ಬೆಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಬಂದು ಮೆಜೆಸ್ಟಿಕ್‌ನಲ್ಲಿ ನಿಂತಿದ್ದ ಮಹಿಳೆಯೊಬ್ಬರನ್ನು ಬೈಕ್‌ನಲ್ಲಿ ಬಂದು ಇಬ್ಬರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಜುಲೈ 9ರಂದು ಘಟನೆ ನಡೆದಿದ್ದು, ದೌರ್ಜನ್ಯಕ್ಕೆ ಯತ್ನಿಸಿದ ಆರೋಪಿಗಳ ಬೈಕ್‌ನ ನೋಂದಣಿ ಸಂಖ್ಯೆಯನ್ನಾಧರಿಸಿ ಸಂತ್ರಸ್ತೆ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜುಲೈ 9ರಂದು ರಾತ್ರಿ 11.30ರ ಸುಮಾರಿಗೆ ಮಂಗಳೂರಿನಿಂದ ಬೆಂಗಳೂರಿನ ಮೆಜೆಸ್ಟಿಕ್‌ಗೆ ಸಂತ್ರಸ್ತೆ ಬಂದಿದ್ದು, ನಿಲ್ದಾಣದಲ್ಲಿ ಒಬ್ಬರೇ ನಿಂತಿದ್ದರು. ಈ ವೇಳೆ ಬಂದ ಸುಮಾರು 40 ವರ್ಷದ ವ್ಯಕ್ತಿಯೊಬ್ಬ ಆಕೆ ಬಳಿ ಹೋಗಿ ನನ್ನೊಂದಿಗೆ ಬಾ ಎಂದು ಕರೆದಿದ್ದಾನೆ.
ಇದಕ್ಕೆ ಆಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ಹೊತ್ತಿನ ಬಳಿಕ ಮತ್ತೆ ಬಂದ ಆತ ಅದೇ ರೀತಿ ಕೇಳಿದ್ದಾನೆ. ಇದರಿಂದ ಗಾಬರಿಗೊಂಡ ಸಂತ್ರಸ್ತೆ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದ ಕಡೆ ಹೊರಟ್ಟಿದ್ದಾರೆ. ಬಳಿಕ ರಸ್ತೆ ದಾಟಲು ನಿಂತಿದ್ದಾಗ ಅದೇ ವ್ಯಕ್ತಿ ತನ್ನ ಸ್ನೇಹಿತನ ಜತೆ ಬೈಕ್‌ನಲ್ಲಿ ಬಂದಿದ್ದಾನೆ.
ಬಳಿಕ ಬೈಕ್‌ನ ಹಿಂಬದಿ ಸವಾರ ರಸ್ತೆ ಬದಿ ನಿಂತಿದ್ದ ಸಂತ್ರಸ್ತೆಯನ್ನು ಎಳೆದುಕೊಂಡು ಬೈಕ್‌ನ ಮಧ್ಯದಲ್ಲಿ ಕೂರಿಸಿಕೊಂಡಿದ್ದಾನೆ. ವೇಲ್‌ನಿಂದ ಆಕೆಯ ಬಾಯಿ ಮುಚ್ಚಿದ್ದು, ಆಕೆಯ ಅಂಗಾಗಳನ್ನು ಮುಟ್ಟಿ ದೌರ್ಜನ್ಯವೆಸಗಿದ್ದಾನೆ. ಬಾಯಿ ಮುಚ್ಚಿದ್ದರಿಂದ ಆಕೆಗೆ ಕೂಗಿಕೊಳ್ಳಲು ಸಾಧ್ಯವಾಗಿಲ್ಲ.
ಸುಮಾರು ಅರ್ಧಗಂಟೆಗಳ ಕಾಲ ಬೈಕ್‌ನಲ್ಲಿ ಸುತ್ತಾಡಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಹಿಂದೆ ಕುಳಿತಿದ್ದ ವ್ಯಕ್ತಿ ಹೆದರಿ ಬೈಕಿನಿಂದ ಇಳಿದು ಪರಾರಿಯಾಗಿದ್ದು, ಬೈಕ್ ಚಾಲನೆ ಮಾಡುತ್ತಿದ್ದವ ಕತ್ತಲಿನ ಜಾಗಕ್ಕೆ ಕರೆದೊಯ್ದು ಆಕೆಯ ಮೈಕೈ ಮುಟ್ಟಲು ಯತ್ನಿಸಿದಾಗ ರಕ್ಷಣೆಗಾಗಿ ಕೂಗಿಕೊಂಡರು.
ಹೆದರಿದ ಬೈಕ್ ಸವಾರ ಆಕೆಯನ್ನು ಅಲ್ಲಿಯೇ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಅಪಹರಣ ಮತ್ತು ಅತ್ಯಾಚಾರಕ್ಕೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.