Advertisement

ಬೆಂಗಳೂರು ರಸ್ತೆ ಗುಂಡಿಗೆ ಟೆಕ್ಕಿ ಬಲಿ: ಪ್ರತಿಭಟಿಸಿದ ಎಎಪಿ ಮುಖಂಡರು ವಶಕ್ಕೆ

05:41 PM Mar 14, 2022 | Team Udayavani |

ಬೆಂಗಳೂರು: ಎಂ.ಎಸ್.ಪಾಳ್ಯದಲ್ಲಿ ರಸ್ತೆಗುಂಡಿಗೆ ಬಲಿಯಾದ ಅಶ್ವಿನ್‌ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದ್ದಾರೆ.

Advertisement

ಎಎಪಿ ಮುಖಂಡರಾದ ಮೋಹನ್‌ ದಾಸರಿ, ಬಿ.ಟಿ.ನಾಗಣ್ಣ, ಸುರೇಶ್‌ ರಾಥೋಡ್‌, ಜಗದೀಶ್‌ ವಿ ಸದಂ, ಚೆನ್ನಪ್ಪಗೌಡ ನೆಲ್ಲೂರು, ಸುಹಾಸಿನಿ, ಕುಶಲಸ್ವಾಮಿ, ಸಮೀರ್‌ ಅಸದ್‌, ಜಗದೀಶ್ ಬಾಬು , ಶ್ರೀಕಾಂತ್ , ಗೋವರ್ಧನ್ ರಾಜು, ಯಾಸೀನ್‌ ಸೇರಿದಂತೆ 14 ಮಂದಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೂರಾರು ಎಎಪಿ ಕಾರ್ಯಕರ್ತರು ವಿದ್ಯಾರಣ್ಯ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ವಶಕ್ಕೆ ಪಡೆದವರನ್ನು ಮ್ಯಾಜಿಸ್ಟೇಟ್‌ ಮುಂದೆ ಹಾಜರುಪಡಿಸಿ ಹೇಳಿಕೆ ಪಡೆಯಲಾಯಿತು.

ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿಯ ಬೆಂಗಳೂರು ನಗರ ಅಧ್ಯಕ್ಷರಾದ ಮೋಹನ್‌ ದಾಸರಿ, “ಬೆಂಗಳೂರಿನ ರಸ್ತೆಗುಂಡಿಗಳಿಗೆ ವಾಹನಸವಾರರು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ. ಸೀನಿಯರ್‌ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶ್ವಿನ್‌ರವರನ್ನು ಈಗ ಕಳೆದುಕೊಂಡಿದ್ದೇವೆ. ಮೃತರ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಘಟನೆಗೆ ಬಿಬಿಎಂಪಿ ಕಮಿಷನರ್‌ ಹಾಗೂ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ. ಆದ್ದರಿಂದ ಅವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

ಬೆಂಗಳೂರು ಎಎಪಿಯ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ ಮಾತನಾಡಿ, “ರಸ್ತೆಗುಂಡಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಅನೇಕ ಸಲ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿದ್ದಲ್ಲ. ಬದಲಾಗಿ, ರಸ್ತೆಗುಂಡಿ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಭ್ರಷ್ಟ ರಾಜಕಾರಣಿಗಳು ಪೊಲೀಸರನ್ನು ತಮ್ಮ ಕೈಗೊಂಬೆಯಂತೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next