ಬೆಂಗಳೂರು : ಗುತ್ತಿಗೆ ಕಾಮಗಾರಿಗಳಲ್ಲಿನ ಅಕ್ರಮಗಳ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಮನವಿ ಸಲ್ಲಿಸಿದರು.
ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರನ್ನು ಭೇಟಿಯಾದ ಪೃಥ್ವಿ ರೆಡ್ಡಿ,ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ “ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಡಿ. ಕೆಂಪಣ್ಣರವರು ಜುಲೈ 6, 2021ರಂದು ಪ್ರಧಾನಿಗೆ ಪತ್ರ ಬರೆದು, ಗುತ್ತಿಗೆ ಕಾಮಗಾರಿಗಳಲ್ಲಿನ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಹಾಗೂ ಜಲ ಸಂಪನ್ಮೂಲ ಇಲಾಖೆ, ಬೃಹತ್ ನೀರಾವರಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ಎಷ್ಟೆಷ್ಟು ಶೇಕಡಾವಾರು ಮೊತ್ತವು ಅಕ್ರಮವಾಗುತ್ತಿದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಇದೊಂದು ಗಂಭೀರ ಆರೋಪವಾಗಿದ್ದು, ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಅವಶ್ಯಕವಾಗಿದೆ” ಎಂದು ವಿವರಿಸಿದರು.
“ಅಕ್ರಮಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೆವು. ಆದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಕಳೆದ ಮೂರು ತಿಂಗಳ ಅವಧಿಯ ಗುತ್ತಿಗೆಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ಹಲವು ವರ್ಷಗಳಿಂದ ಗುತ್ತಿಗೆ ಕಾಮಗಾರಿಗಳಲ್ಲಿ ಅಕ್ರಮ ನಡೆಯುತ್ತಿರುವುದರಿಂದ ಕೇವಲ ತಮ್ಮ ಅಧಿಕಾರಾವಧಿಯಲ್ಲಿನ ಮೂರು ತಿಂಗಳಿನ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸುವುದು ಸರಿಯಲ್ಲ. ಅಲ್ಲದೇ, ಅಕ್ರಮದಲ್ಲಿ ಸರ್ಕಾರದ ಅಧಿಕಾರಿಗಳು ಹಾಗೂ ಶಾಸಕರು ಭಾಗಿಯಾದ ಆರೋಪವಿರುವುದರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ತನಿಖೆ ನಡೆಸುವುದಕ್ಕೆ ನಮ್ಮ ಆಕ್ಷೇಪವಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
ಇದನ್ನೂ ಓದಿ : ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!
“ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದ್ದು, ತೆರಿಗೆದಾರರಿಗೆ ಅನ್ಯಾಯವಾಗುತ್ತಿದೆ. ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದರಿಂದ ತೆರಿಗೆದಾರರಲ್ಲೂ ವ್ಯವಸ್ಥೆಯ ಬಗ್ಗೆ ಭರವಸೆ ಮೂಡುತ್ತದೆ. ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಕ್ರಮ ಆಸ್ತಿಯು ಸರ್ಕಾರದ ಬೊಕ್ಕಸವನ್ನು ಸೇರಿ ರಾಜ್ಯದ ಅಭಿವೃದ್ಧಿಗೆ ಬಳಕೆಯಾಗಬೇಕಿದೆ. ಆದ್ದರಿಂದ ತಾವುಗಳು ಕಳೆದ ಹತ್ತು ವರ್ಷಗಳಲ್ಲಿ ವಿವಿಧ ಪಕ್ಷಗಳ ಸರ್ಕಾರಗಳ ಅವಧಿಯಲ್ಲಿನ ಎಲ್ಲ ಗುತ್ತಿಗೆ ಕಾಮಗಾರಿಗಳ ಅಕ್ರಮ ಕುರಿತು ರಾಜ್ಯ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು” ಎಂದು ಮನವಿ ಪತ್ರದಲ್ಲಿ ಪೃಥ್ವಿ ರೆಡ್ಡಿ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಎಎಪಿ ಮುಖಂಡರಾದ ಮೋಹನ್ ದಾಸರಿ, ಬಿ ಟಿ ನಾಗಣ್ಣ ,ಜಗದೀಶ್ ಚಂದ್ರ, ಸುರೇಶ್ ರಾಥೋಡ್, ಕುಶಲ ಸ್ವಾಮಿ, ವಿಜಯ್ ಶಾಸ್ತ್ರಿಮಠ್ ಜೊತೆಯಲ್ಲಿದ್ದರು.