Advertisement
2017ರ ಅಂತ್ಯದವರೆಗೆ ಅಂದಾಜು ಜನಸಂಖ್ಯೆಗೆ ಅನುಗುಣವಾಗಿ ಆಧಾರ್ ನೋಂದಣಿಯಲ್ಲಿ ಪ್ರಸ್ತುತ ವಿಜಯಪುರ ಮೊದಲ ಸ್ಥಾನದಲ್ಲಿ (ಶೇ.102.8), ತುಮಕೂರು ಎರಡನೇ ಸ್ಥಾನದಲ್ಲಿ (ಶೇ.101.7) ಇದೆ. ಅನಂತರದ ಸ್ಥಾನ ಉಡುಪಿಯದ್ದು (ಶೇ.101). ಪಟ್ಟಿಯಲ್ಲಿ ಬೆಂಗಳೂರು ಶೇ.89.9ರಷ್ಟು ಮಾತ್ರ ಸಾಧನೆ ಮಾಡಿ ಕೊನೆಯ ಸ್ಥಾನದಲ್ಲಿದೆ. ದ.ಕ ಜಿಲ್ಲೆಯಲ್ಲಿ ಶೇ.96.5 ಆಧಾರ್ ನೋಂದಣಿ ನಡೆದಿದೆ. ರಾಜ್ಯದ ಸರಾಸರಿ ಆಧಾರ್ ನೋಂದಣಿ ಪ್ರಮಾಣ ಶೇ.96 ಎಂಬ ಮಾಹಿತಿ ಲಭ್ಯವಾಗಿದೆ.
ಆಧಾರ್ ನೋಂದಣಿಗೆ ಇದ್ದ ರಶ್ ಈಗ ಕಡಿಮೆಯಾಗಿದೆ. ಆದರೆ ತಿದ್ದುಪಡಿಗಾಗಿ ಧಾವಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿ ವಿವಿಧ ಆಧಾರ್ ಕೇಂದ್ರಗಳಲ್ಲಿ(ನಾಡ ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿಯ ಸ್ಪಂದನ ಕೇಂದ್ರ) ದಿನಕ್ಕೆ ಸರಾಸರಿ ಒಟ್ಟು 500ಕ್ಕೂ ಅಧಿಕ ಅರ್ಜಿಗಳು ತಿದ್ದುಪಡಿಗಾಗಿ ಬರುತ್ತಿವೆ ! ಕಾರಣವೇನು?
ಮುದ್ರಿತ ಆಧಾರ್‌ನ ದೋಷದಲ್ಲಿ ಮೊದಲನೆಯದ್ದು ಮೊಬೈಲ್ ಸಂಖ್ಯೆ. ಈ ಹಿಂದೆ ಆಧಾರ್ ನೋಂದಣಿ ಮಾಡುವಾಗ ಆಧಾರ್ ಹೊಂದುವವ ರದ್ದೇ ಮೊಬೈಲ್ ಸಂಖ್ಯೆ ನೀಡಬೇಕೆಂಬ ನಿಯಮವಿರಲಿಲ್ಲ. ಮನೆಮಂದಿಯಲ್ಲಿ ಯಾರಾದರೊಬ್ಬರದ್ದು ನೀಡಿದರೆ ಸಾಕಾಗುತ್ತಿತ್ತು. ಆದರೆ ಈಗ ಬ್ಯಾಂಕ್ ಖಾತೆ, ಪಾನ್‌ಕಾರ್ಡ್, ರೇಷನ್ ಅಂಗಡಿಗಳಲ್ಲಿ ಆಧಾರ್ ಜತೆ ಆ ಮೊಬೈಲ್ ಸಂಖ್ಯೆ ಹೊಂದಾಣಿಕೆಯಾಗುತ್ತಿಲ್ಲ, ಓಟಿಪಿ (ಒನ್ ಟೈಮ್ ಪಾಸ್‌ವರ್ಡ್) ಸಿಗುತ್ತಿಲ್ಲ. ಯಾರು ಖಾತೆ ತೆರೆಯುತ್ತಾರೋ, ಪಾನ್‌ಕಾರ್ಡ್ ಮಾಡಿಸುತ್ತಾರೋ ಅವರದ್ದೇ ಮೊಬೈಲ್ ಆಧಾರ್‌ನಲ್ಲಿರಬೇಕಾಗಿದೆ. ಹಾಗಾಗಿ ಮೊಬೈಲ್ ಸಂಖ್ಯೆ ಬದಲಾವಣೆ ಬೇಡಿಕೆ ಅಧಿಕ. ಅನಂತರ ವಿಳಾಸ ಹಾಗೂ ಹೆಸರು ಇತರ ತಿದ್ದುಪಡಿಗಳು.
Related Articles
ಉಡುಪಿ ಜಿಲ್ಲೆಯಲ್ಲಿ ಆಧಾರ್‌ಗಿಂತ ಮೊದಲು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದ ಎನ್‌ಪಿಆರ್‌ಗೆ (ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟ್ರೇಷನ್) ನೀಡಲಾಗಿದ್ದ ಮಾಹಿತಿಯನ್ನೇ ಆಧಾರ್‌ಗೆ ಸೇರಿಸಿಕೊಳ್ಳಲಾಗಿದೆ. ಈ ಹಂತದಲ್ಲಿ ಪ್ರಮಾದ ಆಗಿರುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಈಗ ಆಧಾರ್ ತಿದ್ದುಪಡಿ ಪ್ರಮಾಣ ಹೆಚ್ಚಾಗಿದೆ ಎಂದು ಕೂಡ ಹೇಳಲಾಗುತ್ತಿದೆ.
Advertisement
ಬ್ಯಾಂಕ್‌ಗಳ ನಿರಾಸಕ್ತಿ?ಉಡುಪಿ ಜಿಲ್ಲೆಯ 31 ಬ್ಯಾಂಕ್‌ಗಳಿಗೆ ಆಧಾರ್ ನೋಂದಣಿ ಕೇಂದ್ರ ಆರಂಭಿಸಲು ಸೂಚಿಸಲಾಗಿತ್ತು. ಆದರೆ ಇದರಲ್ಲಿ ಎಸ್‌ಬಿಐ ಮಾತ್ರ 2 ಕೇಂದ್ರಗಳನ್ನು ಆರಂಭಿಸಿದೆ. ಜತೆಗೆ 34 ಅಂಚೆ ಕಚೇರಿಗಳಿಗೆ ಆಧಾರ್ ಸೇವೆ ಒದಗಿಸಲು ಸೂಚಿಸಲಾಗಿತ್ತಾದರೂ ಕೇವಲ 12ರಲ್ಲಿ ಮಾತ್ರ ಆಧಾರ್ ತಿದ್ದುಪಡಿ ಕೆಲಸ ಆಗುತ್ತಿವೆ. ಉಳಿದ ಅಂಚೆ ಕಚೇರಿಗಳಿಗೆ ಇನ್ನೂ ಆಧಾರ್ ಕಿಟ್ ಬಂದಿಲ್ಲ. ತಾಲೂಕು ಕಚೇರಿಗಳು, ನಾಡಕಚೇರಿಗಳಲ್ಲಿ ಆಧಾರ್ ತಿದ್ದುಪಡಿ ಮತ್ತು ನೋಂದಣಿ ನಡೆಯುತ್ತಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಪಂದನ ಕೇಂದ್ರದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ನಡೆಯುತ್ತಿದೆ. ಇಲ್ಲಿ ಒಬ್ಬನೇ ಸಿಬಂದಿ ಇದ್ದು ತಾತ್ಕಾಲಿಕವಾಗಿ ಜಿಲ್ಲಾಡಳಿತ ಇನ್ನೋರ್ವ ಸಿಬಂದಿಯನ್ನು ಒದಗಿಸಿದೆ. ಇವರು ರಾತ್ರಿಯವರೆಗೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ದಿನಕ್ಕೆ 70 ಮಾತ್ರ ಸಾಧ್ಯವಿದೆ. ಮಾರ್ಚ್ ವರೆಗೆ ಆಧಾರ್ ನೋಂದಣಿಗಾಗಿ ಈಗಾಗಲೇ ಸುಮಾರು 3,000ದಷ್ಟು ಮಂದಿ ಟೋಕನ್ ಪಡೆದುಕೊಂಡಿದ್ದಾರೆ. ಹಾಗಾಗಿ ಇಲ್ಲಿ ಉಳಿದವರು ಮಾರ್ಚ್‌ವರೆಗೆ ನೋಂದಣಿ/ ತಿದ್ದುಪಡಿ ಮಾಡುವುದು ಕಷ್ಟ. ತಾಲೂಕು ಮಟ್ಟದ ಅದಾಲತ್ ಬೇಡಿಕೆ
ಆಧಾರ್ ಅದಾಲತ್ ಅನ್ನು ತಾಲೂಕು ಮಟ್ಟದಲ್ಲಿ ಪ್ರತಿ ತಿಂಗಳು ನಡೆಸಬೇಕೆಂಬ ಬೇಡಿಕೆ ಸಾರ್ವಜನಿಕ ರದ್ದು. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಕೂಡ ಅದಾಲತ್ ಅನ್ನು ತಾಲೂಕು ಮಟ್ಟದಲ್ಲಿ ಪ್ರತಿ ತಿಂಗಳು ಮಾಡಬೇಕೆಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜರಗಿದ್ದ ಅದಾಲತ್‌ಅನ್ನು ಭಾರೀ ಬೇಡಿಕೆ ಹಿನ್ನೆಲೆಯಲ್ಲಿ 1 ದಿನ ವಿಸ್ತರಿಸಲಾಗಿತ್ತು. ಒಟ್ಟು 1,404 ಮಂದಿ ಭೇಟಿ ನೀಡಿದ್ದರು. ಇದರಲ್ಲಿ ಹೊಸ ನೋಂದಣಿ 284 ಮತ್ತು ಉಳಿದದ್ದು ತಿದ್ದುಪಡಿ. ಆಧಾರ್ ತಿದ್ದುಪಡಿ ಬೇಡಿಕೆಯನ್ನು ಪೂರೈಸಲು ಮತ್ತು ಈಗ ಇರುವ ಸೀಮಿತ ಸಂಖ್ಯೆಯ ತಿದ್ದುಪಡಿ ಕೇಂದ್ರಗಳ ಮೇಲಿನ ಒತ್ತಡ ಕಡಿಮೆ ಮಾಡು ವಲ್ಲಿ ತುರ್ತು ಕ್ರಮದ ಆವಶ್ಯಕತೆ ಇದೆ. ಶೇ.ಪ್ರಮಾಣ ಹೆಚ್ಚಳಯಾಕೆ?
ಆಧಾರ್ ನೋಂದಣಿ ಶೇ.100 ಕ್ಕಿಂತ ಹೆಚ್ಚಾಗಿರಲು ಕಾರಣ ವೆಂದರೆ ಬೇರೆ ಜಿಲ್ಲೆಯವರು ಕೂಡ ಇನ್ನೊಂದು ಜಿಲ್ಲೆಯಲ್ಲಿ ನೋಂದಣಿ ಮಾಡಿಸಿರುವುದು.ಉದಾಹರಣೆಗೆ ಉಡುಪಿ ಮತ್ತು ವಿಜಾಪುರದಲ್ಲಿ ಬೇರೆ ಜಿಲ್ಲೆಯವರು ಹೆಚ್ಚಿದ್ದಾರೆ. ಹಾಗಾಗಿ ಜಿಲ್ಲೆಯ ಜನಸಂಖ್ಯೆಗೆ(ಸ್ಥಳೀಯರು) ಹೋಲಿಸಿದರೆ ಇದುವರೆಗಿನ ಆಧಾರ್ ನೋಂದಣಿ ಪ್ರಮಾಣ ಸಂಖ್ಯೆ ಹೆಚ್ಚಳ ತೋರಿಸುತ್ತದೆ. ನೋಂದಣಿಗೆ ಒತ್ತಡವಿಲ್ಲ. ತಿದ್ದು ಪಡಿಗೆ ನೂರಾರು ಮಂದಿ ಬರುತ್ತಲೇ ಇದ್ದಾರೆ ಎನ್ನುತ್ತಾರೆ ಅಧಿಕಾರಿಗಳು. ಜೈಲುಗಳಿಗೂ ಹೋಗಿದ್ದರು!
ಉಡುಪಿಯಲ್ಲಿ ಆಧಾರ್ ನೋಂದಣಿಗಾಗಿ ಅಧಿಕಾರಿಗಳು ದೈಹಿಕ ಮತ್ತು ಮಾನಸಿಕವಾಗಿ ಅಸಮರ್ಥರಾದವರ ಮನೆಗೆ ತೆರಳಿದ್ದರು. ಹಿರಿಯಡಕ ಕಾರಾಗೃಹದ 21 ಮಂದಿ ಕೈದಿಗಳಿಗೂ ಆಧಾರ್ ಕಾರ್ಡ್ ಒದಗಿಸಿಕೊಟ್ಟಿದ್ದರು. ಜಿಲ್ಲೆಯ 49 ಅಂಗನವಾಡಿ ಸೂಪರ್‌ವೈಸರ್‌ಗಳಿಗೆ ಟ್ಯಾಬ್ ಒದಗಿಸಿ ಆ ಮೂಲಕ 0-5 ವರ್ಷದ 20,000 ಮಕ್ಕಳ ಆಧಾರ್ ನೋಂದಣಿ ಮಾಡಿಸಿದ್ದರು ! – ಸಂತೋಷ್ ಬೊಳ್ಳೆಟ್ಟು