ನವದೆಹಲಿ: ಅಗ್ನಿವೀರ್‌ಗಳ ನೇಮಕಾತಿ ಸಮಯದಲ್ಲಿ ಪಂಜಾಬ್‌ನ ಆಪ್ ಸರ್ಕಾರವು ಅಗ್ನಿಪಥ್ ಯೋಜನೆಯನ್ನು “ಸಂಪೂರ್ಣವಾಗಿ ಬೆಂಬಲಿಸುತ್ತದೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
ಪಂಜಾಬ್ ಸರ್ಕಾರ ನೇಮಕಾತಿ ಅಭಿಯಾನಕ್ಕೆ ಬೆಂಬಲ ನೀಡುತ್ತಿಲ್ಲ ಎಂಬ ವರದಿಗಳ ನಂತರ ಕೇಜ್ರಿವಾಲ್ ಈ ಸ್ಪಷ್ಟನೆ ನೀಡಿದ್ದು, “ನಾವು ಅಗ್ನಿಪಥ್ ಯೋಜನೆಯಲ್ಲಿ ಕೇಂದ್ರದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ ಆದರೆ ಕೇಂದ್ರವು ಅದನ್ನು ಜಾರಿಗೆ ತಂದಿರುವುದರಿಂದ ನಾವು ಅದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಯೋಜನೆ ಮತ್ತು ಸೈನ್ಯದೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದಿದ್ದಾರೆ.
ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಅಗ್ನಿಪಥ್ ಯೋಜನೆಯಲ್ಲಿ “ಸಂಪೂರ್ಣ ಬೆಂಬಲ”ಕ್ಕಾಗಿ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
”ಪಂಜಾಬ್‌ನಲ್ಲಿ ಅಗ್ನಿವೀರ್‌ಗಳ ನೇಮಕಾತಿಗಾಗಿ ಸೇನಾ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡುವಂತೆ ಎಲ್ಲಾ ಡೆಪ್ಯೂಟಿ ಕಮಿಷನರ್‌ಗಳಿಗೆ ಸೂಚಿಸಲಾಗಿದೆ. ಯಾವುದೇ ಸಡಿಲತೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಿಂದ ಸೇನೆಗೆ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು” ಎಂದು ಮಾನ್ ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಜೂನ್‌ನಲ್ಲಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯು ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ.
ಆಮ್ ಆದ್ಮಿ ಪಕ್ಷ ಈ ಹಿಂದೆ ಅಗ್ನಿಪಥ್ ಯೋಜನೆಯನ್ನು ಟೀಕಿಸಿತ್ತು ಮತ್ತು ರಕ್ಷಣಾ ಉದ್ಯೋಗ ಆಕಾಂಕ್ಷಿಗಳಿಗೆ ಕೇವಲ ನಾಲ್ಕು ವರ್ಷಗಳಲ್ಲದೇ ತಮ್ಮ ಜೀವನದುದ್ದಕ್ಕೂ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.