ಮುಂಬಯಿ: ಟಾಡಾ ನ್ಯಾಯಾಲಯ 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದ್ದ ಅಬ್ದುಲ್ ಖಯ್ಯೂಮ್‌ನನ್ನು ದೋಷಮುಕ್ತಿಗೊಳಿಸಿರಬಹುದು. ಆದರೆ ಈ ಖುಷಿಯ ಸಮಾಚಾರ ಕೇಳಲು ಖಯ್ಯೂಮ್ 11 ವರ್ಷ 8 ತಿಂಗಳು ಆರ್ಥರ್ ರೋಡ್‌ನಲ್ಲಿ ಕಳೆಯಬೇಕಾಯಿತು.
ನಾನು ಅಪರಾಧಿಯಲ್ಲ ಎಂದು ಖಯ್ಯೂಮ್ ಬಂಧನವಾದಾಗಲೇ ಪೊಲೀಸರ ಬಳಿ ಹೇಳುತ್ತಿದ್ದರು. ಕೊನೆಗೂ ಅವರ ಮಾತು ನಿಜವಾಗಿದೆ. 11 ವರ್ಷ 8 ತಿಂಗಳು ಎನ್ನುವುದು ವ್ಯಕ್ತಿ¤ಯೊಬ್ಬನ ಬದುಕಿನಲ್ಲಿ ಸುದೀರ್ಘ ಅವಧಿ. ಈ ಅವಧಿಯಲ್ಲಿ ನಾನು ಏನುಬೇಕಾದರೂ ಆಗಬಹುದಿತ್ತು. ಆದರೆ ಮಾಡದ ತಪ್ಪಿನ ಆರೋಪ ಹೊತ್ತು ಜೈಲಿನಲ್ಲಿ ಕಳೆಯಬೇಕಾಯಿತು. ಆದರೆ ಕೊನೆಗೂ ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಿತು. ಇನ್ನು ಕಳಂಕವಿಲ್ಲದೆ ನಾನು ತಲೆ ಎತ್ತಿ ಓಡಾಡಬಹುದು ಎಂದಿದ್ದಾರೆ ಖಯ್ಯೂಮ್.
ಖಯ್ಯೂಮ್ ವಿರುದ್ಧ ಹೊರಿಸಿದ ಆರೋಪಗಳನ್ನು ಸಾಬೀತುಪಡಿಸುವ ವಿಶ್ವಾಸಾರ್ಹ ಪುರಾವೆಗಳು ಇಲ್ಲ ಎಂದು ಶುಕ್ರವಾರ ನ್ಯಾಯಾಧೀಶರು ತೀರ್ಪು ಓದಿದಾಗ ಖಯ್ಯೂಮ್ ತನಗರಿವಿಲ್ಲದೆ ಎರಡೂ ಕೈಗಳನ್ನು ಮೇಲೆತ್ತಿ ನಮಸ್ಕರಿಸಿದ್ದರು. ಜೈಲಿನಿಂದ ಹೊರಗೆ ಹೋದ ಕೂಡಲೇ ನಾನು ಅನೇಕ ಕೆಲಸ ಮಾಡಲಿದ್ದೇನೆ. ಆದರೆ ಇಷ್ಟು ವರ್ಷ ನಾನು ಏಕೆ ಜೈಲಲ್ಲಿ ಕೊಳೆಯಬೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜೈಲಿನಲ್ಲಿದ್ದ ಪ್ರತಿ ಸೆಕೆಂಡನ್ನು ಎಣಿಸಿದ್ದೇನೆ. ನನ್ನ ಬದುಕಿನ 23.5 ಕೋಟಿ ಸೆಕೆಂಡುಗಳು ವ್ಯರ್ಥವಾಗಿ ಹೋಗಿವೆ ಎಂದಿದ್ದಾರೆ.
