ಬೆಂಗಳೂರು: ಶನಿವಾರದ ಕೆಪಿಎಲ್ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದು ದಾಖಲೆ ನಿರ್ಮಿಸಿದ ವೇಗಿ ಅಭಿಮನ್ಯು ಮಿಥುನ್ ಈಗ ಕೆಪಿಎಲ್‌ನಿಂದ ಹೊರಗುಳಿಯಬೇಕಾದ ಸ್ಥಿತಿಯೊಂದು ಎದುರಾಗಿದೆ. ಇದಕ್ಕೆ ಕಾರಣ, ಅವರು ದುಲೀಪ್ ಟ್ರೋಫಿ ಪಂದ್ಯಾವಳಿಗಾಗಿ ಆಯ್ಕೆಯಾಗಿರುವುದು!
ಕೆಎಪಿಲ್ ಮತ್ತು ದುಲೀಪ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಬಹುತೇಕ ಏಕಕಾಲದಲ್ಲಿ ನಡೆಯುವುದರಿಂದ (ಆ. 15-ಸೆ. 9) ಅಭಿಮನ್ಯು ಮಿಥುನ್ “ಕರ್ನಾಟಕ ಪ್ರೀಮಿಯರ್ ಲೀಗ್’ ಕೂಟವನ್ನು ತಪ್ಪಿಸಿಕೊಳ್ಳಲೇ ಬೇಕಾಗುತ್ತದೆ. ದುಲೀಪ್ ಟ್ರೋಫಿ ದೇಶಿ ಕ್ರಿಕೆಟ್ ಪಂದ್ಯಾವಳಿಯಾದ್ದರಿಂದ ಇದಕ್ಕೆ ಮೊದಲ ಆದ್ಯತೆ ನೀಡಬೇಕಾಗುತ್ತದೆ.
2011ರಲ್ಲಿ ಭಾರತ ಪರ ಆಡಿದ ಅಭಿಮನ್ಯು ಮಿಥುನ್ 5 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಇವರ ಸಾಧನೆ ಗಮನಾರ್ಹ ಮಟ್ಟದಲ್ಲಿದೆ. ಉತ್ತಮ ಫಾರ್ಮ್ ನಲ್ಲಿರುವ ಮಿಥುನ್ ಅವರನ್ನು ದುಲೀಪ್ ಟ್ರೋಫಿಗಾಗಿ “ಇಂಡಿಯಾ ರೆಡ್’ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಶಿವಮೊಗ್ಗ ಲಯನ್ಸ್‌ಗೆ ಹಿನ್ನಡೆ
ಕೆಪಿಎಲ್ ಹರಾಜಿನಲ್ಲಿ ಅಭಿಮನ್ಯು ಮಿಥುನ್ 8.30 ಲಕ್ಷ ರೂ.ಗಳ ದಾಖಲೆ ಮೊತ್ತಕ್ಕೆ “ಶಿವಮೊಗ್ಗ ಲಯನ್ಸ್’ ತಂಡದ ಪಾಲಾಗಿದ್ದರು. ಈಗ ಮಿಥುನ್ ದುಲೀಪ್ ಟ್ರೋಫಿಯತ್ತ ಮುಖ ಮಾಡುವುದರಿಂದ ಶಿವಮೊಗ್ಗ ಲಯನ್ಸ್‌ಗೆ ಭಾರೀ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಆಟಗಾರನನ್ನೇ ಕಳೆದುಕೊಳ್ಳಬೇಕಾದ ಸಂಕಟ ಎದುರಾಗಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿ ಸಿರುವ ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ, “ಅಭಿಮನ್ಯು ಮಿಥುನ್ ದುಲೀಪ್ ಟ್ರೋಫಿ ಪಂದ್ಯಾ ವಳಿಗಾಗಿ ಇಂಡಿಯಾ ರೆಡ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ದುಲೀಪ್ ಟ್ರೋಫಿ ಹಾಗೂ ಕೆಪಿಎಲ್ ಪಂದ್ಯಾವಳಿ ಬಹುತೇಕ ಏಕಕಾಲದಲ್ಲಿ ನಡೆಯುವುದರಿಂದ ಮಿಥುನ್ 7ನೇ ಕೆಪಿಎಲ್ ಕೂಟಕ್ಕೆ ಲಭ್ಯರಿರುವುದಿಲ್ಲ. ಶಿವಮೊಗ್ಗ ಲಯನ್ಸ್ ಬದಲಿ ಆಟಗಾರನನ್ನು ಆಯ್ದುಕೊಳ್ಳಬೇಕಿದೆ’ ಎಂದಿದ್ದಾರೆ.