ಹೊಸದಿಲ್ಲಿ: “ಅಭೀ ತೋ ಸೂರಜ್ ಉಗಾ ಹೈ…’ -ಸೂರ್ಯ ಈಗ ತಾನೇ ಉದಯಿಸಿದ್ದಾನೆ… – ಎಂಬ ಶೀರ್ಷಿಕೆಯುಳ್ಳ ಸ್ಫೂರ್ತಿಯುತ ಕವಿತೆಯ ಮೂಲಕ ಪ್ರಧಾನಿ ಮೋದಿ ಹೊಸವರ್ಷವನ್ನು ಸ್ವಾಗತಿಸಿದ್ದಾರೆ. ಮೋದಿ ರಚಿತ ಈ ಪದ್ಯವನ್ನು “ಮೈಗೌವ್‌ಇಂಡಿಯಾ’ ಟ್ವಿಟರ್ ಖಾತೆ ಹಂಚಿಕೊಂಡಿದೆ. ಬಾಹ್ಯಾಕಾಶಕ್ಕೆ ಚಿಮ್ಮು ತ್ತಿರುವ ರಾಕೆಟ್, ಯುದ್ಧ ವಿಮಾನಗಳ ಗರ್ಜನೆ, ಕೊರೊನಾ ಯುದ್ಧ ಕಣದ ಯೋಧರು, ಕರ್ತವ್ಯನಿರತ ಪೌರಕಾರ್ಮಿಕರು, ಹೊಲ ಉಳುತ್ತಿರುವ ರೈತ… ಮುಂತಾದ ಸಂಗತಿಗಳನ್ನು ಸ್ಮರಿಸುತ್ತಾ, “ನಮ್ಮೆಲ್ಲರ ಸಂಕಲ್ಪವನ್ನು ಸಾಕಾರಗೊಳಿಸಲು, ಈಗ ತಾನೇ ಸೂರ್ಯ ಉದಯಿಸಿದ್ದಾನೆ’ ಎಂದು ಪ್ರಧಾನಿ ಹಾಡಿದ್ದಾರೆ.
ಗಗನದಲ್ಲಿ ತಲೆಯೆತ್ತಿ,
ದಟ್ಟ ಮೋಡಗಳ ಸೀಳುತ್ತ
ಬೆಳಕಿನ ಸಂಕಲ್ಪ ಹೊತ್ತು, ಈಗಷ್ಟೇ ಉದಯಿಸಿದ್ದಾನೆ ಸೂರ್ಯ
ದೃಢ ನಿಶ್ಚಯದಿಂದ ಜತೆಯಲ್ಲೇ ಸಾಗಿ
ಎಲ್ಲ ಕಷ್ಟಗಳ ಹಿಂದೂಡಿ ಮುಂದಾಗಿ
ಗಾಢ ಅಂಧಕಾರವ ಅಳಿಸಲು
ಈಗಷ್ಟೇ ಉದಯಿಸಿದ್ದಾನೆ ಸೂರ್ಯ
ವಿಶ್ವಾಸದ ಕಿರಣಗಳ ಬೆಳಗಿಸಿ,
ವಿಕಾಸದ ದೀಪವ ಹೊತ್ತಿಸಿ
ಕನಸುಗಳ ಸಾಕಾರಗೊಳಿಸಲು
ಈಗಷ್ಟೇ ಉದಯಿಸಿದ್ದಾನೆ ಸೂರ್ಯ
ನಾವು -ನಮ್ಮವರೆನ್ನದೆ, ನಾನು -ನನ್ನವರೆನ್ನದೆ ಎಲ್ಲರಿಗೂ ಬೆಳಕಾಗುತ್ತ
ಈಗಷ್ಟೇ ಉದಯಿಸಿದ್ದಾನೆ ಸೂರ್ಯ