Advertisement

‘ಕೃಷಿ ನಾಶದೊಂದಿಗೆ ಸಂಸ್ಕೃತಿಯೂ ನಾಶ’ 

02:45 AM Aug 04, 2017 | Team Udayavani |

ಮಡಿವಾಳರ ಸಂಘ: ‘ಆಟಿಡ್‌ ಕಂಡೊಡೊಂಜಿ ದಿನ’

Advertisement

ಬೆಳ್ತಂಗಡಿ: ದ. ಕ. ಜಿಲ್ಲಾ ಮಡಿವಾಳರ ಸಂಘ ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ದ. ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಮಡಿವಾಳ ಸಮಾಜ ಬಾಂಧವರಿಗಾಗಿ ಆಟಿಯ ತಿಂಡಿ ತಿನಸುಗಳ ಪ್ರದರ್ಶನ ಮತ್ತು ಕೆಸರುಗದ್ದೆ ಕ್ರೀಡಾಕೂಟ ‘ಆಟಿಡ್‌ ಕಂಡೊಡೊಂಜಿ’ ದಿನ ಕಾರ್ಯಕ್ರಮ ನಿಡಿಗಲ್‌ನಲ್ಲಿ ನಡೆಯಿತು.

ಮೂಡಬಿದಿರೆ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಪರಂಪರೆ, ಸಂಸ್ಕೃತಿ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಸಾವಿರಾರು ದೈವ – ದೇವರುಗಳ ನೆಲೆವೀಡಾದ ಈ ತುಳುನಾಡಿನಲ್ಲಿ ಕೃಷಿ ನಾಶದೊಂದಿಗೆ ನಮ್ಮ ಸಂಸ್ಕೃತಿಯೂ ನಾಶವಾಗುತ್ತಿದೆ. ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ಮತ್ತೂಮ್ಮೆ ತೋರಿಸುವ ಕೆಲಸ ಈ ಕಾರ್ಯಕ್ರಮದ ಮೂಲಕ ಆಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ. ಎನ್‌. ಪ್ರಕಾಶ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಅಗಸ ಯಾನೆ ಮಡಿವಾಳರ ಸಂಘದ ಅಧ್ಯಕ್ಷ ಸಚ್ಚಿದಾನಂದ ಖಂಡೇರಿ, ಮಂಗಳೂರಿನ ಸೂಪರಿಂಟೆಂಡೆಂಟ್‌ ಆಫ್‌ ಕಸ್ಟಮ್ಸ್‌ನ ಉಮೇಶ್‌ ಪುತ್ರನ್‌, ಮುಂಬಯಿಯ ಉದ್ಯಮಿ ಕರುಣಾಕರ ಪುತ್ರನ್‌, ಉಡುಪಿ ಶ್ರೀ ವೀರ ಮಾಚೀದೇವ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಆನಂದ ಮಡಿವಾಳ, ಮುಬಯಿಯ ಹೊಟೇಲ್‌ ಉದ್ಯಮಿ ರಾಮಣ್ಣ ಮಡಿವಾಳ ಭಾಗವಹಿಸಿದ್ದರು. ಈ ಸಂದರ್ಭ ಮುಂಬಯಿ ಉದ್ಯಮಿ ಕರುಣಾಕರ ಪುತ್ರನ್‌, ಕೆಸರುಗದ್ದೆಯನ್ನು ನೀಡಿ ಸಹಕಾರ ನೀಡಿದ ಕೆಂಪಯ್ಯ ಮಡಿವಾಳ, ಕಾಂತಪ್ಪ ಮಡಿವಾಳ ನಿಡಿಗಲ್‌ ಮಜಲ್‌, ನಿವೃತ್ತರಾಗುತ್ತಿರುವ ಶಿಕ್ಷಕ ಸಂಜೀವ ಮಡಿವಾಳ ಅವರನ್ನು ಗೌರವಿಸಲಾಯಿತು.

ಸಮಾರೋಪ
ದ.ಕ. ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಿ.ಎನ್‌. ಪ್ರಕಾಶ್‌, ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಂತ್‌ ಮಡಿವಾಳ ಮುಂಡಾಜೆ, ನಿಕಟಪೂರ್ವ ಅಧ್ಯಕ್ಷ ಶಶಿಧರ್‌ ಎಂ. ಕಲ್ಮಂಜ, ಉದ್ಯಮಿ ಕರುಣಾಕರ ಪುತ್ರನ್‌, ದ.ಕ. ಜಿಲ್ಲಾ ಮಡಿವಾಳರ ಸಂಘದ ಕಾರ್ಯದರ್ಶಿ ಭಾಸ್ಕರ ಬೇಕಲ್‌ ಬಹುಮಾನ ವಿತರಿಸಿದರು.

Advertisement

ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಂತ್‌ ಮಡಿವಾಳ ಮುಂಡಾಜೆ ಸ್ವಾಗತಿಸಿ, ಬೆಳ್ತಂಗಡಿ ತಾಲೂಕು ರಜಕ ಯೂತ್‌ ಅಧ್ಯಕ್ಷ ವಿಜಯ ಕುಮಾರ್‌ ನಿಡಿಗಲ್‌ ಮಜಲ್‌ ವಂದಿಸಿದರು. ಬೆಳ್ತಂಗಡಿ ತಾಲೂಕು ಮಡಿವಾಳರ ಸಮಾಜ ಸೇವಾ ಸಂಘದ ಕೋಶಾಧಿಕಾರಿ ರಾಜೇಶ್‌ ಪೆಂರ್ಮುಡ ಕಾರ್ಯಕ್ರಮ ನಿರೂಪಿಸಿದರು.

ಆ. 11ರಂದು ಪ್ರತಿಭಟನೆ 
ಬಿ. ಸಿ.ರೋಡ್‌ನ‌ ಉದಯ ಲಾಂಡ್ರಿಯ ಶರತ್‌ ಮಡಿವಾಳ ಅವರ ಹತ್ಯೆಯನ್ನು ಇಡೀ ಮಡಿವಾಳ ಸಮಾಜ ಖಂಡಿಸುತ್ತದೆ. ಈ ಹತ್ಯೆಯ ಹಿಂದಿರುವ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಈ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಆ. 11ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ದ.ಕ. ಮತ್ತು ಉಡುಪಿ ಜಿಲ್ಲೆಯ ಮಡಿವಾಳ ಸಮಾಜದ ವತಿಯಿಂದ ಪ್ರತಿಭಟನೆ  ನಡೆಸಲಾಗುವುದು.
– ಶ್ರೀ ಮುಕ್ತಾನಂದ ಸ್ವಾಮೀಜಿ,  ಶ್ರೀ ಕ್ಷೇತ್ರ ಕರಿಂಜೆ

Advertisement

Udayavani is now on Telegram. Click here to join our channel and stay updated with the latest news.

Next