Advertisement

ಅಭಿನಯ ಮಂಟಪ ಮುಂಬಯಿ ವಾರ್ಷಿಕೋತ್ಸವ ಸಂಭ್ರಮ, ಸಮ್ಮಾನ ಸಮಾರಂಭ

04:19 PM Nov 22, 2018 | Team Udayavani |

ಮುಂಬಯಿ: ನಗರದ ಉದ್ಯಮಿ ದಿವಾಕರ ಶೆಟ್ಟಿ ಅಡ್ಯಾರ್‌ ಅವರ ಮುಂದಾಳತ್ವದ ಸಾಯಿಸಂಧ್ಯಾ ನಾಟಕ ಸಂಸ್ಥೆಯ ಮೂಲಕ ನಾನು ಮುಂಬಯಿಯಲ್ಲಿ ಮೊಟ್ಟಮೊದಲ ಬಾರಿಗೆ ರಂಗಪ್ರವೇಶಿಸಿದ್ದೆ. ಈ ಪ್ರದರ್ಶನದ ಅನಂತರ ನನಗೆ ಮಹಾನಗರದಲ್ಲಿ ವೇದಿಕೆಯನ್ನು ಕಲ್ಪಿಸಿ, ನನ್ನನ್ನು ನುರಿತ ಕಲಾವಿದನ ಸಾಲಿನಲ್ಲಿ ಗುರುತಿಸಿಕೊಟ್ಟ ಸಂಸ್ಥೆ ಎಂದರೆ ಅದು ಅಭಿನಯ ಮಂಟಪ. ಈ ಸಂಸ್ಥೆಯ ಮುಖಾಂತರ ನಾನು ಬಹಳಷ್ಟನ್ನು ಕಲಿತುಕೊಂಡಿದ್ದೇನೆ. ನನ್ನನ್ನು ನಾನು ತಿದ್ದಿಕೊಂಡು ಓರ್ವ ಪರಿಪೂರ್ಣ ಕಲಾವಿದನನ್ನಾಗಿ ರೂಪಿಸಿದ ಹಿರಿಮೆ ಈ ಕಲಾ ಸಂಸ್ಥೆಯ ಲೇಖಕ, ನಿರ್ದೇಶಕ ನನ್ನ ಪಾಲಿನ ಗುರುವಿನ ಸ್ಥಾನದಲ್ಲಿರುವ ಕರುಣಾಕರ ಕೆ. ಕಾಪು ಮತ್ತು ನನ್ನ ಜೊತೆ ಅಭಿನಯಿಸಿದ ಬಳಗದ ಸದಸ್ಯರಿಗೆ ಸಲ್ಲಬೇಕು. ಅಭಿನಯ ಮಂಟಪ ನನ್ನ ಕಲಾಜೀವನದ ಎರಡನೇ ಪಾಠಶಾಲೆಯಾಗಿದೆ. ನಾನು ಇಂದು ಕಲಾಬದುಕಿನಲ್ಲಿ ಏನಾದರೂ ಸಾಧಿಸಿದ್ದರೆ ಅದರ ಸಂಪೂರ್ಣ ಶ್ರೇಯಸ್ಸು  ಈ ಕಲಾಬಳಗಕ್ಕೆ ಸಲ್ಲುತ್ತದೆ ಎಂದು ಪ್ರಸಿದ್ಧ ಕಲಾವಿದ, ತುಳು-ಕನ್ನಡ ಚಿತ್ರನಟ ಚೇತನ್‌ ರೈ ಮಾಣಿ ಅವರು ನುಡಿದರು.

Advertisement

ನ.18 ರಂದು ಸಂಜೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಅಭಿನಯ ಮಂಟಪ ಮುಂಬಯಿ ಇದರ 36 ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಂಸ್ಥೆಯ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಭಿನಯ ಮಂಟಪ ನನ್ನ ಕಲಾಬದುಕಿಗೆ ಭದ್ರ ತಳಪಾಯವನ್ನು ಹಾಕಿಕೊಟ್ಟಿದೆ. ಕಲೆಯನ್ನು ಕರಗತವಾಗಿಸಿಕೊಂಡು, ಅನೇಕ ನಾಮಾಂಕಿತ ರಂಗಕರ್ಮಿಗಳ ಗರಡಿಯಲ್ಲಿ ಪಳಗಿ, ಮುಂದೆ ನನ್ನ ತವರೂರನ್ನು ತೊರೆದು ಬದುಕಿನ ಹಾದಿಯನ್ನು ಹುಡುಕಿಕೊಂಡು ಹಿಂದೊಮ್ಮೆ ಈ ಮಾಯಾನಗರಿಯತ್ತ ಪಯಣ ಬೆಳೆಸಿದ್ದೆ ಎಂದು ಮನದಾಳದ ಮಾತುಗಳನ್ನು ತಿಳಿಸಿದರು.

