ್ರೀತಿಯ ಬಲೆಯೊಳಕ್ಕೆ ಸಿಲುಕಿಕೊಳ್ಳುತ್ತಾರೆ. ಅಂತಿಮವಾಗಿ ಈ ಹುಡುಗರ ನಡುವಿನ ಸ್ನೇಹ ಉಳಿದುಕೊಳ್ಳುತ್ತದೆಯಾ ಅಥವಾ ಪ್ರೀತಿ ಗೆಲ್ಲುತ್ತದೆಯಾ ಎಂಬುದೇ “ಅಭಿರಾಮಚಂದ್ರ’ ಸಿನಿಮಾದ ಕಥಾಹಂದರ. ಅದು ಹೇಗಿದೆ ಎಂಬುದನ್ನು ನಿಮ್ಮ ಅನುಭವಕ್ಕೆ ತಂದುಕೊಳ್ಳುವುದಾದರೆ, ನೀವೊಮ್ಮೆ ಈ ಹೊಸಬರ “ಅಭಿರಾಮಚಂದ್ರ’ ಸಿನಿಮಾದ ಕಡೆಗೆ ಮುಖ ಮಾಡಬಹುದು.
“ಅಭಿರಾಮಚಂದ್ರ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಸಿನಿಮಾ. ಹಾಗಾಗಿ ಸಿನಿಮಾದ ಕಲಾವಿದರ ಅಭಿನಯ, ಪಾತ್ರಗಳ ಪೋಷಣೆ ಮತ್ತು ಚಿತ್ರಕಥೆ ನಿರೂಪಣೆ ಎಲ್ಲದರಲ್ಲೂ ಒಂದಷ್ಟು ಹೊಸತನ ನಿರೀಕ್ಷಿಸಬಹುದು. ಕಲಾವಿದರಾದ ರಥ ಕಿರಣ್, ಸಿದ್ಧು ಮೂಲಿಮನಿ, ನಾಟ್ಯರಂಗ, ಶಿವಾನಿ ರೈ ತಮ್ಮ ಪಾತ್ರಗಳಲ್ಲಿ ನೋಡುಗರಿಗೆ ಇಷ್ಟವಾಗುತ್ತಾರೆ.
ಬೆಂಗಳೂರಿನ ಜಂಜಾಟದ ಬದುಕು, ದಕ್ಷಿಣ ಕನ್ನಡದ ಕರಾವಳಿಯ ಸೊಗಡು, ಮಲೆನಾಡ ಸೊಬಗು ಎಲ್ಲವನ್ನೂ ಚಿತ್ರದಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. “ಅಭಿರಾಮಚಂದ್ರ’ದ ಚಿತ್ರಕಥೆ ಮತ್ತು ನಿರೂಪಣೆಗೆ ನಿರ್ದೇಶಕರು ಇನ್ನಷ್ಟು ವೇಗ ನೀಡಿದ್ದರೆ, ಹುಡುಗರ ಹುಡುಗಾಟ ಮತ್ತು ಹುಡುಕಾಟ ಎಲ್ಲವೂ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರುವ ಸಾಧ್ಯತೆಗಳಿದ್ದವು.
ತಾಂತ್ರಿಕವಾಗಿ ಸಿನಿಮಾದ ಛಾಯಾ ಗ್ರಹಣ ಗಮನ ಸೆಳೆಯುವಂತಿದೆ. ಒಂದೆರಡು ಹಾಡುಗಳು ಅಲ್ಲಲ್ಲಿ ಗುನುಗುವಂತಿದೆ. ಸಂಕಲನ ಕಾರ್ಯ ಇನ್ನಷ್ಟು ಹರಿತವಾಗಿದ್ದರೆ, ಕೆಲ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ, “ಅಭಿರಾಮಚಂದ್ರ’ ಇನ್ನಷ್ಟು ಹೊಳೆಯುವಂತೆ ಮಾಡಬಹುದಿತ್ತು.