ಸುರಪುರ: ಆಧಾರ್ ಕಾರ್ಡ್ ಮತ್ತು ಮತದಾರರ ಪಟ್ಟಿಯಲ್ಲಿರುವ ಲೋಪದೋಷ ಸರಿಪಡಿಸಿಕೊಳ್ಳಲು ಜನರಿಗೆ ಸಿಬ್ಬಂದಿ ಸಹಕರಿಸಬೇಕು ಹಾಗೂ ಜನರು ಕೂಡ ತಿದ್ದುಪಡಿಗಾಗಿ ಬೇಕಾದ ದಾಖಲೆ ಸಲ್ಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಜೆಎಂಎಫ್ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಚಿದಾನಂದ ಬಡಗೇರ ಹೇಳಿದರು.
ತಹಶೀಲ್ದಾರ್ ಕಚೇರಿ ಆಧಾರ್ ಕಾರ್ಡ್ ನೋಂದಣಿ ಕೇಂದ್ರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಆಧಾರ್ ಕಾರ್ಡ್ ವಿಶೇಷ ಅಭಿಯಾನದಲ್ಲಿ ಅವರು ಮಾತನಾಡಿದರು.
ಜನರ ದಾಖಲಾತಿಗಳಲ್ಲಿ ಲೋಪದೋಷವಿದ್ದರೆ ಸರ್ಕಾರದ ಯೋಜನೆ ಪಡೆದುಕೊಳ್ಳಲು ತೊಂದರೆಯಾಗುತ್ತದೆ. ಆದ್ದರಿಂದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ತಿದ್ದುಪಡಿ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದು ಮಹತ್ವದ ಕಾರ್ಯವಾಗಿದ್ದು ಚುನಾವಣೆಗಳಲ್ಲಿ ಅವರು ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗುತ್ತದೆ. ಯುವ ಸಮುದಾಯ ತಮ್ಮ ಹೆಸರು, ವಿಳಾಸ ಮತ್ತಿತರ ಮಾಹಿತಿ ಸರಿಯಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು ಎಂದರು.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅಧ್ಯಕ್ಷತೆ ವಹಿಸಿದ್ದರು. ನಂತರ ಸಾರ್ವಜನಿಕರಿಗೆ ಆಧಾರ್ ಕಾರ್ಡ್ ಲೋಪದೋಷ ಸರಿಪಡಿಸಿಕೊಡಲಾಯಿತು. ಅನೇಕರಿಗೆ ಇದೇ ವೇಳೆ ಗುರುತಿನ ಚೀಟಿ ವಿತರಿಸಲಾಯಿತು. ಈ ವೇಳೆ ಎಪಿಪಿ ರಾಘವೇಂದ್ರ ಜಹಗೀರದಾರ್, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ, ಪ್ರಧಾನ ಕಾರ್ಯದರ್ಶಿ ಗೋಪಾಲ ತಳವಾರ, ವಕೀಲರಾದ ಸಂತೋಷ ಗಾರಂಪಳ್ಳಿ, ಆದಪ್ಪ ಹೊಸಮನಿ, ಮಂಜುನಾಥ ಹುದ್ದಾರ, ಆಶೋಕ ಕವಲಿ, ನಾಗಪ್ಪ ಚಾವಲ್ಕರ್ ಸೇರಿದಂತೆ ಇತರರಿದ್ದರು.