Advertisement

ಟಿ20: ಫೈನಲಿಗೆ ಆಸ್ಟ್ರೇಲಿಯ

06:30 AM Feb 11, 2018 | Team Udayavani |

ಮೆಲ್ಬರ್ನ್: ಟಿ20 ತ್ರಿಕೋನ ಸರಣಿಯ ಶನಿವಾರದ ಪಂದ್ಯದಲ್ಲಿ ಕಾಂಗರೂ ಪಡೆ ಸುಲಭದಲ್ಲಿ ಇಂಗ್ಲೆಂಡನ್ನು ಕೆಡವಿದೆ. 33 ಎಸೆತ ಬಾಕಿ ಇರುವಾಗಲೇ 7 ವಿಕೆಟ್‌ಗಳಿಂದ ಗೆದ್ದು ಬಂದಿದೆ.

Advertisement

ಮೆಲ್ಬರ್ನ್ನಲ್ಲಿ ನಡೆದ ಮುಖಾಮುಖೀಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ 7 ವಿಕೆಟಿಗೆ ಕೇವಲ 137 ರನ್‌ ಗಳಿಸಿದರೆ, ಆಸ್ಟ್ರೇಲಿಯ 14.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 138 ರನ್‌ ಬಾರಿಸಿ ವಿಜಯಿಯಾಯಿತು. ಇದರೊಂದಿಗೆ ಆಡಿದ ಮೂರೂ ಪಂದ್ಯಗಳನ್ನು ಗೆದ್ದ ಆಸೀಸ್‌ ಫೈನಲಿಗೆ ಲಗ್ಗೆ ಇರಿಸಿತು. ಕೂಟದ ಉಳಿದ ಲೀಗ್‌ ಪಂದ್ಯಗಳು ನ್ಯೂಜಿಲ್ಯಾಂಡಿನಲ್ಲಿ ನಡೆಯಲಿವೆ. ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ನಡುವೆ ಫೈನಲ್‌ ಪ್ರವೇಶಿಸಲಿರುವ ತಂಡ ಯಾವುದು ಎಂಬುದು ಇಲ್ಲಿ ಇತ್ಯರ್ಥವಾಗಲಿದೆ.

ಚೇಸಿಂಗ್‌ ವೇಳೆ ಆಸ್ಟ್ರೇಲಿಯ ಡೇವಿಡ್‌ ವಾರ್ನರ್‌ (2) ಅವರನ್ನು ಬೇಗನೇ ಕಳೆದುಕೊಂಡಿತಾದರೂ ಡಿ’ಆರ್ಸಿ ಶಾರ್ಟ್‌ (ಔಟಾಗದೆ 36), ಕ್ರಿಸ್‌ ಲಿನ್‌ (31), ಗ್ಲೆನ್‌ ಮ್ಯಾಕ್ಸ್‌ವೆಲ್‌ (39) ಮತ್ತು ಆರನ್‌ ಫಿಂಚ್‌ (ಔಟಾಗದೆ 20) ಸೇರಿಕೊಂಡು ನಿರಾಯಾಸವಾಗಿ ತಂಡವನ್ನು ದಡ ಮುಟ್ಟಿಸಿದರು. ಆಸೀಸ್‌ ಬ್ಯಾಟ್ಸ್‌ಮನ್‌ಗಳ ಅಬ್ಬರದ ವೇಳೆ 12 ಬೌಂಡರಿ ಹಾಗೂ 7 ಸಿಕ್ಸರ್‌ ಸಿಡಿಯಲ್ಪಟ್ಟಿತು.