ಅಭಿನಯ ಮಂಟಪ ಮುಂಬಯಿ ಇದರ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮೂಡಬಿದ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಚೇತನ್‌ ರೈ ಮಾಣಿ ಅವರನ್ನು ಅತಿಥಿ-ಗಣ್ಯರು ಪೇಟ ತೊಡಿಸಿ, ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಿ ಗೌರವಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಅವರು ಮಾತನಾಡಿ, ಅಭಿನಯ ಮಂಟಪ ಮುಂಬಯಿ ರಂಗಕಂಡ ಶ್ರೇಷ್ಠ ಕಲಾ ಸಂಸ್ಥೆಗಳಲ್ಲೊಂದಾಗಿದೆ. 36 ವರ್ಷಗಳಿಂದ ನಿರಂತರ ಕಲಾಸೇವೆಯಲ್ಲಿ ಸಕ್ರಿಯವಾಗಿರುವ ಈ ಕಲಾ ಸಂಸ್ಥೆಯಿಂದ ಇನ್ನಷ್ಟು ಹೆಚ್ಚಿನ ಕಲಾಸೇವೆ ನಡೆಯಲಿ ಎಂದು ಹಾರೈಸಿದರು.

ಪತ್ರಕರ್ತ, ರಂಗ ಸುದರ್ಶನ ಸಸಿಹಿತ್ಲು ತಂಡದ ನಿರ್ದೇಶಕ ಪರಮಾನಂದ ವಿ. ಸಾಲ್ಯಾನ್‌ ಅವರು ಮಾತನಾಡಿ, ಮುಂಬಯಿಯ ಕಲಾವಿದರಲ್ಲಿ ಕಲೆಯ ಮತ್ತು ಕಲಾವಿದರ ಮೇಲಿರುವ ಪ್ರೀತಿ, ಗೌರವ, ನಿಜವಾಗಿಯೂ ಮೆಚ್ಚು ವಂಥದ್ದು. ವಿವಿಧ ಉದ್ಯೋಗ ಉದ್ಯಮದ ಜತೆಗೆ ಕಲಾವಿದರು ತಮ್ಮಲ್ಲಿ ಬೇರೂರಿಕೊಂಡಿರುವ ಕಲಾಪ್ರತಿಮೆಯನ್ನು ಪ್ರದರ್ಶಿಸಲು ಇಲ್ಲಿಯ ಕಲಾವಿದರು ಪಡುವ ಶ್ರಮ ಅವಿಸ್ಮರಣೀಯವಾಗಿದೆ ಎಂದು ನುಡಿದರು.

