ಗುಣಮಟ್ಟದ ತುಳು ಯಕ್ಷಗಾನ ಎಂದರೆ ಥಟ್ಟನೆ ನೆನಪಾಗುವುದು ಕರ್ನಾಟಕ ಮೇಳ. ಸೂಡ ಮೇಳದವರ ಈ ಪ್ರದರ್ಶನವನ್ನು ಕಂಡವರಿಗೆ ಗತಕಾಲದ ಕರ್ನಾಟಕ ಮೇಳ ನೆನಪಾಯಿತು. ಇಲ್ಲಿ ಭಾವನೆ, ಸಂಬಂಧಗಳ ಮಹತ್ವವನ್ನು ಮನಸ್ಪರ್ಶಿಯಾಗಿ ಪ್ರದರ್ಶಿಸುವಲ್ಲಿ ಪ್ರತಿಯೋರ್ವ
ಕಲಾವಿದನೂ ಸಫಲನಾಗಿದ್ದಾನೆ ಎಂಬುದು ಮೆಚ್ಚತಕ್ಕ ಸಂಗತಿ.
ಶಿವರಾತ್ರಿಯಂದು ಉಡುಪಿಯ ಮುಂಡ್ರುಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರದರ್ಶನಗೊಂಡ ಸೂಡ ಮಯೂರ ವಾಹನ ಮೇಳದವರ ಅಬ್ಬಗ – ದಾರಗ ತುಳು ಯಕ್ಷಗಾನವು ಪ್ರೇಕ್ಷಕರನ್ನು ಸುಮಾರು ಮೂರ್‍ನಾಲ್ಕು ದಶಕಗಳ ಹಿಂದಕ್ಕೊಯ್ಯುವಲ್ಲಿ ಸಫಲವಾಗಿದ್ದು, ಯಕ್ಷಗಾನದ ಸಂಪ್ರದಾಯಕ್ಕೆ ಕಿಂಚಿತ್ತೂ ಧಕ್ಕೆ ಬಾರದಂತೆ, ಯಾವುದೇ ಗಿಮಿಕ್‌ಗಳಿಲ್ಲದೆ ಯಕ್ಷಗಾನಾಸಕ್ತರ ಮನ ಗೆಲ್ಲುವಲ್ಲಿ ಸಫಲವಾಯಿತು.
ಗುಣಮಟ್ಟದ ತುಳು ಯಕ್ಷಗಾನ ಎಂದರೆ ಥಟ್ಟನೆ ನೆನಪಾಗುವುದು ಕರ್ನಾಟಕ ಮೇಳ. ಸೂಡ ಮೇಳದವರ ಈ ಪ್ರದರ್ಶನವನ್ನು ಕಂಡವರಿಗೆ ಗತಕಾಲದ ಕರ್ನಾಟಕ ಮೇಳ ನೆನಪಾಯಿತು. ಇಲ್ಲಿ ಭಾವನೆ, ಸಂಬಂಧಗಳ ಮಹತ್ವವನ್ನು ಮನಸ್ಪರ್ಶಿಯಾಗಿ ಪ್ರದರ್ಶಿಸುವಲ್ಲಿ ಪ್ರತಿಯೋರ್ವ ಕಲಾವಿದನೂ ಸಫಲನಾಗಿದ್ದಾನೆ ಎಂಬುದು ಮೆಚ್ಚತಕ್ಕ ಸಂಗತಿ.
