Advertisement
ಅಂದಹಾಗೆ, ಅವರ ಹೆಸರು ಅಭಿಮನ್ಯು ದಾಸ್. ಅವರಿರುವುದು, ಒರಿಸ್ಸಾದ ಕಟಕ್‌ನಲ್ಲಿ. ಅಲ್ಲಿನ ಆಚಾರ್ಯ ಹರಿಹರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ, ವರ್ಷವಿಡೀ ಇವರು “ಉಚಿತವಾಗಿ ಸೇವೆ’ ಮಾಡುತ್ತಾರೆ ಎಂದು ತಿಳಿದಾಗ ಬೆರಗಾಯಿತು. ಇದೆಲ್ಲಾ ನಿಜವಾ? ಒಬ್ಬ ವ್ಯಕ್ತಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ರೋಗಿ ಗಳ ಆರೈಕೆ ಮಾಡಲು ಸಾಧ್ಯವಾ ಎಂದೆಲ್ಲಾ ತಿಳಿಯಲು ಹೊರಟಾಗ- ಆಚಾರ್ಯ ಹರಿಹರ್ ಕ್ಯಾನ್ಸರ್ ಆಸ್ಪತ್ರೆಯ ಹಿರಿಯ ನೌಕರರಾದ ಎಸ್.ಕೆ. ಸಹಾನಿ ಮಾತಿಗೆ ಸಿಕ್ಕರು. “ಸಾರ್, ಅಭಿಮನ್ಯು ದಾಸ್’ ಅನ್ನುತ್ತಿದ್ದಂತೆಯೇ- “ಅಭಿಮನ್ಯು ಯಾರಿಗೆ ಗೊತ್ತಿಲ್ಲ? ಆತ ಹೃದಯವಂತ. ರೋಗಿಗಳ ಸೇವೆಯಲ್ಲೇ ದೇವರನ್ನು ಕಾಣುವ ಗುಣವಂತ’ ಅಂದರು! ಆನಂತರದಲ್ಲಿ, ಅಭಿಮನ್ಯು ದಾಸ್ ಅವರೇ ಫೋನ್‌ಗೆ ಸಿಕ್ಕರು. ಸಂಕೋಚದಿಂದಲೇ ತಮ್ಮ ಬದುಕಿನ ಕಥೆ ಹೇಳಿಕೊಂಡರು. ಅದು ಹೀಗೆ:
Related Articles
Advertisement
ಯಾರಾದರೂ ಒಬ್ಬರು ನನ್ನ ಜೊತೆಗೇ ಇರಲಿ ಎಂದು ಎಲ್ಲ ರೋಗಿಗಳೂ ಬಯಸ್ತಾರೆ. ಆದರೆ, ಅವರನ್ನು ನೋಡಲು ಬಂದವರೆಲ್ಲ, ಹೀಗೆ ಬಂದು ಹಾಗೆ ಹೋಗಿಬಿಡ್ತಾರೆ! ಆಗ, ರೋಗಿಗೆ ಆಗುವ ಸಂಕಟ, ತಳಮಳ, ಹತಾಶೆ ಎಂಥಾದ್ದು ಎಂಬುದೆಲ್ಲ ನನಗೆ ಅರ್ಥವಾದ ಸಂದರ್ಭ ಅದು. ಅವತ್ತೇ ನಾನೊಂದು ನಿರ್ಧಾರ ಮಾಡಿದೆ: “ಇನ್ನುಮುಂದೆ ನಾನೂ ರೋಗಿಗಳ ಸೇವೆ ಮಾಡಬೇಕು, ಆ ಮೂಲಕ, ನನ್ನ ಜೀವ ಉಳಿಸಿದ ಅಪರಿಚಿತರ ಋಣ ತೀರಿಸಬೇಕು…’ ಆನಂತರ ನಾನು ಹೋಗಿದ್ದು, ಕಟಕ್‌ನಲ್ಲಿರುವ ಶ್ರೀರಾಮಚಂದ್ರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ. ಅಲ್ಲಿನ ಮುಖ್ಯಸ್ಥರ ಬಳಿ ನನ್ನ ಕನಸು ಹೇಳಿಕೊಂಡೆ. ರೋಗಿಗಳನ್ನು ಉಪಚರಿಸಲು ಅನುಮತಿಗಾಗಿ ಪ್ರಾರ್ಥಿಸಿದೆ. ಅವರು ಒಪ್ಪಿಗೆ ನೀಡಿದ್ದಷ್ಟೇ ಅಲ್ಲ; ನರ್ಸಿಂಗ್ ಕುರಿತು, ಆಸ್ಪತ್ರೆಯಲ್ಲಿ ತರಬೇತಿ ಪಡೆಯುವಂತೆಯೂ ಸಲಹೆ ಮಾಡಿದರು. ಮರುದಿನದಿಂದಲೇ ತರಬೇತಿ ಕಂ ಸೇವೆಯ ಕೆಲಸ ಆರಂಭಿಸಿದೆ. ರೋಗಿಗಳಿಗೆ ಸ್ನಾನ ಮಾಡಿಸುವುದು, ಅವರ ಬ್ಯಾಂಡೇಜ್ ಬಿಚ್ಚುವುದು, ಬೆಡ್‌ಪ್ಯಾನ್ ತೆಗೆಯುವುದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸುವುದು, ಅಲ್ಲಿಂದ ಮನೆಗೆ ಬಿಟ್ಟು ಬರುವುದು, ಔಷಧಿ ತೆಗೆದುಕೊಡುವುದು -ಇದೆಲ್ಲಾ ನನ್ನ ಕೆಲಸವಾಗಿತ್ತು. ಗುರುತು- ಪರಿಚಯ ವಿಲ್ಲದ ರೋಗಿಗಳ ಸೇವೆ ಮಾಡಿದಾಗ, ಎಂಥದೋ ಸಾರ್ಥಕ ಭಾವ ಮನಸ್ಸನ್ನು ಆವರಿಸಿಕೊಳ್ಳುತ್ತಿತ್ತು.
ಬೆಳಗಿನ ಹೊತ್ತು ಆಸ್ಪತ್ರೆ ಸೇವೆ. ಸಂಜೆಯ ಹೊತ್ತು ಬುಕ್ ಬೈಂಡಿಂಗ್ ಕೆಲಸ. ಒಂದು ಮನಸ್ಸಂತೋಷಕ್ಕೆ; ಇನ್ನೊಂದು ಹೊಟ್ಟೆಪಾಡಿಗೆ. ಲೈಫ್ ಈಸ್ ಬ್ಯೂಟಿಫುಲ್ ಎಂದುಕೊಂಡು ನಾನಿದ್ದಾಗಲೇ, ದುರಂತಗಳು ಸಾಲುಸಾಲಾಗಿ ಎದುರಾದವು. ಅಪ್ಪ, ಅಮ್ಮ ಹಾಗೂ ಮಾವ (ಹೆಂಡತಿಯ ತಂದೆ)- ಒಂದೊಂದು ವರ್ಷದ ಅವಧಿಯಲ್ಲಿ, ಕ್ಯಾನ್ಸರ್‌ಗೆ ಬಲಿಯಾದರು. ಅಯ್ಯಯ್ಯೋ, ಇದೇನಾಗಿಹೋಯ್ತು ಎಂದುಕೊಳ್ಳುವಾಗಲೇ, ನಮ್ಮ ಭಾವನಿಗೂ ಕ್ಯಾನ್ಸರ್ ಇರುವುದು ಗೊತ್ತಾಯಿತು. ಹೇಗಾದರೂ ಮಾಡಿ ಭಾವನನ್ನು ಉಳಿಸಿಕೊಳ್ಳಬೇಕು, ಅಕ್ಕನ ಸಂತೋಷ ಹೆಚ್ಚಿಸಬೇಕು ಎಂದುಕೊಂಡೇ, ಭಾವನೊಂದಿಗೆ ಆಚಾರ್ಯ ಹರಿಹರ್ ಕ್ಯಾನ್ಸರ್ ಆಸ್ಪತ್ರೆಗೆ ಹೋದೆ. ಬ್ಯಾಡ್ ಲಕ್. 