ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದ್ದು, ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಅಶುತೋಷ್ ತೀರಾ ಖಾಸಗಿ ಕಾರಣ ನೀಡಿ ಬುಧವಾರ ರಾಜೀನಾಮೆ ನೀಡಿದ್ದಾರೆ.
ಪತ್ರಕರ್ತರಾಗಿದ್ದ ಅಶುತೋಷ್ 2014ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅಶುತೋಷ್ ಅವರ ರಾಜೀನಾಮೆ ಬಗ್ಗೆ ಆಪ್ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ತಮ್ಮ ರಾಜೀನಾಮೆ ಕುರಿತು ಟ್ವೀಟ್ ಮಾಡಿರುವ ಅಶುತೋಷ್, ಪ್ರತಿಯೊಂದು ಯಾತ್ರೆಯೂ ಕೊನೆಗೊಳ್ಳಬೇಕಾಗಿದೆ. ಆಪ್ ಜೊತೆಗಿನ ನನ್ನ ಸಹಭಾಗಿತ್ವ ತುಂಬಾ ಸುಂದರ ಮತ್ತು ಕ್ರಾಂತಿಕಾರಿಯಾಗಿತ್ತು. ಇದೀಗ ಅದು ಕೊನೆಗೊಂಡಿದೆ. ನಾನೀಗ ಆಪ್ ಗೆ ರಾಜೀನಾಮೆ ನೀಡಿದ್ದು, ಅದನ್ನು ಪಕ್ಷ ಸ್ವೀಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇದು ತೀರಾ ಖಾಸಗಿ ವಿಚಾರ. ನನಗೆ ಸಹಕಾರ, ಬೆಂಬಲ ನೀಡಿದ ಪಕ್ಷದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಅಲ್ಲದೇ ಮತ್ತೊಂದು ಟ್ವೀಟ್ ನಲ್ಲಿ, ತನ್ನ ಖಾಸಗಿ ವಿಚಾರವನ್ನು ಗೌರವಿಸುವಂತೆ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಮಾಧ್ಯಮದ ನನ್ನ ಗೆಳೆಯರೇ ದಯವಿಟ್ಟು ನನ್ನ ಖಾಸಗಿತನವನ್ನು ಗೌರವಿಸಿ. ಯಾವುದೇ ರೀತಿಯ ಗೊಂದಲ, ಊಹಾಪೋಹ ಬೇಡ. ದಯವಿಟ್ಟು ಸಹಕರಿಸಿ ಎಂದು ಅಶುತೋಷ್ ಹೇಳಿದ್ದಾರೆ.