ಖಯ್ಯೂಮ್ ನಿರ್ದೋಷಿ ಎಂದು ಘೋಷಿಸಿದ ಕೂಡಲೇ ಮಾಹಿಮ್‌ನಲ್ಲಿರುವ ಅವರ ಸಹೋದರ ಸೌದಿಯಲ್ಲಿ ತಾಯಿ ಮತ್ತು ಸಹೋದರಿಗೆ ಫೋನು ಮಾಡಿ ಸುದ್ದಿ ತಿಳಿಸಿದರು. ಇಷ್ಟು ವರ್ಷ ಚಿಂತೆಯಲ್ಲಿ ದಿನ ಕಳೆಯುತ್ತಿದ್ದೆವು. ಇಂದು ನಮ್ಮ ಚಿಂತೆ ದೂರವಾಯಿತು ಎಂದು ಸಹೋದರ ಖಾದಿರ್ ಶೇಖ್ ಪ್ರತಿಕ್ರಿಯಿಸಿದ್ದಾರೆ.
ಮಾಹಿಮ್‌ನಲ್ಲಿ ವಾಸವಾಗಿದ್ದ ಖಯ್ಯೂಮ್ ಪರಿವಾರದ ಹೆಚ್ಚಿನವರು ಈಗ ಗಲ್ಫ್ ದೇಶಗಳಿಗೆ ವಲಸೆ ಹೋಗಿದ್ದಾರೆ. ಖಯ್ಯೂಮ್‌ಗೆ ಮೂರು ಮದುವೆಯಾಗಿದ್ದು ಮೂವರು ಹೆಂಡತಿಯರು ಬದುಕಿದ್ದಾರೆ. ಓರ್ವ ಹೆಂಡತಿ ಸೌದಿಯಲ್ಲಿ, ಎರಡನೇ ಹೆಂಡತಿ ಲಂಡನ್‌ನಲ್ಲಿ ಮತ್ತು ಮೂರನೇ ಹೆಂಡತಿ ಮುಂಬಯಿಯಲ್ಲಿದ್ದಾರೆ. ಆದರೆ ಮಕ್ಕಳ ಬಗ್ಗೆ ಯಾವ ವಿವರವೂ ಲಭ್ಯವಿಲ್ಲ. ಖಯ್ಯೂಮ್ ಕೂಡ ಯಾರ ಬಳಿಯೂ ಹೇಳಿಕೊಂಡಿಲ್ಲ.
ಮರಣ ದಂಡನೆಗೆ ಆಗ್ರಹ
ಈ ನಡುವೆ ಪ್ರಾಸಿಕ್ಯೂಶನ್ ಅಪರಾಧಿಗಳೆಂದು ಸಾಬೀತಾಗಿರುವ ಮುಸ್ತಾಫ ದೊಸ್ಸಾ, ಫಿರೋಜ್ ಖಾನ್ ಮತ್ತು ತಾಹಿರ್ ಮರ್ಚಂಟ್‌ಗೆ ಮರಣ ದಂಡನೆ ವಿಧಿಸುವಂತೆ ಟಾಡಾ ನ್ಯಾಯಾಲಯವನ್ನು ವಿನಂತಿಸಲಿದೆ. ಸೋಮವಾರ ಶಿಕ್ಷೆಯ ಪ್ರಮಾಣದ ವಿಚಾರಣೆ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಪ್ರಾಸಿಕ್ಯೂಶನ್ ಬಲವಾದ ವಾದ ಮಂಡಿಸಲಿದೆ.
ಆರೋಪಿಗಳ ಪೈಕಿ ಸಿದ್ಧಿಕಿ ವಿರುದ್ಧ ಸಂಚಿನ ಆರೋಪವಿಲ್ಲ. ಹೀಗಾಗಿ ಗರಿಷ್ಠ ಜೀವಾವಧಿ ಶಿಕ್ಷೆಯಾಗಬಹುದು. ಅಂತೆಯೇ ಅಬೂ ಸಲೇಂಗೂ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ. ಸಲೇಂಗೆ ಮರಣ ದಂಡನೆ ವಿಧಿಸಲು ಪೋರ್ಚುಗಲ್ ಜತೆಗೆ ಮಾಡಿಕೊಂಡಿರುವ ಒಪ್ಪಂದ ಅಡ್ಡಿಯಾಗುತ್ತದೆ.