Advertisement
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಸೇರಿ ರಾಜ್ಯದ ಎಲ್ಲ ಪಡಿತರ ಚೀಟಿದಾರ ಕುಟುಂಬ ಸದಸ್ಯರ “ಆಧಾರ್ ಜೋಡಣೆ’ ಆಗಿದೆ. ಈಗ ಜೋಡಣೆಯಾದ ಆಧಾರ ಸಂಖ್ಯೆ, ಅದೇ ವ್ಯಕ್ತಿಯದ್ದೇ ಎಂದು ಖಾತರಿಪಡಿಸಿಕೊಳ್ಳಲು ಇ-ಕೆವೈಸಿ (ನೊ ಯುವರ್ ಕಸ್ಟಮರ್) ಮೂಲಕ ಆಧಾರ್ ದೃಢೀಕರಣ ಪ್ರಕ್ರಿಯೆ ನಡೆಸಲಾಗುತ್ತಿದೆ.
Related Articles
Advertisement
ಇದಕ್ಕಾಗಿ ರಾಜ್ಯ ಸರ್ಕಾರ ವರ್ಷಕ್ಕೆ 70 ರಿಂದ 80 ಕೋಟಿ ರೂ. ಖರ್ಚು ಮಾಡುತ್ತದೆ. ಒಂದೊಮ್ಮೆ ಇ-ಕೆವೈಸಿ ಮೂಲಕ ಎಲ್ಲ ಫಲಾನುಭವಿಗಳ ಆಧಾರ್ ದೃಢೀಕರಣವಾದರೆ ಗಣನೀಯ ಪ್ರಮಾಣದಲ್ಲಿ ಪಡಿತರ ಉಳಿತಾಯ ಆಗುವುದರ ಜೊತೆಗೆ ಕೋಟ್ಯಂತರ ರೂ. ಹಣ ಸಹ ಉಳಿತಾಯ ಆಗಲಿದೆ. ಇದರಿಂದ ರಾಜ್ಯದ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗಲಿದೆ ಅನ್ನುವುದು ಆಹಾರ ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರ.
ಏನಿದು ಇ-ಕೆವೈಸಿ?: ಆನ್‌ಲೈನ್ ತಂತ್ರಜ್ಞಾನದ ಮೂಲಕ ಗ್ರಾಹಕರು, ಫಲಾನುಭವಿಗಳನ್ನು ಗುರುತು ಖಾತರಿಪಡಿಸಿಕೊಳ್ಳುವ ವ್ಯವಸ್ಥೆಗೆ (ಇ-ಕೆವೈಸಿ) ಎಂದು ಹೇಳಲಾಗುತ್ತದೆ. ರಾಜ್ಯದಲ್ಲಿ ಪಡಿತರ ಚೀಟಿಗಳ ಆಧಾರ್ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಈಗ ಆಧಾರ್ ಜೋಡಣೆಯಾಗಿರುವ ಪಡಿತರ ಚೀಟಿಯ ಸಾಚಾತನ ಮತ್ತು ಪಡಿತರ ಚೀಟಿಯಲ್ಲಿರುವ ಫಲಾನುಭವಿ ಅಥವಾ ಪಡಿತರ ಚೀಟಿದಾರರ ಹೆಸರು ಜೋಡಣೆಯಾದ ಆಧಾರ್ ಕಾರ್ಡ್ ಸಂಖ್ಯೆಗೆ ತಾಳೆ ಆಗುತ್ತದೆಯೋ ಇಲ್ಲವೋ ಎಂದು ಖಾತರಿಪಡಿಸಿಕೊಳ್ಳಲು ಇ-ಕೆವೈಸಿ ಮೂಲಕ ಆಧಾರ್ ದೃಢೀಕರಣ ಮಾಡಲಾಗುತ್ತದೆ.
ಸದ್ಯ ಇ-ಕೆವೈಸಿ ಸ್ಥಗಿತ: ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ಪಡಿತರ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬರೂ ಆಧಾರ್ ದೃಢೀಕರಣ ಮಾಡಿಸಬೇಕೆಂದು, ಅದರಂತೆ ರಾಜ್ಯದ ಪಡಿತರ ಚೀಟಿದಾರ ಕುಟುಂಬ ಸದಸ್ಯರ ಇ-ಕೆವೈಸಿಯನ್ನು (ಆಧಾರ್ ದೃಢೀಕರಣ) ನ್ಯಾಯಾಬೆಲೆ ಅಂಗಡಿ ಹಂತದಲ್ಲಿ ಆನ್‌ಲೈನ್ ಮೂಲಕ ಜೂ.1ರಿಂದ ಸಂಗ್ರಹಿಸಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ನೋಂದಣಿ ಆರಂಭವಾಗಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಲ್ಲಿವರೆಗೆ 25 ಲಕ್ಷ ಫಲಾನುಭವಿಗಳ ಆಧಾರ್ ದೃಢೀಕರಣ ಆಗಿದ್ದು, ಸುಮಾರು 4 ಕೋಟಿ ಫಲಾನುಭವಿಗಳ ಆಧಾರ್ ದೃಢೀಕರಣ ಆಗಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ರಫೀಕ್ ಅಹ್ಮದ್