ಮೂಡುಬಿದಿರೆ : ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದುಹೋಗಲಿರುವ ಕೆಪಿಟಿಸಿಎಲ್ ವಿದ್ಯುತ್ ಲೈನ್‌ನಿಂದಾಗುವ ಸಾಧಕ ಬಾಧಕಗಳ ಬಗ್ಗೆ ಗ್ರಾಮಸಭೆಯಲ್ಲಿ ಜನರ ಪರವಾಗಿರುವ ಹೇಳಿಕೆ ನೀಡಿರುವ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಈ ಬಗ್ಗೆ ಪ್ರತಿಭಟನಕಾರರನ್ನು ಹತ್ತಿಕ್ಕುವುದಾಗಿ ಹೇಳುತ್ತಿರುವ ಜಿಲ್ಲಾಧಿಕಾರಿ ಇವರ ನಡುವೆ ಸಿಲುಕಿರುವ ಈ ಜನತೆ ಕಳವಳಕ್ಕೀಡಾಗಿದ್ದಾರೆ.
ಈ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ಯನ್ನು ಶಾಸಕರು 15 ದಿನಗಳ ಒಳಗೆ ನೀಡದೇ ಇದ್ದರೆ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ
ಸಚಿವ ಕೆ.ಅಭಯಚಂದ್ರ ಪತ್ರಿಕಾ ಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ನಾನು ಅಭಿವೃದ್ಧಿಯ ಪರವೇ ಇದ್ದೇನೆ, ಆದರೆ ಜನರ ಹಿತಾಸಕ್ತಿ ಗಳಿಗೆ ವಿರುದ್ಧವಾಗಿ ಜಾರಿಗೊಳ್ಳುವ ಯಾವುದೇ ಯೋಜನೆಯ ವಿರುದ್ಧ ಈ ಹಿಂದೆಯೂ ಪ್ರತಿರೋಧ ವ್ಯಕ್ತಪಡಿ ಸಿದ್ದೇನೆ, ಮುಂದೆ ಯಾವುದೇ ಹುದ್ದೆ ಇರಲಿ, ಇಲ್ಲದಿರಲಿ ಜನರ ಪರವಾಗಿ ಹೋರಾಡುತ್ತಲೇ ಇರುತ್ತೇನೆ ಎಂದರು.
ಶಾಸಕರ ಪ್ರಭಾವದಿಂದ ತಂತಿಯ ದಾರಿ ಬದಲು
ಪಾಲಡ್ಕ ಪಂ. ವ್ಯಾಪ್ತಿಯ ವಿದ್ಯುತ್ ಲೈನ್ ಯೋಜನೆ ನಿಜಕ್ಕಾದರೆ ಕಾರ್ಕಳ ಶಾಸಕರ ಪ್ರಭಾವದಿಂದ ಮೂಡುಬಿದಿರೆಗೆ ಬಂದಿರುವುದು ತನಗೆ ತಿಳಿದುಬಂದಿದೆ ಎಂದು ಅವರು ತಿಳಿಸಿದರು.
ಯುಪಿಸಿಎಲ್‌ನಿಂದ ಕೇರಳಕ್ಕೆ ನಿಡ್ಡೋಡಿ ಮೂಲಕ ಹೈಟೆನ್ಶನ್ ವಿದ್ಯುತ್ ಲೈನ್ ಸಾಗುವ ಪ್ರಸ್ತಾಪದ ಬಗ್ಗೆ ಜನತೆ ಆತಂಕಕ್ಕೀಡಾಗಿದ್ದು ಈ ಯೋಜನೆಗೂ ತಾನು ಸ್ಪಷ್ಟವಾಗಿ ವಿರೋಧಿಸುತ್ತೇನೆ ಎಂದರು.