ಅಮೃತ್ ಸರ್(ಪಂಜಾಬ್): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಸದ್ದು ಮಾಡುತ್ತಿರುವ ನಡುವೆಯೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗತೊಡಗಿದೆ. ಪಂಜಾಬ್ ನ ಆಪ್ ಶಾಸಕ ಬಲ್ ದೇವ್ ಸಿಂಗ್ ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ ಇಬ್ಬಗೆ ನೀತಿ ಹಾಗೂ ತತ್ವ, ಸಿದ್ದಾಂತಗಳನ್ನು ಗಾಳಿಗೆ ತೂರುತ್ತಿರುವುದರಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಸಿಂಗ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಬಲ್ ದೇವ್ ಪಂಜಾಬ್ ನ ಜೈಟೋ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.
ಶಾಸಕ ಸುಖ್ ಪಾಲ್ ಸಿಂಗ್ ಖೈರಾ ಜನವರಿ 6ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆಪ್ ವರಿಷ್ಠ ಕೇಜ್ರಿವಾಲ್ ಸರ್ವಾಧಿಕಾರಿ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ್ದರು.
ಮೊನ್ನೆಯಷ್ಟೇ ವಕೀಲ, ಸಾಮಾಜಿಕ ಕಾರ್ಯಕರ್ತ ಎಚ್.ಎಸ್.ಫೂಲ್ಕಾ ಕೂಡಾ ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅದಕ್ಕೂ ಮುನ್ನ ತಮ್ಮ ಶಾಸಕ ಸ್ಥಾನಕ್ಕೆ ಗುಡ್ ಬೈ ಹೇಳಿದ್ದರು. ಫೂಲ್ಕಾ ಡಾಖಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು.
ಪಂಜಾಬ್ ವಿಧಾನಸಭೆಯಲ್ಲಿ ಪ್ರಸ್ತುತ ಆಮ್ ಆದ್ಮಿ ಪಕ್ಷದ 18 ಮಂದಿ ಶಾಸಕರಿದ್ದಾರೆ. ಮತ್ತೊಬ್ಬ ಶಾಸಕರು ಇಂದು ರಾಜೀನಾಮೆ ನೀಡಿದ್ದರಿಂದ ಆಪ್ ಶಾಸಕರ ಬಲ 17ಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಆಪ್ ಪಂಜಾಬ್ ನಲ್ಲಿ ಪ್ರತಿಪಕ್ಷ ಸ್ಥಾನದ ಅವಕಾಶವನ್ನು ಕಳೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ.