ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವನ್ನು ಹಣಿಯುವ ಉದ್ದೇಶದಿಂದ 2019ರ ಲೋಕಸಭಾ ಚುನಾವಣೆಗೆ ಮುನ್ನವೇ ದಿಲ್ಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಕೈಜೋಡಿಸಲಿದೆ.
2015ರಲ್ಲಿ ಬಿಹಾರದಲ್ಲಿ ಬಿಜೆಪಿಯನ್ನು ಹಣಿಯಲು ಮಹಾ ಘಟಬಂಧನವನ್ನು ರೂಪಿಸಲಾಗಿತ್ತು. ಕಾಂಗ್ರೆಸ್, ಜೆಡಿಯು ಮತ್ತು ಆರ್‌ಜೆಡಿ ಮಹಾ ಘಟಬಂಧನದ ಮಿತ್ರ ಪಕ್ಷಗಳಾಗಿದ್ದವು. ಅನಂತರದಲ್ಲಿ ಈಚೆಗೆ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರ ರಚಿಸದಂತೆ ತಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಸಮ್ಮಿಶ್ರ ಸರಕಾರ ರಚಿಸಿದವು.
ಈಗ 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನುನ ಹಣಿಯಲು ದಿಲ್ಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಕೈಜೋಡಿಸಲು ಮುಂದಾಗಿದ್ದು ಆ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕಳೆದ ಮೇ 24ರಂದೇ ಉಭಯ ಪಕ್ಷಗಳ ನಡುವೆ ಮೈತ್ರಿ ಸಂಬಂಧಿತವಾಗಿ ಮಾತುಕತೆ ನಡೆದಿದ್ದು ಜೈರಾಮ್ ರಮೇಶ್ ಮತ್ತು ಅಜಯ್ ಮಾಕನ್ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದಾರೆ. 5 : 2 ಸೀಟು ಹಂಚಿಕೆ ಆಧಾರದಲ್ಲಿ (ಆಪ್‌ಗೆ 5 ಸೀಟು, ಕಾಂಗ್ರೆಸ್‌ಗೆ 2 ಸೀಟು) ಮಾತುಕತೆಯು ಸಾಗಿದೆ.
ಆದರೆ ಕಾಂಗ್ರೆಸ್ ಏಳು ಸೀಟುಗಳಲ್ಲಿ ಮೂರು ಸೀಟುಗಳು ತನಗೆ ಬೇಕೆಂಬ ಪಟ್ಟು ಹಿಡಿದಿರುವುದಾಗಿ ವರದಿಯಾಗಿದೆ. ಇವುಗಳಲ್ಲಿ ಒಂದು ಶರ್ಮಿಷ್ಠಾ ಮುಖರ್ಜಿಗೆ (ಹೊಸದಿಲ್ಲಿ), ಒಂದು ಅಜಯ್ ಮಾಕನ್‌ಗೆ (ಚಾಂದನೀ ಚೌಕ್) ಒಂದು ರಾಜಕುಮಾರ್ ಚೌಹಾಣ್‌ಗೆ (ವಾಯವ್ಯ ದಿಲ್ಲಿ) ಎಂದು ಹೇಳಲಾಗಿದೆ.