ಮೈಸೂರು: ಇಲ್ಲಿನ “ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಟೇಡಿಯಂ’ನಲ್ಲಿ ಆರಂಭಗೊಂಡ ಇಂಗ್ಲೆಂಡ್ ಲಯನ್ಸ್ ಎದುರಿನ ದ್ವಿತೀಯ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ “ಎ’ ಉತ್ತಮ ಆರಂಭ ಗಳಿಸಿದೆ. ಅಭಿಮನ್ಯು ಈಶ್ವರನ್ ಅವರ ಅಮೋಘ ಶತಕ ಹಾಗೂ ಕೆ.ಎಲ್. ರಾಹುಲ್ ಅವರ ದಿಟ್ಟ ಬ್ಯಾಟಿಂಗ್ ನೆರವಿನಿಂದ 3 ವಿಕೆಟಿಗೆ 282 ರನ್ ಗಳಿಸಿದೆ.
ಮಿಂಚಿದ ಮತ್ತೂಬ್ಬ ಬ್ಯಾಟ್ಸ್‌ಮನ್ ಪ್ರಿಯಾಂಕ್ ಪಾಂಚಾಲ್. 3ನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ಅರ್ಧ ಶತಕ ದಾಖಲಿಸಿದರು. ಪಾಂಚಾಲ್ ಔಟಾದೊಡನೆ ದಿನದಾಟವನ್ನು ಕೊನೆಗೊಳಿಸಲಾಯಿತು. 14 ರನ್ ಮಾಡಿರುವ ಕರುಣ್ ನಾಯರ್ ಕ್ರೀಸಿನಲ್ಲಿದ್ದಾರೆ.
ಈಶ್ವರನ್-ರಾಹುಲ್ ಜೋಡಿ 56 ಓವರ್ ತನಕ ಕ್ರೀಸಿಗೆ ಅಂಟಿಕೊಂಡು ಪ್ರವಾಸಿ ಬೌಲರ್‌ಗಳನ್ನು ಸತಾಯಿಸಿದರು. ಇವರಿಂದ ಮೊದಲ ವಿಕೆಟಿಗೆ 178 ರನ್ ಹರಿದು ಬಂತು. ಈಶ್ವರನ್ 222 ಎಸೆತಗಳಿಂದ 117 ರನ್ ಬಾರಿಸಿ ಮಿಂಚಿದರು. ಈ ಆಕರ್ಷಕ ಆಟದ ವೇಳೆ 13 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ಶತಕದ ನಿರೀಕ್ಷೆಯಲ್ಲಿದ್ದ ರಾಹುಲ್ 81 ರನ್ ಮಾಡಿ ನಿರ್ಗಮಿಸಿದರು. 166 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಸೇರಿತ್ತು.
ಪಾಂಚಾಲ್ ಕೂಡ ಆರಂಭಿಕರ ಲಯದಲ್ಲೇ ಸಾಗಿದರು. ಟಾಮ್ ಬೈಲಿಗೆ ಬೌಲ್ಡ್ ಆಗುವ ಮುನ್ನ ಭರ್ತಿ 50 ರನ್ ಹೊಡೆದರು. 88 ಎಸೆತ ಎದುರಿಸಿದ ಪಾಂಚಾಲ್ 7 ಬೌಂಡರಿಗಳೊಂದಿಗೆ ಗಮನ ಸೆಳೆದರು.
ಇಂಗ್ಲೆಂಡಿನ ಉಳಿದಿಬ್ಬರು ಯಶಸ್ವಿ ಬೌಲರ್‌ಗಳೆಂದರೆ ಜಾಕ್ ಚಾಪೆಲ್ ಮತ್ತು ಡೊಮಿನಿಕ್ ಬೆಸ್.