ಅಬ್ಬಗ – ದಾರಗ ಪ್ರಸಂಗವು ತುಳುನಾಡಿನ ಸಿರಿಯ ಬಳಿಕದ ಕತೆ. ಇಲ್ಲಿ ದಕ್ಷಾಧ್ವರದ ಒಂದು ಘಟನೆಗೆ ಹೋಲಿಕೆಯಾಗುವಂಥ ದೃಶ್ಯವೂ ಇದೆ. ಇದರ ಕಥಾ ನಾಯಕಿ ಸೊನ್ನೆ ಮೈನರೆಯಲಿಲ್ಲ ಎಂದು ಆಕೆಯ ಸಾಕು ತಂದೆಯ ಮನೆಯಲ್ಲಿ ನಡೆಯುವ “ನೀರ ಪೆರತ’ಕ್ಕೆ ಇವಳಿಗೆ ಆಮಂತ್ರಣ ನೀಡುವುದಿಲ್ಲ. ಆದರೂ ಆಕೆ ಗಂಡನ ಒಪ್ಪಿಗೆ ಕೇಳಿ ತಾಯಿ ಮನೆಗೆ ಹೋಗುವ ಮನಸ್ಸು ಮಾಡುತ್ತಾಳೆ. ಆಗ ಗಂಡನು ಬೇಡ ಎಂದು ಸಾರಿ ಹೇಳುತ್ತಾನೆ. ಮತ್ತೂ ಸೊನ್ನೆ ಹಟ ಬಿಡದಿದ್ದಾಗ ಆತನು, ಅಣ್ಣನಲ್ಲಿ (ಸೊನ್ನೆಯ ಭಾವ) ಕೇಳಿ ಹೋಗು ಎಂದು ಹೇಳುತ್ತಾನೆ. ಬಳಿಕ ಸೊನ್ನೆಯು ಗಂಡನ ಅಣ್ಣ ಜಾರುಮಾರ್ಲನ ( ಈ ಪಾತ್ರ ಮಾಡಿದವರು ಸುರೇಶ್ ಕುಂದರ್) ಬಳಿಗೆ ಹೋಗಿ ಅನುಮತಿ ಕೇಳುವ ಸನ್ನಿ ವೇಶ ಮನ ಮುಟ್ಟುವಂತಿತ್ತು. ಆಕೆ ಮುಖ ಮುಚ್ಚಿಕೊಂಡು ಅತಿ ಭಯಭಕ್ತಿಯಿಂದ ಭಾವನಲ್ಲಿ ಒಪ್ಪಿಗೆ ಕೇಳ್ಳೋದು, ಆತನು ಮಗಳ ರೀತಿಯ ಸಂಬಂಧ ಕಲ್ಪಿಸಿ ಪ್ರೀತಿಯಿಂದ ಮಾತಾಡೋದು ಮುಂತಾದವೆಲ್ಲ ಭಾವನೆ ಮತ್ತು ಸಂಬಂಧದ ಮಹತ್ವವನ್ನು ಪರಿಣಾಮಕಾರಿಯಾಗಿ ತೋರಿಸಿದೆ. ಹೀಗೆ ಭಾವನ ಒಪ್ಪಿಗೆ ಪಡೆದುಕೊಂಡು ಹೋದ ಸೊನ್ನೆಗೆ ತಂದೆ ಮನೆಯಲ್ಲಿ ಅವಮಾನವಾಗುತ್ತದೆ. ಊರ ನಾರಿಯರಿಂದ ಅವಮಾನಿತಳಾದ ಸೊನ್ನೆ ತನ್ನ ತಂಗಿಯನ್ನು ಮಾಯ ಮಾಡಿ ಮುಂದೆ ನಾಗಬ್ರಹ್ಮರ ಹರಕೆಯಿಂದ ಅಬ್ಬಗ – ದಾರಗರಿಗೆ ಜನ್ಮ ನೀಡಿ ಕತೆ ಮುಂದುವರಿಯುತ್ತದೆ.
