ಸುರತ್ಕಲ್: ಟೋಲ್ ರದ್ದಾಗದಿದ್ದರೆ ಜೈಲ್ ಭರೋ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಎಚ್ಚರಿಕೆ ನೀಡಿದ್ದಾರೆ.
ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿಯು ಸುರತ್ಕಲ್ ಟೋಲ್ ರದ್ದು ಮಾಡಲು ಆಗ್ರಹಿಸಿ ನಡೆಸುತ್ತಿರುವ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಚಿವ ನಿತಿನ್ ಗಡ್ಕರಿ ಅವರು ಮತ್ತೆ 15 ದಿನಗಳ ಒಳಗೆ ರದ್ದು ಮಾಡುವ ಮಾತುಗಳನ್ನಾಡಿದ್ದಾರೆ. ಅವರಿಗೆ ಒಂದು ಅವಕಾಶ ನೀಡಲಿದ್ದೇವೆ. ಬಳಿಕವೂ ಮಾತು ತಪ್ಪಿದಲ್ಲಿ ಜೈಲ್ ಭರೋ ಹೋರಾಟ ಮಾಡುತ್ತೇವೆ. ಇಂದಿನ ರಾಜಕಾರಣದಲ್ಲಿ ಕೊಡುವ ಮಾತಿಗೆ ಬೆಲೆ ಇಲ್ಲದಂತಾಗಿ, ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ನ್ಯಾಯ ,ನೀತಿ ಧರ್ಮದಲ್ಲಿ ರಾಜಕಾರಣ ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ಇದನ್ನೂ ಓದಿ: ಕೊಹಿನೂರ್ ಪುರಿ ಜಗನ್ನಾಥ್ ದೇವರಿಗೆ ಸೇರಿದ್ದು: ಪ್ರಧಾನಿ, ರಾಷ್ಟ್ರಪತಿ ಮಧ್ಯಸ್ಥಿಕೆಗೆ ಮನವಿ
ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಯಾವುದೇ ಸೌಲಭ್ಯವಿಲ್ಲದ ಈ ಟೋಲ್ ಅನಧಿಕೃತ ಎಂದು ಸ್ವತಃ ನಿತಿನ್ ಗಡ್ಕರಿ ಹೇಳಿದ್ದಾರೆ. ಆದರೂ ತೆರವಿಗೆ ವಿಳಂಬ ಯಾಕೆ? ಟೋಲ್ ನಲ್ಲಿಯೂ ಸಂಸದರು, ಶಾಸಕರಿಗೆ ಶೇ 40% ಕಮಿಷನ್ ಹೋಗುತ್ತಿರಬೇಕು. ಅದಕ್ಕೆ ಇದನ್ನು ಮುಚ್ಚುವ ಕೆಲಸ ಮಾಡುತ್ತಿಲ್ಲ.ಕೇಂದ್ರದ ಸಚಿವರು ಹೇಳಿದಂತೆ ಈ ಟೋಲ್ ತೆಗೆಯದಿದ್ದಲ್ಲಿ ನಾವೇ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಅರಬ್ಬಿ ಸಮುದ್ರಕ್ಕೆ ಎಸೆಯಲು ಸಿದ್ದರಿದ್ದೇವೆ. ಜನರಿಗಾಗಿ ಜೈಲು ಸೇರಲು ಹಿಂದೇಟು ಹಾಕುವುದಿಲ್ಲ ಎಂದು ನುಡಿದರು.
ಮೊಯಿದೀನ್ ಬಾವಾ, ವಿನಯ್ ಕುಮಾರ್ ಸೊರಕೆ, ಎಂ.ಜಿ ಹೆಗಡೆ,ವೈ ವೈ ರಾಘವೇಂದ್ರ ರಾವ್,ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ, ಪುರುಷೋತ್ತಮ್ ಚಿತ್ರಾಪುರ, ಶಾಲೆಟ್ ಪಿಂಟೋ,ಪಿ.ವಿ ಮೋಹನ್,ಶಶಿಧರ್ ಹೆಗ್ಡೆ ಸಹಿತ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.