2009ರ ಒಂದು ದಿನ, ನಮ್ಮ ಭಾವನೂ, ನನ್ನ ಕಣ್ಣೆದುರೇ ಉಸಿರು ನಿಲ್ಲಿಸಿದರು. ಸಂಬಂಧಗಳ ಪೊಳ್ಳುತನ, ಬಂಧುಗಳ ಅಸಡ್ಡೆ, ಮನುಷ್ಯನೊಳಗಿನ ಹಸೀ ಕ್ರೌರ್ಯ, ರೋಗಿಗಳ ಚಡಪಡಿಕೆ, ಸಾವಿನ ನಿರ್ದಯತೆ -ಇದೆಲ್ಲವೂ ಇಂಚಿಂಚಾಗಿ ಅರ್ಥವಾಗಿದ್ದು ಕ್ಯಾನ್ಸರ್ ಆಸ್ಪತ್ರೆಯಲ್ಲಿ. ಒಳಗೆ ರೋಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ, ಹೊರಗಿನ ಅಂಗಳದಲ್ಲಿ ಅವರ ಬಂಧುಗಳು- “ಇನ್ನೊಂದು ವಾರ ಬದುಕಬಹುದೇನೋ. ಸುಮ್ನೆ ಯಾಕೆ ಟ್ರೀಟೆ¾ಂಟ್ ಕೊಡಿ ಸೋದು…’ ಅನ್ನುತ್ತಿದ್ದರು. ಮತ್ತೆ ಕೆಲವರು, ಅದೂ ಇದೂ ಮಾತಾಡುತ್ತ ವಿಲ್ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುತ್ತಿದ್ದರು. ಮತ್ತೂಂದಷ್ಟು ಜನ, ರೋಗಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು, ಒಂದು ಮಾತೂ ಹೇಳದೆ ಹೋಗಿಬಿಡುತ್ತಿದ್ದರು. ಪರಿಣಾಮ: ಅನಾಥ-ನಿರ್ಗತಿಕ ರೋಗಿಗಳ ಸಂಖ್ಯೆ ಹೆಚ್ಚತೊಡಗಿತು. ಅವರ ಕಷ್ಟ-ಸುಖ ವಿಚಾರಿಸಲು, ಕಾಫಿ ಕೊಡಲು, ಎತ್ತಿ ಕೂರಿಸಲು ಯಾರೊಬ್ಬರೂ ಇರುತ್ತಿರಲಿಲ್ಲ. ಅದನ್ನೆಲ್ಲ ಕಂಡಾಗ ಅನಾಥರು, ಅಸಹಾಯಕರು, ನಿರ್ಗತಿಕ ರೋಗಿಗಳ ಪಾಲಿಗೆ ಕೇರ್ ಟೇಕರ್ ಆಗಬಾರದೇಕೆ? ಅನ್ನಿಸಿತು. ಇದನ್ನೇ, ಕ್ಯಾನ್ಸ ರ್ ಆಸ್ಪತ್ರೆಯ ನಿರ್ದೇಶಕರಿಗೂ ಹೇಳಿಕೊಂಡೆ. “ಕ್ಯಾನ್ಸರ್ ರೋಗಿಗಳನ್ನು, ಅವರ ಮನೆಮಂದಿಯೇ ದೂರ ಮಾಡ್ತಾರೆ. ಹೀಗಿರುವಾಗ ಕ್ಯಾನ್ಸರ್ ಪೀಡಿತರ ಸೇವೆಯನ್ನು ಉಚಿತವಾಗಿ ಮಾಡ್ತೀನಿ ಅಂತಿದ್ದೀಯಲ್ಲಪ್ಪ; ನಿನ್ನಂತೆ ಯೋಚಿಸುವವರು ಸಾವಿರಕ್ಕೆ ಒಬ್ಬರು. ನಾಳೆಯಿಂದಲೇ ನಿನ್ನ ಕೆಲಸ ಆರಂಭಿಸು…’ ಎಂದರು.