ಇಂಗ್ಲೆಂಡಿಗೆ ಆಘಾತ
ಎಂಸಿಜಿಯಲ್ಲಿ ಇಂಗ್ಲೆಂಡಿನ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ಆಸೀಸ್‌ ಸ್ಟ್ರೈಕ್‌ ಬೌಲರ್‌ಗಳಾದ ಕೇನ್‌ ರಿಚರ್ಡ್‌ಸನ್‌-ಬಿಲ್ಲಿ ಸ್ಟಾನ್‌ಲೇಕ್‌ ಘಾತಕವಾಗಿ ಎರಗಿದರು. 16 ರನ್‌ ಆಗುವಷ್ಟರಲ್ಲಿ ಆರಂಭಿಕರಾದ ಜಾಸನ್‌ ರಾಯ್‌ (8) ಮತ್ತು ಅಲೆಕ್ಸ್‌ ಹೇಲ್ಸ್‌ (3) ವಿಕೆಟ್‌ ಉರುಳಲ್ಪಟ್ಟಿತು. ಡೇವಿಡ್‌ ಮಾಲನ್‌ (10) ಕೂಡ ಹೆಚ್ಚು ಹೊತ್ತು ಉಳಿಯಲಿಲ್ಲ. 34 ರನ್ನಿಗೆ 3 ವಿಕೆಟ್‌ ಬಿತ್ತು.

ಈ ಹಂತದಿಂದ ಇಂಗ್ಲೆಂಡ್‌ ತುಸು ಚೇತರಿಕೆಯ ಪ್ರದರ್ಶನ ನೀಡತೊಡಗಿತು. ಜೇಮ್ಸ್‌ ವಿನ್ಸ್‌ (21), ನಾಯಕ ಜಾಸ್‌ ಬಟ್ಲರ್‌ (46), ಸ್ಯಾಮ್‌ ಬಿಲ್ಲಿಂಗ್ಸ್‌ (29) ಜವಾಬ್ದಾರಿಯುತ ಆಟವಾಡಿದರು. ಆದರೂ ಇಂಗ್ಲೆಂಡ್‌ ಸ್ಕೋರ್‌ಬೋರ್ಡ್‌ನಲ್ಲಿ ಭಾರೀ ಮೊತ್ತವೇನೂ ಕಂಡುಬರಲಿಲ್ಲ. ಬಟ್ಲರ್‌ ತಮ್ಮ 46 ರನ್ನಿಗೆ 49 ಎಸೆತ ತೆಗೆದುಕೊಂಡರು. ಹೊಡೆದದ್ದು 3 ಬೌಂಡರಿ ಮಾತ್ರ. ಇಂಗ್ಲೆಂಡ್‌ ಇನ್ನಿಂಗ್ಸಿನ ಏಕೈಕ ಸಿಕ್ಸರ್‌ ಬಿಲ್ಲಿಂಗ್ಸ್‌ ಅವರಿಂದ ಸಿಡಿಯಲ್ಪಟ್ಟಿತು.

Advertisement

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-7 ವಿಕೆಟಿಗೆ 137 (ಬಟ್ಲರ್‌ 46, ಬಿಲ್ಲಿಂಗ್ಸ್‌ 29, ವಿನ್ಸ್‌ 21, ರಿಚರ್ಡ್‌ಸನ್‌ 33ಕ್ಕೆ 3, ಸ್ಟಾನ್‌ಲೇಕ್‌ 28ಕ್ಕೆ 2). ಆಸ್ಟ್ರೇಲಿಯ-14.3 ಓವರ್‌ಗಳಲ್ಲಿ 3 ವಿಕೆಟಿಗೆ 138 (ಮ್ಯಾಕ್ಸ್‌ವೆಲ್‌ 39, ಶಾರ್ಟ್‌ ಔಟಾಗದೆ 36, ಫಿಂಚ್‌ ಔಟಾಗದೆ 20, ಜೋರ್ಡನ್‌ 26ಕ್ಕೆ 2). ಪಂದ್ಯಶ್ರೇಷ್ಠ: ಕೇನ್‌ ರಿಚರ್ಡ್‌ಸನ್‌.

Advertisement

Udayavani is now on Telegram. Click here to join our channel and stay updated with the latest news.

Next