ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ನೀಡಲಾಗಿರುವ ಭಾರತ ರತ್ನ ಪುರಸ್ಕಾರವನ್ನು ಹಿಂಪಡೆಯಬೇಕು ಎಂದು ಶುಕ್ರವಾರ ವಿಧಾನಸಭೆಯಲ್ಲಿ ನಿಲುವಳಿ ಮಂಡಿಸಿ ವಿವಾದಕ್ಕೀಡಾಗಿರುವ ಆಮ್ ಆದ್ಮಿ ಪಕ್ಷ ಶನಿವಾರ ಉಲ್ಟಾ ಹೊಡೆದಿದೆ.
1984 ಸಿಖ್ ದಂಗೆಯಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಈ ಕ್ರಮ ಕೈಗೊಳ್ಳಬೇಕು ಎಂದು ನಿಲುವಳಿಯಲ್ಲಿ ವಿವರಿಸಲಾಗಿದ್ದು, ಇದನ್ನು ತಿಲಕ್‌ನಗರ ಶಾಸಕ ಜರ್ನೈಲ್ ಸಿಂಗ್ ಮಂಡಿಸಿದ್ದರು. ಆದರೆ ಆಪ್ ಶಾಸಕ ಸೋಮನಾಥ್ ಭಾರ್ತಿ ಈ ನಿಲುವಳಿ ಚರ್ಚೆಯ ವೇಳೆ “ಭಾರತ ರತ್ನ’ ವಿಚಾರ ಪ್ರಸ್ತಾಪಿಸಿದ್ದರು. ಮೂಲ ನಿಲುವಳಿಯಲ್ಲಿ ಈ ವಿವರ ಇರಲಿಲ್ಲ. ಹಾಗಾಗಿ ಭಾರತ ರತ್ನ ಕುರಿತು ನಿಲುವಳಿ ಅಂಗೀಕರಿಸಿಲ್ಲ ಎಂದು ಸ್ಪೀಕರ್ ರಾಮ್‌ನಿವಾಸ್ ಗೋಯಲ್ ಹಾಗೂ ಡಿಸಿಎಂ ಸಿಸೋಡಿಯಾ ಶನಿವಾರ ಸ್ಪಷ್ಟನೆ ನೀಡಿದ್ದಾರೆ. ಆದರೆ, ಈ ವಿವಾದದಿಂದಾಗಿ ಆಪ್‌ಗೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಅವಕಾಶವೂ ತಪ್ಪಿಹೋದಂತಾಗಿದೆ.
ಇದೇ ವೇಳೆ, ಭಾರತ ರತ್ನ ವಿಚಾರ ಪ್ರಸ್ತಾಪಿಸಿದ ಭಾರ್ತಿ ಅವರಿಗೆ ಸಿಎಂ ಕೇಜ್ರಿವಾಲ್ “ಯಾಕೆ ನಿಮ್ಮ ವಿರುದ್ಧ ಈ ಬಗ್ಗೆ ಕ್ರಮ ಕೈಗೊಳ್ಳಬಾರದು’ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ, ಇದೇ ಕಾರಣಕ್ಕೆ ಶಾಸಕಿ ಅಲಕಾ ಲಂಬಾ ರಾಜೀನಾಮೆಯನ್ನೂ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ, ನಂತರ ಪಕ್ಷ ಹಾಗೂ ಲಂಬಾ ಅವರು ರಾಜೀನಾಮೆ ವದಂತಿ ತಳ್ಳಿಹಾಕಿದ್ದಾರೆ. ಇತ್ತೀಚೆಗಷ್ಟೇ ಪ್ರತಿಪಕ್ಷಗಳ ಜೊತೆಗೆ ಕೇಜ್ರಿವಾಲ್ ವೇದಿಕೆ ಹಂಚಿಕೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸುತ್ತಾರೆ ಎಂದು ಸುದ್ದಿಯಾಗಿತ್ತು.
ರಾಜೀವ್‌ಗಾಂಧಿಗೆ ನೀಡಲಾಗಿರುವ ಭಾರತ ರತ್ನ ವಾಪಸ್ ಪಡೆಯಬೇಕೆಂದು ಈವರೆಗೆ ಬಿಜೆಪಿ ಕೂಡ ಆಗ್ರಹಿಸಿರಲಿಲ್ಲ. ಕೇಜ್ರಿವಾಲ್ ಕೂಡಲೇ ಕ್ಷಮೆ ಕೋರಬೇಕು.
– ಅಜಯ್ ಮಕೇನ್, ದೆಹಲಿ ಕಾಂಗ್ರೆಸ್ ಅಧ್ಯಕ್ಷ