ಹಾಗೆ, 2009ರಿಂದ ಕ್ಯಾನ್ಸರ್ ರೋಗಿಗಳಿಗೆ “ಕೇರ್ ಟೇಕರ್’ ಆಗಿ ಸೇವೆ ಮಾಡುವ ಸೌಭಾಗ್ಯ ನನ್ನದಾಯಿತು. ಸಾವು-ಬದುಕಿನ ಮಧ್ಯೆ ಹೋರಾಡುವ ಮಂದಿಗೆ ಸ್ನಾನ ಮಾಡಿಸುವುದು, ಬೆಡ್‌ಪ್ಯಾನ್, ಬಟ್ಟೆ ಬದಲಿಸುವುದು, ಊಟ ಮಾಡಿಸುವುದು, ಚಿಕಿತ್ಸೆಗಾಗಿ ಅವರನ್ನು ವಾರ್ಡ್ ನಿಂದ ವಾ ರ್ಡ್ ಗೆ ಕರೆದೊಯ್ಯುವುದು, ಕಣ್ಣೀರು ಒರೆಸುವುದು, ಸಮಾಧಾನ ಹೇಳುವುದು, ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವುದು – ಇದಿಷ್ಟೂ ನನ್ನ ನಿತ್ಯದ ಕೆಲಸವೇ ಆಗಿಹೋಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಆಸ್ಪತ್ರೆಯಲ್ಲಿ ರೋಗಿಗಳ ಸೇವೆ, ಸಂಜೆಯಿಂದ ರಾತ್ರಿ 12ರವರೆಗೂ ಬುಕ್ ಬೈಂಡಿಂಗ್ ಕೆಲಸ, ನನ್ನ ಬದುಕಿನ ರೊಟೀನ್ ಆಗಿದೆ. ಬೆಳಗ್ಗೆ ಆಸ್ಪತ್ರೆಗೆ ಹೋಗ್ತೀನಲ್ಲ: ಆಗ ಯಾರೋ- “ಓ ಅಣ್ಣ ಬಂದ’ ಅನ್ನುತ್ತಾರೆ. ಇನ್ಯಾರೋ- “ಕಾಕಾ’, ಎಂದು ಕೂಗುತ್ತಾರೆ. ತಾಯಿಯೊಬ್ಬಳು, “ಕಡೆಗೂ ಬಂದ್ಯಲ್ಲ ಮಗಾ…’ ಅನ್ನುತ್ತಾಳೆ. ಪುಟ್ಟಮಗುವೊಂದು- “ಅಂಕಲ್..’ ಎಂದು ಉಸುರುತ್ತದೆ. ಹೀಗೆ ಕರೆಯುತ್ತಾರಲ್ಲ: ಅವರೆಲ್ಲಾ ಕ್ಯಾನ್ಸರ್ ಪೀಡಿತರು. ಈಗಲೋ ಆಗಲೋ ಹೋಗಿ ಬಿಡುವಂಥ ಸ್ಟೇಜ್‌ನಲ್ಲಿ ಇರುವವರು. ಅಂಥವರಿಗೆಲ್ಲಾ ನಾನು ಅಣ್ಣ, ತಮ್ಮ, ಅಪ್ಪ, ಅಂಕಲ್ ಮತ್ತು ಆತ್ಮಬಂಧು! ಹೀಗೆ ಕರೆಸಿಕೊಳ್ಳುವ ಸೌಭಾಗ್ಯ ಎಷ್ಟು ಜನರಿಗೆ ಇದೆ ಹೇಳಿ? ಎಷ್ಟೋ ಜನ, ನನ್ನ ಆರೈಕೆಯಲ್ಲಿ ಇದ್ದಾಗಲೇ ಉಸಿರು ನಿಲ್ಲಿಸಿದ್ದಾರೆ. “”ನಮಗೆ ಯಾರೂ ದಿಕ್ಕಿಲ್ಲ ಕಣಪ್ಪ. ಸತ್ತಾಗ ನೀನೇ ನಮ್ಮ ಅಂತ್ಯಸಂಸ್ಕಾರ ಮಾಡಬೇಕು” ಅಂದವರೂ ಇದ್ದಾರೆ. ಅನಾಥರು, ಅಸಹಾಯಕರು ಹಾಗೂ ನಿರ್ಗತಿಕರ ಅಂತ್ಯಸಂಸ್ಕಾರ ಮಾಡುವುದು, ನನ್ನ ಕರ್ತವ್ಯ ಅಂತಾನೇ ನಾನೂ ನಂಬಿದ್ದೇನೆ. ಒಟ್ಟು ಸಂಪಾದನೆಯಲ್ಲಿ ಅರ್ಧಭಾಗವನ್ನು ಈ ಸೇವೆಗೇ ಮೀಸಲಿಡುತ್ತೇನೆ. ನನ್ನಲ್ಲಿರುವ ಆಕ್ಟಿವಾ ಸ್ಕೂಟರನ್ನು ಬೈಕ್ ಆ್ಯಂಬುಲೆನ್ಸ್ ಥರಾ ಬಳಸಿಕೊಂಡು, ರೋಗಿಗಳನ್ನು ಅದರಲ್ಲಿಯೇ ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುತ್ತೇನೆ. ಎಷ್ಟೋ ಜನ- “ಅಭಿಮನ್ಯು ಇರುವಾಗ, ನಾವ್ಯಾರೂ ಅನಾಥರಲ್ಲ’ ಅನ್ನುತ್ತಾರೆ! ಆಗೆಲ್ಲಾ, ಮಾತಲ್ಲಿ ವಿವರಿಸಲಾಗದಂಥ ಧನ್ಯತಾಭಾವ ವೊಂದು ಜೊತೆಯಾಗುತ್ತದೆ!
ಕಳೆದ 10 ವರ್ಷಗಳ ಅವಧಿಯಲ್ಲಿ, 1300 ಮಂದಿಯ ಅಂತ್ಯಸಂಸ್ಕಾರ ನೆರವೇರಿಸಿದ್ದೇನೆ. 4000ಕ್ಕೂ ಹೆಚ್ಚು ಜನರಿಗೆ ಕೇರ್ ಟೇಕರ್ ಆಗಿದ್ದೇನೆ. ಒಂದು ಜೀವ ಹುಟ್ಟುತ್ತೆ ಅಂತ 9 ತಿಂಗಳು ಮೊದಲೇ ಹೇಳಬಹುದು. ಆದರೆ, ಇಷ್ಟು ಹೊತ್ತಿಗೇ ಒಬ್ಬರ ಜೀವ ಹೋಗುತ್ತದೆ ಅಂತ ಶಕುನ ಹೇಳಲು ಆಗೋದಿಲ್ಲ. ಆದರೇ, ಪ್ರತಿಯೊ ಬ್ಬರನ್ನೂ ವಿನತೆಯಿಂದಲೇ ಬೀಳ್ಕೊಡಬೇಕು ಎಂಬುದು ನನ್ನ ಉದ್ದೇಶ. ಮೊದಮೊದಲು, ಸ್ವಂತ ಖರ್ಚಿನಿಂದಲೇ ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದೆ. ಆಮೇಲೆ, ನನ್ನ ಸೇವೆಯ ಬಗ್ಗೆ ತಿಳಿದ ಜನ, ತಾವಾಗಿ ಧನಸಹಾಯ ಮಾಡಿದರು. ಈಗ, ನೆರವಿನ ಕೈಗಳು ಜೊತೆಗಿರುವುದರಿಂದ, ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡ್ತಾ ಇದೀನಿ. ನಿಜ ಹೇಳಬೇಕೆಂದರೆ, ಇಲ್ಲಿ ನಾನು ಎಂಬುದು ನಿಮಿತ್ತ. ಯಾವುದೋ ಒಂದು ಶಕ್ತಿ ನನ್ನಿಂದ ಈ ಕೆಲಸ ಮಾಡಿಸ್ತಾ ಇದೆ. ಕೈ-ಕಾಲು ಗಟ್ಟಿ ಇರುವವರೆಗೂ ಈ ಸೇವೆ ಮುಂದು ವರಿಸ್ತೀನಿ…” ಅಂದರು ಅಭಿಮನ್ಯು ದಾಸ್. “ವರ್ಷವಿಡೀ ನೀವು ಆಸ್ಪತ್ರೆ, ಸೇವೆ ಅಂತಾನೇ ಇದ್ದರೆ ಮನೆಯಲ್ಲಿ ಒಪ್ತಾರಾ? ಏನೂ ಕಿರಿಕಿರಿ ಆಗಿಲ್ಲವಾ?’ ಎಂದಿದ್ದಕ್ಕೆ- “ಬೇಜಾ ರಾಗದೇ ಇರುತ್ತಾ ಸಾರ್? ಮನೆಯಲ್ಲಿ ಈಗಲೂ ಬೈತಾರೆ. ಅಂತ್ಯಸಂಸ್ಕಾರದ ಸಂದರ್ಭ ದಲ್ಲಿ ಹೊಗೆ ಸೇವನೆ, ಹೊತ್ತು ಗೊತ್ತಿಲ್ಲದ ವೇಳೆಯ ಸ್ನಾನದ ಕಾರಣಕ್ಕೆ, ಎಷ್ಟೋ ಬಾರಿ ಆರೋಗ್ಯ ಕೆಟ್ಟಿದೆ. ಆಗೆಲ್ಲಾ ಮನೆಯವರಿಗೆ ಆತಂಕ. ಆದರೆ, ಎರಡು ದಿನ “ಸೇವೆ’ ಮಾಡದಿದ್ದರೆ ನಾನು ಚಡಪಡಿ ಸುವುದನ್ನು ಕಂಡು-“ಆಸ್ಪತ್ರೆಗೆ ಹೋಗಿ ಬನ್ನಿ. ಎಲ್ಲಾ ಸರಿಹೋಗುತ್ತೆ’ ಎಂದು ಮನೆಮಂದಿ ನಗುತ್ತಾರೆ. ಮರುಕ್ಷಣವೇ ನನ್ನ ಬೈಕ್, ಕ್ಯಾನ್ಸರ್ ಆಸ್ಪತ್ರೆಯ ದಾರಿ ಹಿಡಿಯುತ್ತದೆ. ಮನೆಯವರ ಸಹಕಾರ ನಾನು ಮರೆಯುವಂತಿಲ್ಲ ಅನ್ನುತ್ತಾರೆ ಅಭಿಮನ್ಯು ದಾಸ್.
ಈಗ ಯೋಚಿಸಿ: ಯಾರೋ ಭಿಕ್ಷುಕರಿಗೆ 10 ರೂ. ಕೊಟ್ಟಿದ್ದನ್ನು, ಮತ್ಯಾರನ್ನೋ ರಸ್ತೆ ದಾಟಿಸಿದ್ದನ್ನು, ಒಬ್ಬರಿಗೆ ಸಿರಪ್/ಮಾತ್ರೆ ತೆಗೆದುಕೊಟ್ಟಿದ್ದನ್ನೇ ಮಹತ್ಸಾಧನೆ ಎಂಬಂತೆ ಹೇಳಿಕೊಳ್ಳುವವರ ಮಧ್ಯೆ, 1300 ಜನರ ಶವಸಂಸ್ಕಾರ ಮಾಡಿದ, 4000ಕ್ಕೂ ಹೆಚ್ಚು ರೋಗಿಗಳ ಸೇವೆಯನ್ನು ಉಚಿತವಾಗಿ ಮಾಡಿದ ಅಭಿ ಮನ್ಯುವಿನ ಸೇವೆ, ಅಭಿಮಾನಪಡುವಂಥದ್ದಲ್ಲವೆ?
– ಎ.ಆರ್.ಮಣಿಕಾಂತ್