Advertisement

ಸ್ವಾವಲಂಬನೆ ಸಾಕಾರ; ಸರಕಾರದ ಎಂಟು ವರ್ಷಗಳ ಸಾಧನೆಗೆ ಪ್ರಧಾನಿ ಸಂತಸ

02:35 AM Jun 05, 2022 | Team Udayavani |

ಹೊಸದಿಲ್ಲಿ: ಕೇಂದ್ರದ ಎನ್‌ಡಿಎ ಸರಕಾರ ಎಂಟು ವರ್ಷ ಪೂರೈಸಿರುವ ಹೊತ್ತಿನಲ್ಲೇ ಮೂರು ಸರಣಿ ಲೇಖನ ಬರೆದಿರುವ ಪ್ರಧಾನಿ ಮೋದಿ, ಈ ಅವಧಿಯಲ್ಲಿ ಸರಕಾರದ ಸಾಧನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ರಕ್ಷಣೆ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಭಾರತದಿಂದ ಹಿಡಿದು, ಜಗತ್ತಿಗೆ ಲಸಿಕೆ ನೀಡಿ ಕ್ರಾಂತಿ ಮಾಡಿದ ಬಗೆಯನ್ನೂ ಅವರು ಉಲ್ಲೇಖಿಸಿದ್ದಾರೆ.

Advertisement

ದೇಶದಲ್ಲಿ ಕೊರೊನಾ ಸೋಂಕು ಗರಿಷ್ಠ ಪ್ರಮಾಣದಲ್ಲಿ ಇದ್ದಾಗ 100 ದೇಶಗಳಿಗೆ ಔಷಧ ಪೂರೈಸಿ ನೆರವಾಗಿದ್ದೆವು. ಲಸಿಕೆಯ 20 ಕೋಟಿಗೂ ಅಧಿಕ ಡೋಸ್‌ಗಳನ್ನು ಅಗತ್ಯವಿರುವ ದೇಶಗಳಿಗೆ ನೀಡಿ ನೆರವಿನ ಹಸ್ತ ಚಾಚಲಾಗಿತ್ತು ಎಂದು ಈ ಕುರಿತು ಅವರು ಟ್ವೀಟ್‌ ಮಾಡಿದ್ದಾರೆ. ಭಾರತವು ಇತರ ದೇಶಗಳಿಗೆ ನೆರವಾದದ್ದರಿಂದ ಕೊರೊನೋತ್ತರದ ಬದಲಾದ ಜಗತ್ತಿನಲ್ಲಿ ಭಾರತ ಒಂದು ನಂಬಿಕಸ್ಥ ದೇಶ ಎನ್ನುವುದು ಸಾಬೀತಾಗಿದೆ. ಹೀಗಾಗಿ ನಮ್ಮ ಜತೆಗೆ ಸಹಭಾಗಿತ್ವ ಹೊಂದಲು ಹೆಚ್ಚಿನ ರಾಷ್ಟ್ರಗಳು ಮುಂದಾಗಿವೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.

ಜಾಗತಿಕ ಶಕ್ತಿ
ಭಾರತ ಈಗ ಜಾಗತಿಕ ಶಕ್ತಿಯಾಗಿದೆ ಎಂದು ಬಣ್ಣಿಸಿರುವ ಪ್ರಧಾನಿ ಸಂಕಷ್ಟಕ್ಕೆ ತುತ್ತಾಗಿರುವ ಉಕ್ರೇನ್‌ನಿಂದ “ಆಪರೇಷನ್‌ ಗಂಗಾ’ದಡಿ 22,500 ಮಂದಿ ವಿದ್ಯಾರ್ಥಿ ಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಅದರ ಜತೆಗೆ ಇತರ ದೇಶಗಳ ವಿದ್ಯಾರ್ಥಿಗಳನ್ನೂ ರಕ್ಷಿಸಲಾಗಿದೆ. ಜತೆಗೆ ಕೊರೊನಾ ಅವಧಿಯಲ್ಲಿ “ವಂದೇ ಭಾರತ್‌ ಮಿಷನ್‌’ ಅಡಿ ವಿವಿಧ ದೇಶಗಳಲ್ಲಿ ಸಂಕಷ್ಟದಲ್ಲಿದ್ದ ಭಾರತೀಯರನ್ನು ಮತ್ತು ನೆರೆಯ ರಾಷ್ಟ್ರಗಳ ಪ್ರಜೆಗಳನ್ನು ಪಾರು ಮಾಡುವಲ್ಲಿ ಮುಖ್ಯ ಪಾತ್ರ ವಹಿಸಲಾಗಿತ್ತು ಎಂದಿದ್ದಾರೆ.

ರಕ್ಷಣೆಯಲ್ಲಿ ಸ್ವಾವಲಂಬನೆ
ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಕ್ಷಣ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನ ಮಾಡಲಾಗಿದ್ದು, ಯಶಸ್ಸು ಸಾಧಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಗಡಿಗಳಲ್ಲಿ ಕೈಗೊಳ್ಳಬೇಕಾಗಿರುವ ಭದ್ರತೆ, ರಕ್ಷಣ ಕ್ಷೇತ್ರದಲ್ಲಿ ಸುಧಾರಣೆ, ದೇಶದ ರಕ್ಷಣೆಗೆ ಅಗತ್ಯ ಶಸ್ತ್ರಾಸ್ತ್ರಗಳು, ಬಂದೂಕುಗಳು, ಶಸ್ತ್ರಾಸ್ತ್ರಗಳ ಬಿಡಿ ಭಾಗಗಳ ಸಹಿತ ಹಲವು ಸರಕುಗಳನ್ನು ದೇಶದಲ್ಲಿಯೇ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಭಾರತ ಕೂಡ ಮುಂದಿನ ದಿನಗಳಲ್ಲಿ ಶಸ್ತ್ರಾಸ್ತ್ರ ಗಳನ್ನು ಉತ್ಪಾದಿಸಿ, ರಫ್ತು ಮಾಡಲು ಆದ್ಯತೆ ನೀಡಲಾಗುತ್ತಿದೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next