ಆಳಂದ: ಕಳೆದ ಎರಡು ತಿಂಗಳಿಂದಲೂ ಹೋಬಳಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ ಸೇವಾ ಕೇಂದ್ರಗಳ ಸೇವಾ ಕಾರ್ಯ ಸ್ಥಗಿತವಾಗಿದ್ದರಿಂದ ಆಧಾರ ಕಾರ್ಡ್ ತಿದ್ದುಪಡಿ, ಅಪ್‌ಡೇಟ್‌ಗಾಗಿ ಸಾರ್ವಜನಿಕರು ಪಟ್ಟಣದ ಖಾಸಗಿ ಸೇವಾ ಕೇಂದ್ರಗಳ ಎದುರು ದಿನವಿಡಿ ಸರತಿಸಾಲಿನಲ್ಲಿ ನಿಲ್ಲುವಂತಾಗಿದೆ.
ಕಂದಾಯ ಇಲಾಖೆ ಸ್ವಾಧಿಧೀನದ ಹೋಬಳಿ ಕೇಂದ್ರ ಆಳಂದ, ಖಜೂರಿ, ನಿಂಬರ್ಗಾ, ಮಾದನಹಿಪ್ಪರಗಾ, ನರೋಣಾ ನಾಡ ಕಚೇರಿಗಳಲ್ಲಿ ಆಧಾರ ಸೇವಾ ಕೇಂದ್ರಗಳು ಕಳೆದ ಎರಡು ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲ.
ಸಕಾಲಕ್ಕೆ ಆಧಾರ ಸರಿಪಡಿಸದೇ ಇರುವುದು ಸರ್ಕಾರಿ ಸೌಲಭ್ಯ ಸೇರಿದಂತೆ ಇನ್ನುಳಿದ ಕೆಲಸಕ್ಕೆ ಅಡಚಣಿ ಎದುರಾಗಿದೆ. ನಮ್ಮನ್ನು ಸೌಲಭ್ಯಗಳಿಂದ ವಂಚಿತವನ್ನಾಗಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಸದ್ಯ ಬ್ಯಾಂಕ್ ಖಾತೆ ತೆರೆಯಲು, ರೇಷನ್ ಕಾರ್ಡ್‌ಗೆ ಹೊಂದಾಣಿಕೆ ಸೇರಿದಂತೆ ಅಗತ್ಯ ದಾಖಲೆ ಪಡೆಯಲು, ಸರ್ಕಾರಿ ವ್ಯವಹಾರಕ್ಕೆ ಆಧಾರ ಕಾರ್ಡ್ ಕಡ್ಡಾಯವಾಗಿ ಕೇಳಲಾಗುತ್ತಿದೆ. ಆದರೆ, ಸಾರ್ವಜನಿಕರಿಗೆ ಸಕಾಲಕ್ಕೆ ಸರಿಪಡಿಸಿದ ಆಧಾರ ಕಾರ್ಡ್ ಸಲ್ಲಿಕೆ ವಿಳಂಬ ಆಗುತ್ತಿದೆ. ಹೀಗಿದ್ದರೂ ಸಾರ್ವಜನಿಕರು ತಮ್ಮ ಆಧಾರ ಕಾರ್ಡ್ ಸರಿಪಡಿಸಿಕೊಳ್ಳಲು ಮುಂದಾಗಿ ಆಧಾರ ಸೇವಾ ಕೇಂದ್ರಗಳಿಗೆ ಹೋದರೆ ಕಳೆದ ಎರಡು ತಿಂಗಳಿಂದಲೂ ಸೇವಾ ಕಾರ್ಯ ನಡೆಯದೇ ಇರುವುದರಿಂದ ಬೇಸತ್ತು ಪರವಾನಗಿ ಪಡೆದ ಖಾಸಗಿ ಸೇವಾ ಕೇಂದ್ರಗಳ ಮೊರೆ ಹೋಗಿ, ದಿನವಿಡಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಸದ್ಯ ಪಟ್ಟಣದ ಎಸ್‌ಬಿಐ ಶಾಖೆಯಲ್ಲಿ ಆಧಾರ ಸೇವಾ ಕೇಂದ್ರ ಹೊರತುಪಡಿಸಿ ನಾಡ ಕಚೇರಿ ಸೇರಿದಂತೆ ಇನ್ನುಳಿದ ಖಾಸಗಿ ಸೇವಾ ಕೇಂದ್ರಗಳಿಗೂ ಸರ್ಕಾರ ತಡೆ ನೀಡಿದ್ದರಿಂದ ಸದ್ಯ ಪಟ್ಟಣದ ಏಕೈಕ ಸೇವಾ ಕೇಂದ್ರವಾಗಿ ಎಸ್‌ಬಿಐ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಎಲ್ಲ ಭಾಗಗಳಿಂದ ಜನ ಬರುತ್ತಿರುವುದರಿಂದ ದಟ್ಟಣೆ ಉಂಟಾಗಿದೆ. ಅಲ್ಲದೇ ಸರ್ವರ್‌ನ ತಾಂತ್ರಿಕ ಅಡೆತಡೆಯಿಂದ ದಿನಕ್ಕೆ 20 ಕಾರ್ಡ್‌ಗಳನ್ನು ಮಾತ್ರ ಸರಿಪಡಿಸಿಕೊಡಲು ಸಾಧ್ಯವಿದೆ
ಎನ್ನುತ್ತಾರೆ ಸೇವಾಕೇಂದ್ರದ ಸಿಬ್ಬಂದಿ.