Advertisement

ಅತಿಥಿಗಳಾಗಿ ಪಾಲ್ಗೊಂಡ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಬಿಲ್ಲವರ ಅಸೋಸಿಯೇಶನ್‌ ಕಲ್ವಾ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಸುವರ್ಣ, ಸೈಂಟ್‌ ಆ್ಯಗ್ನೇಸ್‌ ಹೈಸ್ಕೂಲ್‌ ಭಾಯಂದರ್‌ ಸ್ಥಾಪಕ ಅರುಣೋದಯ ಎಸ್‌. ರೈ ಬೆಳಿಯೂರುಗುತ್ತು,  ನೆರೂಲ್‌ ಶ್ರೀ ಗಣಪತಿ, ಅಯ್ಯಪ್ಪ, ದುರ್ಗಾದೇವಿ ಮಂದಿರದ ಅಧ್ಯಕ್ಷ ಸಂಜೀವ ಎನ್‌. ಶೆಟ್ಟಿ, ರಂಗಭೂಮಿ ಹಾಗೂ ಕಂಠದಾನ ಕಲಾವಿದ ಸುರೇಂದ್ರ ಕುಮಾರ್‌ ಮಾರ್ನಾಡ್‌ ಅವರು ಮಾತನಾಡಿ ಶುಭಹಾರೈಸಿದರು. ಅತಿಥಿಗಳಾಗಿ ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವಿಭಾಗದ  ಉಪಾಧ್ಯಕ್ಷ ದಿವಾಕರ ಶೆಟ್ಟಿ ಅಡ್ಯಾರು, ಕರ್ನಾಟಕ ಸಂಘ ಅಂಧೇರಿ ಇದರ ಸಂಸ್ಥಾಪಕ ಅಧ್ಯಕ್ಷ ಕೃಷ್ಣ ಬಿ. ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿನಯ ಮಂಟಪದ ಸದಸ್ಯ ರೋಹಿತಾಶ್ವ ಅಂಚನ್‌ ಪ್ರಾರ್ಥನೆಗೈದರು. ಅಭಿನಯ ಮಂಟಪ ಮುಂಬಯಿ ಉಪ ಕಾರ್ಯಾಧ್ಯಕ್ಷ ಅನಿಲ್‌ ಕುಮಾರ್‌ ಸಸಿಹಿತ್ಲು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಅಶೋಕ್‌ ಕುಮಾರ್‌ ಕೊಡ್ಯಡ್ಕ, ಕರುಣಾಕರ ಕೆ. ಕಾಪು, ಜಗದೀಶ್‌ ರೈ, ಭರತ್‌ ಶೆಟ್ಟಿ ಅತ್ತೂರು, ರೋಹಿತ್‌ ಶೆಟ್ಟಿ ಧರ್ಮಸ್ಥಳ, ರಾಮಚಂದ್ರ ಕೋಟ್ಯಾನ್‌, ಪ್ರಸಾದ್‌ ಶೆಟ್ಟಿ ಅಜೆಕಾರು, ರೋಹಿತಾಶ್ವ, ಪುರಂದರ ಸಾಲ್ಯಾನ್‌ ಮೊದಲಾದವರು ಅತಿಥಿಗಳನ್ನು ಗೌರವಿಸಿದರು.

ಸಂಸ್ಥೆಯ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡ್ಯಡ್ಕ ಅವರು ಸಮ್ಮಾನ ಪತ್ರ ವಾಚಿಸಿದರು. ಸಮಾರಂಭದಲ್ಲಿ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ, ಪದವಿ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸದಸ್ಯರ ಮಕ್ಕಳನ್ನು ವಿದ್ಯಾರ್ಥಿ ವೇತನವನ್ನಿತ್ತು ಗೌರವಿಸಲಾಯಿತು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಕೆ. ಕಾಪು ಅವರು ವಂದಿಸಿದರು. ರಂಗನಟ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು, ದಾನಿಗಳನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿನಯ ಮಂಟಪದ ಸದಸ್ಯರು, ಬಿಲ್ಲವರ ಅಸೋಸಿಯೇಶನ್‌ ವಸಾಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಸದಸ್ಯೆಯರು, ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದೆ ಮತ್ತು ಚಲನಚಿತ್ರ ನಟಿ ಕಾಜಲ್‌ ಕುಂದರ್‌ ಮತ್ತು ಬಳಗ, ದೀಕ್ಷಾ ಎಲ್‌. ದೇವಾಡಿಗ ಮತ್ತು ಬಳಗ, ಸೌಜನ್ಯಾ ಬಿಲ್ಲವ ಮತ್ತು ಅಂಕಿತಾ ನಾೖಕ್‌ ಬಳಗ, ಕೀರ್ತಿ ಮೂಲ್ಯ ಇವರಿಂದ ನೃತ್ಯ ವೈಭವ ನಡೆಯಿತು. ಅಲ್ಲದೆ  ಪತ್ರಕರ್ತ ಪರಮಾನಂದ ಸಾಲ್ಯಾನ್‌ ಸಸಿಹಿತ್ಲು ರಚಿಸಿ, ಕರುಣಾಕರ ಕೆ. ಕಾಪು ನಿರ್ದೇಶನದಲ್ಲಿ ಅಭಿನಯ ಮಂಟಪ ಮುಂಬಯಿ ಕಲಾವಿದರುಗಳಿಂದ ಮಾನಿ ಬಾಲೆ ತುಳು ಜಾನಪದ ನಾಟಕ ಪ್ರದರ್ಶನಗೊಂಡಿತು. ಕಲಾಭಿಮಾನಿಗಳು ಉಪಸ್ಥಿತರಿದ್ದರು. 

ಚಿತ್ರ-ವರದಿ : ಸುಭಾಷ್‌  ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next