Advertisement

ನಳಿನ್ ನಂ.1 ಸಂಸದರಾಗಿದ್ದು ಹೌದಾದರೆ ಟಿಕೆಟ್ ಯಾಕೆ ಸಿಕ್ಕಿಲ್ಲ..? ಅಭಯಚಂದ್ರ ಜೈನ್ ವ್ಯಂಗ್ಯ

12:54 PM Mar 30, 2024 | Team Udayavani |

ಮಂಗಳೂರು: ನಳಿನ್ ಕುಮಾರ್ ಕಟೀಲ್ ಅಭಿವೃದ್ದಿ ವಿಚಾರದಲ್ಲಿ ದೇಶದಲ್ಲೆ ನಂ1 ಸಂಸದ ಎಂಬುದಾಗಿ ಬಿಂಬಿಸಿಕೊಳ್ಳುತ್ತಿದ್ದರು. ಹಾಗಿದ್ದರೆ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಯಾಕೆ ಸಿಕ್ಕಿಲ್ಲ? ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಅಭಯ ಚಂದ್ರ ಜೈನ್ ಪ್ರಶ್ನಿಸಿದ್ದಾರೆ.

Advertisement

ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಳಿನ್ ಸಂಸದರಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಾಂಗ್ರೆಸ್ ಕಾಲದಲ್ಲಿ ಮಾತ್ರ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕೆಲಸಗಳು ನಡೆದಿವೆ. ಕಾಂಗ್ರೆಸ್ ಕಾಲದಲ್ಲಿ ಆರಂಭವಾಗಿದ್ದ ಕೆಲವು ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಕೂಡ ಬಿಜೆಪಿಯವರಿಂದ ಸಾಧ್ಯವಾಗಿಲ್ಲ. ಬಿಜೆಪಿ ಕೇವಲ ಪ್ರಚಾರ, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಗೆಲ್ಲುತ್ತಿದೆ. ಜನಸಾಮಾನ್ಯರಿಗೆ ಯಾವುದೆ ಅನುಕೂಲ ಮಾಡಿಕೊಟ್ಟಿಲ್ಲ. ಇದು ಈಗ ಜನರಿಗೆ ಅರ್ಥವಾಗುತ್ತಿದೆ. ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬೆಲೆ ಹೆಚ್ಚಳ, ಜಿಎಸ್ ಟಿ ಮೊದಲಾದವುಗಳಿಂದ ಜನ ಸಂಕಷ್ಟದಲ್ಲಿದ್ದರೆ ಪ್ರಧಾನಿ ಮೋದಿ, ಬಿಜೆಪಿಯವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಯುವಕರು ಮೋದಿಯ ಭಾಷಣಕ್ಕೆ ಮರುಳಾಗುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ದೇಶಕ್ಕೆ ನೀಡಿದ ಕೊಡುಗೆಯನ್ನು ತಿಳಿಸಬೇಕಾಗಿದೆ.‌

ದೇಶಕ್ಕಾಗಿ ಮೋದಿಗೆ ಮತ ಎನ್ನುತ್ತಿದ್ದಾರೆ. ಹಾಗಾದರೆ ನಮ್ಮ ದೇಶ ಈಗ ಸ್ವತಂತ್ರವಾಗಿಲ್ಲವೆ? ನಾವು ಇಷ್ಟರವರೆಗೆ ಊಟ ಮಾಡುತ್ತಿರಲಿಲ್ಲವೆ? ರಕ್ಷಣೆ ಇರಲಿಲ್ಲವೆ ? ಬಡತನ ನಿರ್ಮೂಲನೆ ಮಾಡಿದ್ದು ಕಾಂಗ್ರೆಸ್. ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಮಾಣಿಕ, ಸರಳತೆಯ ಪದ್ಮರಾಜ್ ಅವರನ್ನು ಕಣಕ್ಕಿಳಿಸಿದ್ದು ಅವರ ಗೆಲುವು ಖಚಿತ. ಬಿಜೆಪಿ ಸುಳ್ಳನ್ನೇ ಬಂಡವಾಳ ಮಾಡಿಕೊಂಡಿದೆ. ಹಿಂದುತ್ವದ ಕೋಟೆ ಬೇಧಿಸಿ ಜಯ ಸಾಧಿಸುತ್ತೇವೆ. ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತರುತ್ತೇವೆ ಎಂದು ಹೇಳಿದರು.

ಮೊಯಿಲಿಯವರಿಗೆ ಈ ಬಾರಿ ಟಿಕೆಟ್ ಸಿಗದಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ವಯಸ್ಸಿನ ಕಾರಣಕ್ಕೆ ಮೊಯಿಲಿಯವರಿಗೆ ಟಿಕೆಟ್ ಸಿಕ್ಕಿಲ್ಲ. ಅವರಲ್ಲಿ ಜಾತಿ, ಹಣ ಬಲವೂ ಇಲ್ಲ.‌ಆದರೆ ಅವರಲ್ಲಿ ಇನ್ನೂ ಕೂಡ ಕೆಲಸ ಮಾಡುವ ಶಕ್ತಿ, ಹುಮ್ಮಸ್ಸು ಇದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಶುಭೋದಯ ಆಳ್ವ, ನೀರಜ್ ಪಾಲ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ.ಸುಧೀರ್, ವಿಕಾಸ್ ಶೆಟ್ಟಿ, ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: Kaup: ಪೊಲೀಸ್ ಕ್ವಾಟ್ರಸ್ ನಲ್ಲೇ ನೇಣಿಗೆ ಶರಣಾದ ಮಹಿಳಾ ಸಿಬ್ಬಂದಿ

Advertisement

Udayavani is now on Telegram. Click here to join our channel and stay updated with the latest news.

Next