ಚಂದು ಪೆರ್ಗಡೆಯಾಗಿ ಹಿರಿಯ ಮತ್ತು ಪ್ರಬುದ್ಧ ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಅವರ ಅಭಿನಯದ ಬಗ್ಗೆ ವಿವರಿಸುವ ಅಗತ್ಯವೇ ಇಲ್ಲ. ಅವರು ಮಾತು ಮತ್ತು ಅಭಿನಯದಿಂದ ಕಣ್ಣಾಲಿಗಳನ್ನು ಒದ್ದೆ ಮಾಡಿದರು. ರಮಣ ಆಚಾರ್ಯರ ಗುರುಮಾರ್ಲ, ಉದ್ಯಾವರ ಪದ್ಮನಾಭ ಮಾಸ್ತರ್ ಅವರ ಸೊನ್ನೆಯ ಅಭಿನಯ ಮನಸ್ಪರ್ಶಿಯಾಗಿತ್ತು. ಸುರೇಶ್ ಕೊಲೆಕಾಡಿ ಅವರ ಹಾಸ್ಯ ನಗೆಗಡಲಲ್ಲಿ ತೇಲಾಡಿಸಿತು. ಅಬ್ಬಗ-ದಾರಗ ಪಾತ್ರದಲ್ಲಿ ಮಿಂಚಿದ ಪ್ರಶಾಂತ್ ಮುಂಡ್ಕೂರು ಮತ್ತು ಸಂದೀಪ್ ಶೆಟ್ಟಿ ಕಾವೂರು ಅವರ ಜೋಡಿಯೂ ಶಹಬ್ಟಾಸ್ ಎನ್ನುವಂಥ ಅಭಿನಯ ನೀಡಿತ್ತು. ಉಳಿದಂತೆ ಇತರ ಪಾತ್ರಗಳಲ್ಲಿ ಗಣೇಶ್ ಶೆಟ್ಟಿ ಸಾಣೂರು, ಹರಿರಾಜ್ ಶೆಟ್ಟಿಗಾರ್ ಕಿನ್ನಿಗೋಳಿ, ರಾಜೇಶ್ ಕುಂಪಲ, ಸಂದೀಪ್ ಪುತ್ತಿಗೆ, ಮಿಲನ್ ಪಣಂಬೂರು ಎಲ್ಲರೂ ಉತ್ತಮವಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದರು.
ಹರೀಶ್ ಶೆಟ್ಟಿ ಸೂಡ ಅವರ ಸಂಪ್ರದಾಯ ಬದ್ಧ ಭಾಗವತಿಕೆಯೂ ನಮಗೆ ಹಳೆ ಕಾಲದ ಯಕ್ಷಗಾನದ ಖುಷಿಯನ್ನು ಕಟ್ಟಿಕೊಟ್ಟಿತಲ್ಲದೆ, ಇಡೀ ಪ್ರದರ್ಶನಕ್ಕೆ ಕಿರೀಟವಿಟ್ಟಂತಿತ್ತು. ಜತೆಗೆ ಧೀರಜ್ ರೈ ಸಂಪಾಜೆ ಅವರ ಹೊಸ ಶೈಲಿಯ ಹಾಡು ಮುದ ನೀಡಿತು. ಅದಕ್ಕೆ ಪೂರಕವಾಗಿ ಎಲ್ಲರ ಹಿಮ್ಮೇಳ ಕಲಾವಿದರೂ ಉತ್ತಮ ಪ್ರದರ್ಶನವನ್ನು ನೀಡಿದರು. ಸುಬ್ರಹ್ಮಣ್ಯ ಬೈಪಾಡಿತ್ತಾಯರ ಪಾತ್ರವೂ ಉತ್ತಮ ಮಾತುಗಾರಿಕೆಯಿಂದ ಗಮನ ಸೆಳೆಯಿತು. ಆದರೆ ನಾಲ್ಕು ಗುತ್ತಿನ ಮಹಿಳೆಯರ ಹಾಸ್ಯ ಸ್ವಲ್ಪ ಮಿತಿ ದಾಟಿತ್ತು.
ಅಂತೂ ಒಂದು ತುಳು ಪ್ರದರ್ಶನದ ಮೂಲಕ ದಶಕಗಳ ಹಿಂದಿನ ಕಾಲಘಟ್ಟದ ಯಕ್ಷಗಾನವನ್ನು ಪ್ರೇಕ್ಷಕರೆದುರು ತಂದು ನಿಲ್ಲಿಸುವಲ್ಲಿ ಈ ತಂಡ ಸಫಲವಾಗಿದೆ ಎಂದು ಹೇಳಬಹುದು.
ಸತೀಶ್ ಅಂಬಲಪಾಡಿ