ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ಪ್ರಬಲ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶನಿವಾರ (ಅಕ್ಟೋಬರ್ 29) ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗಾಗಿ ಕ್ರೌಡ್ ಸೋರ್ಸಿಂಗ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, “ನಿಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ” ಎಂಬ ಅಭಿಯಾನದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.
ಗುಜರಾತ್ ನಲ್ಲಿ ಕೇಜ್ರಿವಾಲ್ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದು ಮತದಾರರಿಗೆ ಉಚಿತ ವಿದ್ಯುತ್, ಉತ್ತಮ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ನೀಡುವುದಾಗಿ ಭರವಸೆ ನೀಡಿರುವುದಾಗಿ ವರದಿ ವಿವರಿಸಿದೆ.
“ ಗುಜರಾತ್ ಜನರು ಬದಲಾವಣೆ ಬದಲಾಯಿಸಿದ್ದಾರೆ. ಮತದಾರರಿಗೆ ಹಣದುಬ್ಬರ, ನಿರುದ್ಯೋಗದ ಪರಿಹಾರಕ್ಕೆ ಬಯಸುತ್ತಿದ್ದಾರೆ. ಹೀಗಾಗಿ ಜನರು ಒಂದು ವರ್ಷದ ಹಿಂದೆ ಈ (ಬಿಜೆಪಿ) ಮುಖ್ಯಮಂತ್ರಿಯನ್ನು ಬದಲಾಯಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಅವರನ್ನು ಬದಲಾಯಿಸಿ, ಭೂಪೇಂದ್ರ ಪಟೇಲ್ ಅವರನ್ನು ಆಯ್ಕೆ ಮಾಡಿದ್ದೇಕೆ? ಅಂದರೆ ವಿಜಯ್ ರೂಪಾನಿ ಅವರಿಂದ ಏನಾದರು ತಪ್ಪಾಗಿದೆ ಎಂದು ಅರ್ಥವೇ? ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಗುಜರಾತ್ ಮುಖ್ಯಮಂತ್ರಿ ಯಾರಾಗಬೇಕೆಂದು ರಾಜ್ಯದ ಜನತೆ ನಿರ್ಧಾರ ಮಾಡಬೇಕೆಂದು ನಾವು ಬಯಸುತ್ತೇವೆ. ಪಂಜಾಬ್ ನಲ್ಲಿಯೂ ನಾವು ಇದೇ ಮಾದರಿ ಅನುಸರಿಸಿದ್ದನ್ನು ನೋಡಿದ್ದೀರಿ. ಆ ನಿಟ್ಟಿನಲ್ಲಿ ನಿಮ್ಮ ಮುಖ್ಯಮಂತ್ರಿಯನ್ನು ನೀವೇ ಆಯ್ಕೆ ಮಾಡಿ ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.