ಬ್ಯಾಂಕ್ ಖಾತೆ, ರೇಷನ್ ಕಾರ್ಡ್, ಮಾಸಾಶನ, ಜಮೀನು ಸರ್ವೇ, ಮಕ್ಕಳ ಶಿಷ್ಯ ವೇತನ ಪಡೆಯಲು ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬ ನಾಗರಿಕರಿಗೂ ಆಧಾರ ಕಾರ್ಡ್ ಎಲ್ಲದಕ್ಕೂ ಆಧಾರ ಸ್ತಂಭವಾಗಿದೆ. ಆದರೆ ಜನರಿಗೆ ಸಕಾಲಕ್ಕೆ ಮಾರ್ಪಡಿತ ಆಧಾರ ಕಾರ್ಡ್ ನೀಡುವ ಸೇವಾ ಕೇಂದ್ರಗಳೇ ಬಾಗಿಲು ಮುಚ್ಚಿದ್ದು, ಜನತೆ ಪರದಾಡುವಂತೆ ಆಗಿದೆ.
ಮೂಲಗಳ ಪ್ರಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆಧಾರ ನೋಂದಣಿ ಕೈಗೊಳ್ಳುವ ಕುರಿತು ಗ್ರಾಪಂ ಸಿಬ್ಬಂದಿಗೆ ತರಬೇತಿ ನೀಡಿ ಆಧಾರ ತಿದ್ದುಪಡಿಗೆ ಅವಕಾಶ ನೀಡಲಾಗುವುದು ಎಂದು ಒಂದು ತಿಂಗಳ ಹಿಂದೆಯೇ ಸರ್ಕಾರ ಆದೇಶ ನೀಡಿತ್ತು. ಆದರೆ ಈ ಕಾರ್ಯ ಇನ್ನೂ ಚಾಲ್ತಿಗೆ ಬಂದಿಲ್ಲ.
ನಿಂಬರ್ಗಾ ನಾಡಕಚೇರಿಯಲ್ಲಿನ ಆಧಾರ ನೋಂದಣಿ ಕೇಂದ್ರದಲ್ಲಿ ಸುಮಾರು ಎರಡು ತಿಂಗಳಿಂದಲೂ ಯಾವುದೇ ಕೆಲಸ-ಕಾರ್ಯ ನಡೆಯುತ್ತಿಲ್ಲ. ಖಾಸಗಿ ಕೇಂದ್ರಕ್ಕೆ ಅನುಮತಿ ನೀಡಿಲ್ಲ. ಹೀಗೆ ಸಾರ್ವಜನಿಕರು ಕಲಬುರಗಿ ಸೇರಿದಂತೆ ಇನ್ನುಳಿದ ಕಡೆ ಹೋಗಿ ಹೆಚ್ಚಿನ ಹಣ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನಾಡಕಚೇರಿಯಲ್ಲಿ ಇನ್‌ವರ್ಟರ್ ಇಲ್ಲ. ವಿದ್ಯುತ್ ಕಡಿತವಾದರೆ ಕೆಲಸ ಬಂದ್ ಆಗಿ ಜನರು ದಿನವಿಡಿ ಸರಣಿಯಲ್ಲೇ ನಿಲ್ಲುವಂತಾಗಿದೆ. ಅನೇಕರ ಆಧಾರ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಹೊಂದಾಣಿಕೆ ವಿಳಂಬವಾಗಿದೆ. ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಹಣ ಬರುತ್ತಿಲ್ಲ. ಕಾರ್ಮಿಕರ ಕಾರ್ಡ್ ಹೊಸದಾಗಿ ಮಾಡಿಕೊಳ್ಳುವರಿಗೆ ಆಧಾರಗೆ ಮೊಬೈಲ್ ಸಂಖ್ಯೆ ಬೇಕು. ಆದರೆ ಸೇವಾ ಕೇಂದ್ರ ಮುಚ್ಚಿದ್ದರಿಂದ ಜನಸಾಮಾನ್ಯರಿಗೆ ಸರ್ಕಾಲಕ್ಕೆ ಮಾರ್ಪಡಿತ ಆಧಾರ ಸಿಗದೇ ತೊಂದರೆ ಪಡುವಂತೆ ಆಗಿದೆ.
ಬಸವರಾಜ ಯಳಸಂಗಿ, ಕರವೇ ಅಧ್ಯಕ್ಷ, ನಿಂಬರಗಾ
ಆಳಂದ, ನರೋಣಾ, ಮಾದನಹಿಪ್ಪರಗಾ ನಾಡಕಚೇರಿಯಲ್ಲಿ ಸೇವಾ ಕೇಂದ್ರದ ಹಳೆಯ ಸಿಬ್ಬಂದಿ ತೆಗೆದು ಹೊಸಬರ ನೇಮಕ ಮಾಡಿದ್ದರಿಂದ ಕಾರ್ಯ ಕೈಗೊಳ್ಳಲು ವಿಳಂಬವಾಗಿದೆ. ಖಜೂರಿ ಮತ್ತು ನಿಂಬರ್ಗಾದಲ್ಲಿ ತೊಂದರೆಯಿಲ್ಲ. ಶೀಘ್ರವೇ ಕಾರ್ಯ ಆರಂಭಿಸಲಾಗುವುದು.
ಯಲ್ಲಪ್ಪ ಸುಬೇದಾರ, ತಹಶೀಲ್ದಾರ್
*ಮಹಾದೇವ ವಡಗಾಂವ