ಹಾಸನ: ಸಕಲೇಶಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಜೆಡಿಎಸ್ ಸದಸ್ಯರೊಬ್ಬರನ್ನು ಅಪಹರಿಸಿದ್ದಾರೆ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಆಪಾದಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಪಹರಣದ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ ಅಪಹೃತ ಸದಸ್ಯನ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರು. 11 ಸದಸ್ಯ ಬಲದ ಸಕಲೇಶಪುರ ತಾಲೂಕು ಪಂಪಾಯಿತಿಗೆ ಕೇವಲ ಬಿಜೆಪಿಯಿಂದ ಕೇವಲ ಇಬ್ಬರು ಸದಸ್ಯರು ಆಯ್ಕೆಯಾಗಿದ್ದರೂ 5 ಮಂದಿ ಕಾಂಗ್ರೆಸ್‌ನವರ ಬೆಂಬಲದಿಂದ ಬಿಜೆಪಿಯ ಶ್ವೇತಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಅಧಿಕಾರ ಹಂಚಿಕೆಯ ಒಪ್ಪಂದದಂತೆ ಶ್ವೇತಾ ರಾಜೀನಾಮೆ ನೀಡದಿದ್ದರಿಂದ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರಿಂದ ಜೆಡಿಎಸ್‌ನ ನಾಲ್ವರು ಸದಸ್ಯರೂ ಬೆಂಬಲ ನೀಡಿದ್ದರು. ಜು.10 ರಂದು ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಸಭೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ತಾಪಂ ಸದಸ್ಯೆ ಪತಿ ಪ್ರಸನ್ನ, ಅವರ ಸಹಚರರಾದ ರವಿ, ಆಕಾಶ್, ವಿಜಯಕುಮಾರ್ ಜೆಡಿಎಸ್ ಸದಸ್ಯ ಐಗೂರು ಕ್ಷೇತ್ರದ ಶಿವಪ್ಪ ಅವರನ್ನು ಅಪಹರಿಸಿದ್ದಾರೆ ಎಂದು ಆಪಾದಿಸಿದರು.
ಶುಕ್ರವಾರದೊಳಗೆ ಶಿವಪ್ಪ ಅವರನ್ನು ಹುಡುಕಿಕೊಡಬೇಕು ಎಂದು ಒತ್ತಾಯಿಸಿದರು. ಅವರು, ಈಗ ತಾಲೂಕು ಪಂಚಾಯಿತಿ ಅಧ್ಯಕ್ಷರನ್ನು ಜೆಡಿಎಸ್‌ನವರು ಅಹರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು. ತಾಪಂ ಸದಸ್ಯರಾದ ಚಂದ್ರಮತಿ, ಚೈತ್ರ, ಜಿಪಂ ಸದಸ್ಯೆ ಉಜ್ಮಾರಿಜ್ವಿ , ಶಿವಪ್ಪ ಪತ್ನಿ ನೀಲಮ್ಮ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.