ನವದೆಹಲಿ: ಅಬಕಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮನೀಶ್ ಸಿಸೋಡಿಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೂ ರಾಜಕೀಯ ಕೆಸರೆರಚಾಟ ಮಾತ್ರ ಸದ್ಯಕ್ಕೆ ನಿಂತಂತೆ ಕಾಣುತ್ತಿಲ್ಲ. ಸಿಸೋಡಿಯಾ ಬಂಧನ ಖಂಡಿಸಿ ಆಪ್ ಮುಖಂಡರು ಬಿಜೆಪಿ ಮೇಲೆ ಹರಿಹಾಯ್ದ ಬಳಿಕ ಇದೀಗ ಬಿಜೆಪಿ ನಾಯಕರೂ ಆಪ್ ಮೇಲೆ ಸಾಲು ಸಾಲು ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ.
ಸಿಸೋಡಿಯಾ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಜಾಮೀನು ಅರ್ಜಿಯೂ ತಿರಸ್ಕೃತಗೊಂಡ ಬಳಿಕ ಮನೀಶ್ ಸಿಸೋಡಿಯಾ ರಾಜೀನಾಮೆ ಸಲ್ಲಿಸಿದ್ದು ಆಪ್ ಸರ್ಕಾರದ ಇನ್ನೊಬ್ಬ ಸಚಿವ ಸತ್ಯೇಂದ್ರ ಜೈನ್ ಅವರೂ ಭ್ರಷ್ಟಾಚಾರ ಆರೋಪದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಗುಡುಗುತ್ತಲೇ ದೆಹಲಿ, ಪಂಜಾಬ್‌ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಆಪ್ ಈಗ ಹಿನ್ನಡೆಯ ಮೇಲೆ ಹಿನ್ನಡೆ ಅನುಭವಿಸುತ್ತಿದ್ದು ತಮ್ಮ ಸರ್ಕಾರದ ಮೇಲೆ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳು ಅರವಿಂದ ಕೇಜ್ರಿವಾಲ್ ಅವರ ನಿದ್ದೆಗೆಡಿಸಿದೆ.
ಈ ಬಗ್ಗೆ ಆಪ್ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ʻನಾನು ಈವರೆಗೆ ಆಪ್ ಕಟ್ ಮತ್ತು ಕರಪ್ಷನ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಅಂದುಕೊಂಡಿದ್ದೆ. ಆದರೆ ಈಗ ಆಪ್ ಪಕ್ಷವು ಕಟ್, ಕರಪ್ಷನ್, ಕಮಿಷನ್ ಹೀಗೆ 3ಸಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಗೊತ್ತಾಗಿದೆʼ ಎಂದು ಟೀಕಿಸಿದ್ದಾರೆ.
ʻದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಟೊಂಕ ಕಟ್ಟಿ ನಿಂತಿದ್ದ ನೇತಾರರೇ ಇಂದು ಭ್ರಷ್ಟಾಚಾರದ ಮೂಲಕ ದೆಹಲಿಯಲ್ಲಿ ಕುಡುಕರ ಸಂಖ್ಯೆ ಹೆಚ್ಚುವಂತೆ ಮಾಡಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದ ಸಿಸೋಡಿಯಾ ಅವರಿಗೇ ನ್ಯಾಯಾಲಯ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದೆʼ ಎಂದು ಲೇವಡಿ ಮಾಡಿದ್ದಾರೆ.