ಒಂದಷ್ಟು ಸಮಾನ ಮನಸ್ಕರು ಸೇರಿಕೊಂಡು “ಟಿಎಂಟಿ ಪ್ರೊಡಕ್ಷನ್ಸ್’ ಮೂಲಕ ಪ್ರತಿಭಾವಂತರಿಗೆ ಉದ್ಯೋಗ ನೀಡುವ ಸಲುವಾಗಿ ನಿರ್ಮಿಸಿದ್ದ “ಆರಾರಿರಾರೋ’ ಚಿತ್ರ ಕಳೆದ ವಾರ ಬಿಡುಗಡೆಯಾಗಿ ತೆರೆಗೆ ಬಂದಿದೆ. ವೃತ್ತಿಯಲ್ಲಿ ಮೂಲತಃ ಐಟಿ ಕ್ಷೇತ್ರದಲ್ಲಿ ಇಂಜಿನಿಯರ್ ಆಗಿರುವ, ಪ್ರವೃತ್ತಿಯಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಂದೀಪ್ ಶೆಟ್ಟಿ, ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿರುವ “ಆರಾರಿರಾರೋ’ ಸಿನಿಮಾದಲ್ಲಿ ಪ್ರಸನ್ನ ಶೆಟ್ಟಿ ನಾಯಕನಾಗಿ, ವೀಣಾ ಕಾಮತ್, ನಿರೀಕ್ಷಾ ಶೆಟ್ಟಿ, ಜೀವ, ಪಿಂಕಿ ರಾಣಿ, ರೂಪಾ ಶೆಟ್ಟಿ, ಮಂಗೇಶ ಭಟ್, ಗೌತಂ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಆರಾರಿರಾರೋ’ ರಾಜ್ಯಾದ್ಯಂತ ಸುಮಾರು 12ಕ್ಕೂ ಹೆಚ್ಚಿನ ಕಡೆಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಆರಾರಿರಾರೋ’ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿತು.
“ಆರಾರೊರಾರೋ’ ಸಿನಿಮಾವು ಭಾವನೆಗಳ ಮೌಲ್ಯವನ್ನು ಸಾರಲಿದೆ. ಕಥೆಯಲ್ಲಿ ಮುಗ್ದ ಕಳ್ಳನೊಬ್ಬ ಅಜ್ಜಿಯನ್ನು ಯಾವ ರೀತಿ ಆರೈಕೆ ಮಾಡುತ್ತಾನೆ. ಇದಕ್ಕೆ ಕಾರಣವೇನು? ಸಂಬಂಧವಿಲ್ಲದ ಆಕೆಯನ್ನು ನೋಡಿಕೊಳ್ಳುವ ಪ್ರಮೇಯವಾದರೂ ಏತಕ್ಕೆ ಬಂತು. ಹಾಗೆಯೇ ಪ್ರತಿಯೊಂದು ಜೀವಿಗೂ ನೈಸರ್ಗಿಕ ವಾತಾವರಣದಲ್ಲಿ ಬದುಕಬೇಕೆಂಬ ಆಸೆ ಇರುತ್ತದೆ ಎಂಬುದನ್ನು ಸನ್ನಿವೇಶಗಳ ಮೂಲಕ ಅರ್ಥಪೂರ್ಣವಾಗಿ ತೋರಿಸಲಾಗಿದೆ. “ಆರಾರಿರಾರೋ’ ಎಂಬುದು ತಾಯಿ ಮಗುವಿಗೆ ಹೇಳುವ ಜೋಗಳ ಪದ. ನಮ್ಮ ಸಿನಿಮಾದ ಕಥೆಗೆ ಇದೇ ಸೂಕ್ತ ಅನಿಸಿರುವುದರಿಂದ, “ಆರಾರಿರಾರೋ’ ಎಂಬ ಟೈಟಲ್ ಬಳಸಲಾಗಿದೆ ಎಂಬುದು ಚಿತ್ರತಂಡದ ವಿವರಣೆ.
ಇದೊಂದು ಯಾವುದೇ ಲಾಭದ ಉದ್ದೇಶದಿಂದ ಮಾಡಿದ ಸಿನಿಮಾವಲ್ಲ. ಹಾಗಾಗಿ ಕಮರ್ಷಿಯಲ್ ಸಿನಿಮಾಗಳಂತೆ ಅತಿಯಾದ ಪ್ರಚಾರವಿಲ್ಲದೆ ಸಿನಿಮಾ ಬಿಡುಗಡೆ ಮಾಡಿದ್ದೇವೆ. ಆದರೂ ಸಿನಿಮಾದ ಕಥಾಹಂದರ ಎಲ್ಲರಿಗೂ ಇಷ್ಟವಾಗುತ್ತಿದ್ದು, ಸಿನಿಮಾ ನೋಡಿದ ಒಬ್ಬರಿಂದ ಮತ್ತೂಬ್ಬರಿಗೆ ಸಿನಿಮಾದ ಬಗ್ಗೆ ಗೊತ್ತಾಗುತ್ತಿದೆ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಅಲ್ಲದೆ ಮುಂಬೈ ಹಾಗೂ ಆಸ್ಟ್ರೇಲಿಯಾ ಕಡೆಗಳಿಂದ ವಿತರಕರು ಆಹ್ವಾನ ನೀಡಿದ್ದಾರೆ. ತಮಿಳು ಭಾಷೆಗೆ ಡಬ್ಬಿಂಗ್ ಮಾಡಲು ಬೇಡಿಕೆ ಬಂದಿದೆ. ಸದ್ಯ ಸಿನಿಮಾವು ಮಾಲ್ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಎಂದು ತನ್ನ ಖುಷಿ ಹಂಚಿಕೊಂಡಿತು ಚಿತ್ರತಂಡ.
ಸಂಗೀತ ನಿರ್ದೇಶಕ ಎಮಿಲ್, ಛಾಯಾಗ್ರಹಕ ಮಯೂರ ಶೆಟ್ಟಿ, ಸಂಕಲನಕಾರ ಕಾರ್ತಿಕ್ ಕೆ. ಎಂ, ನೃತ್ಯ ಪ್ರಣವ್, ತಾಂತ್ರಿಕ ನಿರ್ದೇಶನ ವಿನಯ್ ಪ್ರೀತಂ, ಕ್ರಿಯೆಟೀವ್ ಮುಖ್ಯಸ್ಥ ರಾಘವ, ಮುಖ್ಯ ಸಲಹೆಗಾರ ಆನಂದ್ ಯಾದವಾಡ, ಕಾರ್ಯಕಾರಿ ನಿರ್ಮಾಪಕ ನವೀನ್ ಚಂದ್ರ ವಿಟ್ಲ, ಪ್ರಚಾರದ ಮುಖ್ಯಸ್ಥ ಶರಣ್ ಪೂಣಚ್ಚ ಮೊದಲಾದವರು ಚಿತ್ರದ ಬಗ್ಗೆ ಮಾತನಾಡಿದರು.