ಹೊಸದಿಲ್ಲಿ : ಸುಳ್ಳು, ನಿರಾಧಾರ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿ ಸಖತ್ ಪ್ರಚಾರ ಪಡೆದು ಕೆಲ ಕಾಲದ ಬಳಿಕ ತಾವು ಆರೋಪ ಮಾಡಿರುವ ರಾಜಕೀಯ ಮುಖಂಡರಲ್ಲಿ ಕ್ಷಮೆ ಕೋರುವುದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಈಗ ಅಭ್ಯಾಸವಾಗಿ ಹೋಗಿದೆ.
ಅಂತೆಯೇ ಹೊಸದಾಗಿ ಈಗ ಆಮ್ ಆದ್ಮಿ ಪಕ್ಷದ ನಾಯಕರಾದ ಅರವಿಂದ ಕೇಜ್ರಿವಾಲ್, ಆಶುತೋಷ್, ರಾಘವ ಛಡ್ಡಾ ಮತ್ತು ಸಂಜಯ್ ಸಿಂಗ್ ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದು ತಾವು ಈ ಹಿಂದೆ ಮಾಡಿದ್ದ ನಿರಾಧಾರ ಮತ್ತು ಸುಳ್ಳು ಆರೋಪಗಳ ಬಗ್ಗೆ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.
ಎಎನ್‌ಐ ಮಾಡಿರುವ ವರದಿಯ ಪ್ರಕಾರ ಕೇಜ್ರಿವಾಲ್ ಮತ್ತು ಅವರ ಸಹೋದ್ಯೋಗಿ ಆಪ್ ನಾಯಕರು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಬರೆದಿರುವ ಪತ್ರದಲ್ಲಿ ಕ್ಷಮೆಯಾಚಿಸುತ್ತಾ ”ನಮ್ಮ ವಿರುದ್ಧ ನೀವು ದಿಲ್ಲಿ ನ್ಯಾಯಾಲಯದಲ್ಲಿ ದಾಖಲಿಸಿರುವ ಮಾನನಷ್ಟ ದಾವೆಯನ್ನು ದಯವಿಟ್ಟು ಹಿಂಪಡೆಯಬೇಕು” ಎಂದು ಕೋರಿದ್ದಾರೆ.
ಕೇಜ್ರಿವಾಲ್ ಅವರು ಈ ಪತ್ರದಲ್ಲಿ “2015ರಲ್ಲಿ ನಾನು ನಿಮ್ಮ ವಿರುದ್ಧ ಕೆಲವೊಂದು ಆರೋಪಗಳನ್ನು ಮಾಡಿದ್ದೆ. ಅನಂತರ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿ) ಅಧ್ಯಕ್ಷರಾಗಿ ನಿಮ್ಮ ವಿರುದ್ಧ ಹಣಕಾಸು ಅಕ್ರಮಗಳ ಆರೋಪ ಮಾಡಿದ್ದೆ. ಈ ಆರೋಪಗಳು ನೀವು ನನ್ನ ವಿರುದ್ಧ ದಿಲ್ಲಿ ಹೈಕೋರ್ಟ್ ನಲ್ಲಿ ಮತ್ತು ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ದಾಖಲಿಸಿರುವ ಮಾನನಷ್ಟ ದಾವೆಗಳ ವಿಷಯವಾಗಿವೆ. ಡಿಡಿಸಿಎ ಹಣಕಾಸು ಅಕ್ರಮಗಳ ಬಗ್ಗೆ ಮಾಹಿತಿ ಹೊಂದಿರುವುದಾಗಿ ಹೇಳಿಕೊಂಡ ಕೆಲವು ವ್ಯಕ್ತಿಗಳು ಒದಗಿಸಿದ್ದ ಮಾಹಿತಿ ಮತ್ತು ದಾಖಲೆ ಪತ್ರಗಳ ಆಧಾರದಲ್ಲಿ ನಾನು ನಿಮ್ಮ ವಿರುದ್ಧ ಆರೋಪಗಳನ್ನು ಮಾಡಿದ್ದೆ. ಆದರೆ ಇತ್ತೀಚೆಗೆ ನಾನು ಪರಿಶೀಲಿಸಿದಾಗ ಆ ಆರೋಪಗಳೆಲ್ಲವೂ ಸುಳ್ಳು ಮತ್ತು ನಿರಾಧಾರ ಎಂಬುದು ನನಗೆ ಗೊತ್ತಾಯಿತು. ನಿಮ್ಮ ವಿರುದ್ಧ ಆರೋಪ ಮಾಡುವಲ್ಲಿ ನನಗೆ ಈ ತಪ್ಪು ಮಾಹಿತಿಗಳೇ ಕಾರಣವಾದವು’ ಎಂದು ಕೇಜ್ರಿವಾಲ್ ಕ್ಷಮಾಪಣೆ ಕೋರುವ ಪತ್ರದಲ್ಲಿ ಹೇಳಿದ್ದಾರೆ.
ಆದರೆ ಇದೀಗ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಅರುಣ್ ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ದದ ಮಾನನಷ್ಟ ದಾವೆಯನ್ನು ಹಿಂಪಡೆಯುವ ಸಾಧ್ಯತೆಗಳು ಇಲ್ಲವೆಂದು ಗೊತ್ತಾಗಿದೆ.
ಕೇಜ್ರಿವಾಲ್ ಈ ಹಿಂದೆ ತಾವು ಮಾಡಿರುವ ಸುಳ್ಳು ಮತ್ತು ನಿರಾಧಾರ ಆರೋಪಗಳಿಗಾಗಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಾಯಕ ಬಿಕ್ರಮ್ ಸಿಂಗ್ ಮಜೀತಿಯ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಲ್ಲಿ ನಿಶ್ಶರ್ತ ಕ್ಷಮೆಯಾಚಿಸಿದ್ದಾರೆ.